ಸೋಮವಾರ, ಆಗಸ್ಟ್ 3, 2020
25 °C

ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ

ಚಾಮರಾಜನಗರ: ‘ಆಶಾ ಕಾರ್ಯಕರ್ತೆ ಯರು ಗ್ರಾಮೀಣ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡು ಆರೋಗ್ಯ ಇಲಾಖೆ ಹಾಗೂ ಸಮುದಾಯದ ನಡುವೆ ಸೇತುವೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಎಂ.ಸಿ. ಮೋಹನಕುಮಾರಿ ಹೇಳಿದರು.

ನಗರದ ವಾಲ್ಮೀಕಿ ಭವನದಲ್ಲಿ ಶನಿವಾರ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಎಐಟಿಯುಸಿಯಿಂದ ನಡೆದ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ತಾಯಿ ಮಗುವಿನ ಆರೋಗ್ಯ, ಗರ್ಭಿಣಿಯರ ನೋಂದಣಿ, ರಕ್ತಹೀನತೆ ತಡೆಗಟ್ಟುವಿಕೆ, ಬಾಣಂತಿಯರಿಗೆ ಆಸ್ಪತ್ರೆ ಸೇವೆ ನೀಡಲು ಸಹಾಯ ಮಾಡುವುದು ಸೇರಿದಂತೆ ಆರೋಗ್ಯ ಇಲಾಖೆ ವ್ಯಾಪ್ತಿಯ 34 ಸೇವೆಗಳನ್ನು ಜನರಿಗೆ ತಲುಪಿಸಲು ಆಶಾ ಕಾರ್ಯಕರ್ತೆಯರು ಸಹಕಾರಿಯಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 807 ಆಶಾ ಕಾರ್ಯಕರ್ತೆ ಯರು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ನವೆಂಬರ್‌ 2017ರವರೆಗೆ ಈ ಪೈಕಿ ಕೇಂದ್ರ ಸರ್ಕಾರದಿಂದ ₹ 1.13 ಕೋಟಿ, ರಾಜ್ಯ ಸರ್ಕಾರದಿಂದ ₹ 1.92 ಕೋಟಿ ಸೇರಿದಂತೆ ಒಟ್ಟು ₹ 3.10 ಕೋಟಿ ವೇತನ ನೀಡಲಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಮಾತ್ರ ಆಶಾ ಕಾರ್ಯಕರ್ತೆಯರಿಗೆ ₹ 3,500 ವೇತನ ನಿಗದಿಪಡಿಸಿದೆ ಎಂದು ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್‌ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2005ರಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಆರಂಭವಾಯಿತು. ಇವರ ಸಹಕಾರದಿಂದ ಆರೋಗ್ಯ ಸೇವೆಯನ್ನು ಗ್ರಾಮೀಣರು, ಗುಡ್ಡಗಾಡು ಪ್ರದೇಶ ಗಳಿಗೂ ತಲುಪಿಸಲು ಸಾಧ್ಯವಾಗಿದೆ ಎಂದರು.

ಜಿಲ್ಲೆಯು ಶೇ 40 ರಿಂದ 50ರಷ್ಟು ಅರಣ್ಯ ಪ್ರದೇಶದಿಂದ ಕೂಡಿದ್ದು, ಕಾಡಂಚಿನ ಪ್ರದೇಶಗಳಾದ ಬೇಡಗುಳಿ, ಗೋಪಿನಾಥಂ ಸೇರಿದಂತೆ ಇತರೆ ಪ್ರದೇಶದಲ್ಲಿ ಕಾರ್ಯಕರ್ತೆಯರು ಇಲ್ಲ. ಹಾಗಾಗಿ, ಈ ಪ್ರದೇಶದಲ್ಲಿ ಕಡಿಮೆ ವಿದ್ಯಾರ್ಹತೆ ಇದ್ದವರಿಗೂ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಎಐಟಿಯುಸಿ ರಾಜ್ಯ ಕಾರ್ಯ ದರ್ಶಿ ಡಿ. ನಾಗಲಕ್ಷ್ಮಿ ಮಾತನಾಡಿ, ಆಶಾ ಕಾರ್ಯಕರ್ತೆಯರ ವೇತನ ನಿಗದಿಪಡಿಸಬೇಕು ಎಂದು 2017ರ ಸೆ. 7 ಮತ್ತು 8ರಂದು ಬೆಂಗಳೂರಿನಲ್ಲಿ ನಡೆಸಿದ ಹೋರಾಟದ ಯಶಸ್ಸಿಗೆ ಕಾರಣರಾದ ಕಾರ್ಯಕರ್ತೆಯರನ್ನು ಅಭಿನಂದಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಸಮಾವೇಶ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ನಮ್ಮ ಹೋರಾಟಕ್ಕೆ ಸ್ಪಂದಿಸಿ ವೇತನ ನಿಗದಿಪಡಿಸಿರುವುದು ಶ್ಲಾಘನೀಯ. ಮುಂದಿನ ರಾಜ್ಯ ಬಜೆಟ್‌ನಲ್ಲಿ ವೇತನವನ್ನು ₹ 6,000 ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು. ಸಮಾವೇಶದಲ್ಲಿ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಂ.ಶಶಿಧರ್, ಜಿಲ್ಲಾ ಸಂಚಾಲಕ ಚಂದ್ರಶೇಖರ್‌ ಮೇಟಿ, ಜಿಲ್ಲಾ ಘಟಕದ ಅಧ್ಯಕ್ಷೆ ಕವಿತಾ ಹಾಜರಿದ್ದರು.

* * 

ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಸಮಾಲೋಚನೆ ನಡೆಸಲಾಗುವುದು ಡಾ.ಎಂ.ಸಿ.ಮೋಹನಕುಮಾರಿ

ಜಿಲ್ಲಾ ಉಸ್ತುವಾರಿ ಸಚಿವೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.