ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನ್ನ ದೇಹ ಡೀಸೆಲ್‌ ಎಂಜಿನ್‌’

Last Updated 7 ಜನವರಿ 2018, 19:30 IST
ಅಕ್ಷರ ಗಾತ್ರ

ಲಿವುಡ್‌ನ ಬಾಯಿಜಾನ್‌ ಸಲ್ಮಾನ್‌ ಖಾನ್‌ ಇತ್ತೀಚೆಗಷ್ಟೇ ತಮ್ಮ 52ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅದೇ ಸಂದರ್ಭದಲ್ಲಿ ತಮ್ಮ ಚಿತ್ರ ‘ಟೈಗರ್‌ ಜಿಂದಾ ಹೈ’ ಯಶಸ್ಸಿನತ್ತ ಮುನ್ನುಗ್ಗುತ್ತಿರುವ ಖುಷಿಯಲ್ಲಿ ಪಾರ್ಟಿಯನ್ನೂ ಅವರು ಏರ್ಪಾಡು ಮಾಡಿದ್ದರು. ಚಿತ್ರದ ಅನೇಕ ಆಕ್ಷನ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಸಲ್ಮಾನ್‌ ‘ನನ್ನ ದೇಹ ಡೀಸೆಲ್‌ ಎಂಜಿನ್‌ ಇದ್ದ ಹಾಗೆ. ಒಂದು ಸಲ ಬಿಸಿ ಆದರೆ ಚಲಿಸುತ್ತಲೇ ಇರುತ್ತದೆ’ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

‘ಫಿಟ್‌ನೆಸ್‌ಗಾಗಿ ಸಾಕಷ್ಟು ಕಸರತ್ತು ಮಾಡುತ್ತೇನೆ. ಕೈಮೇಲೆ ನಿಲ್ಲುವುದೊಂದು ನನ್ನಿಂದ ಸಾಧ್ಯವಿಲ್ಲದಿರಬಹುದು. ನನ್ನ ಫಿಟ್‌ನೆಸ್‌ ಮಟ್ಟವನ್ನು ಪರೀಕ್ಷೆ ಮಾಡುವಂಥ ಸಿನಿಮಾಗಳಲ್ಲಿಯೇ ಹೆಚ್ಚೆಚ್ಚು ನಟಿಸಲು ಪ್ರಯತ್ನಿಸುತ್ತೇನೆ. ಇದುವರೆಗೆ ಪ್ರೀತಿಗೆ ಸಂಬಂಧಿಸಿದ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇನೆ. ಆದರೆ ಈಗ ಅಭಿನಯಕ್ಕೆ ಅವಕಾಶವಿರುವ ವಿಭಿನ್ನ ಪಾತ್ರಗಳು, ದೈಹಿಕ ಸಾಮರ್ಥ್ಯ ಬೇಡುವ ಚಿತ್ರಗಳ ಭಾಗವಾಗಬೇಕು ಎನಿಸುತ್ತಿದೆ. ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳುವುದು, ಕಳೆದುಕೊಳ್ಳುವುದು, ಅದಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗುವುದು ದೇಹಕ್ಕೆ ಮಾರಕ ಎಂಬುದು ನನಗೆ ಗೊತ್ತು. ಆದರೆ ಅಂಥ ಪಾತ್ರಗಳ ನಿರ್ವಹಣೆ ಮನಸ್ಸಿಗೆ ಹೆಚ್ಚು ತೃಪ್ತಿ ನೀಡುತ್ತದೆ’ ಎಂದು ಹೇಳಿಕೊಂಡಿದ್ದಾರೆ.

ಸಲ್ಮಾನ್‌ ಫಿಟ್‌ನೆಸ್‌ ಗುಟ್ಟು

ಸಲ್ಮಾನ್‌ ಅವರ ಕಟ್ಟುಮಸ್ತಾದ ದೇಹಸಿರಿಯು ತೆರೆಯ ಮೇಲೆ ಇಂಚಿಂಚಾಗಿ ಕಾಣಿಸುತ್ತಿದ್ದರೆ ಸಿನಿಪ್ರೇಮಿಗಳು ಖುಷಿಯಲ್ಲಿ ತೇಲಾಡುತ್ತಾರೆ. ಶರ್ಟ್‌ ಇಲ್ಲದ ಕಟ್ಟುಮಸ್ತಾದ ದೇಹವನ್ನೂ ಸೌಂದರ್ಯದ ಮಟ್ಟಕ್ಕೆ ತಂದು ಟ್ರೆಂಡ್‌ ಆಗಿಸಿದವರಲ್ಲಿ ಸಲ್ಮಾನ್‌ ಮೊದಲಿಗರು. ವಯಸ್ಸು ಐವತ್ತೆರಡಾದರೂ ಆಕರ್ಷಕ ದೇಹಸಿರಿಯನ್ನು ಉಳಿಸಿಕೊಂಡು ಬಂದಿರುವ ಸಲ್ಮಾನ್‌ ದೇಹ ಹುರಿಗೊಳಿಸಿಕೊಳ್ಳಲು ಸಾಕಷ್ಟು ಕಸರತ್ತು ಮಾಡುತ್ತಾರೆ.

ದೇಹದ ಪ್ರತಿಯೊಂದು ಅಂಗದ ಮೇಲೆಯೂ ಅವರು ವರ್ಕೌಟ್‌ ಮಾಡುತ್ತಾರೆ. ನಿತ್ಯ ಸುಮಾರು ಮೂರು ಗಂಟೆ ಕಠಿಣ ವ್ಯಾಯಾಮ ಅವರದ್ದು. ವರ್ಕೌಟ್‌ ಪ್ಲಾನ್‌ ನಿತ್ಯ ಬದಲಾಗುತ್ತದೆ. ದೇಹದಲ್ಲಿನ ಅನಗತ್ಯ ಕೊಬ್ಬಿನಂಶವನ್ನು ಹೋಗಲಾಡಿಸಲು ಸಲ್ಮಾನ್‌ ಹೆಚ್ಚು ನೆಚ್ಚಿಕೊಂಡಿರುವುದು ಕಾರ್ಡಿಯೊ ವ್ಯಾಯಾಮ.

ನಿತ್ಯ 30ರಿಂದ 40 ನಿಮಿಷ ಕಾರ್ಡಿಯೊ ಹಾಗೂ ವಿವಿಧ ವ್ಯಾಯಾಮಗಳನ್ನು ಮಾಡುತ್ತಾರೆ. ಡ್ರಾಪ್‌ ಸೆಟ್ಸ್‌ ಎನ್ನುವ ಅತ್ಯಾಧುನಿಕ ಬಾಡಿಬಿಲ್ಡಿಂಗ್‌ ತಂತ್ರಜ್ಞಾನಕ್ಕೆ ಅವರು ಮಾರುಹೋಗಿದ್ದಾರೆ. ಇನ್ನು ಆಹಾರದ ವಿಷಯದಲ್ಲಿ ಹೆಚ್ಚೆಚ್ಚು ಪ್ರೊಟೀನ್‌ ಇರುವ ಆಹಾರವನ್ನೇ ಅವರು ಸೇವಿಸುವುದು. ಮಾಂಸಾಹಾರದ ಬಗೆಗೆ ವಿಶೇಷ ಒಲವು. ಮೊಟ್ಟೆಯ ಬಿಳಿಭಾಗ, ಕೊಬ್ಬಿನಂಶ ಕಡಿಮೆ ಇರುವ ಹಾಲು, ಟೋಸ್ಟ್‌, ಪ್ರೊಟೀನ್‌ ಶೇಕ್‌ಗಳು, ಹಣ್ಣುಗಳು, ರೋಟಿ, ಹಸಿ ತರಕಾರಿಗಳು, ಬಾದಾಮಿ, ಚಿಕನ್ ಅಥವಾ ಮೀನು ಅವರ ಡಯೆಟ್‌ ಪಟ್ಟಿಯಲ್ಲಿ ಇರುತ್ತವೆ.

ತಮ್ಮ ಮೂಡ್‌ ಬದಲಾಯಿಸಿಕೊಳ್ಳಲು ಅವರು ಸೈಕ್ಲಿಂಗ್‌ ಕೂಡ ಮಾಡುತ್ತಾರೆ. ಸಲ್ಮಾನ್‌ ಒಂದು ದಿನಕ್ಕೆ 2000ಸಿಟ್‌ ಅಪ್ಸ್‌ ಹಾಗೂ 1000 ಪುಶ್‌ ಅಪ್ಸ್‌ಗಳನ್ನು ಮಾಡುವುದೂ ಇದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT