ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯ - ಕಣ್ಣಿನ ತುತ್ತಲ್ಲ

Last Updated 7 ಜನವರಿ 2018, 19:30 IST
ಅಕ್ಷರ ಗಾತ್ರ

ಹೆತ್ತವಳಿಗೆ ಹೆಗ್ಗಣ ಮುದ್ದು ಕಟ್ಟಿಕೊಂಡವಳಿಗೆ ಕೋಡಗ ಮುದ್ದು ಎಂಬುದು ನಾಣ್ಣುಡಿ. ಕೇಳುವುದಕ್ಕೆ ತುಸು ಒರಟುನುಡಿ ಅನ್ನಿಸಿದರೂ ಇದು ಸತ್ಯವನ್ನೇ ಹೇಳುತ್ತಿದೆ. ದೇಹಾಕೃತಿ ಸೌಂದರ್ಯಕ್ಕಿಂತ ಮನೋಪ್ರಕೃತಿ ಸೌಂದರ್ಯದ ಕಡೆಗೆ ಇಲ್ಲಿಯ ಲೋಕಮಿಮಾಂಸೆ ಮಾತನಾಡಿದೆ.
ತಾಯಿ ಮಗುವಿನ ಅನುಬಂಧ ಅದು ಕರುಳ ಸಂಬಂಧ. ಅಲ್ಲಿ ತಾಯಿ ಎಂಬ ಭಾವಸತ್ಯ ಹಾಗೂ ಮಗು ನನ್ನ ಕರುಳ ಕುಡಿ ಎಂಬ ಅನುಭವ ಸತ್ಯ ಇವುಗಳ ನಡುವಿನ ಪರಸ್ಪರ ಕಣ್ಣರಿಯದ ಕರುಳ ಸತ್ಯ ಮಾತ್ರ ಅನುಭಾವಿಕ ವಿವಕ್ಷೆಗೆ ದಕ್ಕಿದೆ. ಹೀಗಾಗಿ ಇಲ್ಲಿನ ಸೌಂದರ್ಯಮಿಮಾಂಸೆ ಲೋಕರೂಢಿಯ ಕಣ್ಣ ಸತ್ಯವನ್ನು ಆಧರಿಸಿದ್ದಲ್ಲ; ಅದು ಕಣ್ಣಿನ ತುತ್ತಲ್ಲ; ಕಣ್ಣಿಗೂ ಕಣ್ಣಾಗಿ ಒಳಗಿರುವ ಶಿವದ ನೋಟಕ್ಕೆ ಸಂಬಂಧಿಸಿದ್ದು. ಈ ಸೌಂದರ್ಯವೇ

ಜಗದ ಬದುಕನ್ನು ಕಾಯುವ ಪೊರೆಯುವ ಶಿವಶಕ್ತಿ. ಇದರ ಮುಂದುವರಿದ ರೂಪವೇ ಕಟ್ಟಿಕೊಂಡ ಹೆಣ್ಣುಗಂಡಿನ ನಡುವಿನ ಅನುಬಂಧಕ್ಕೆ ಸಂಬಂಧಿಸಿದ್ದು.

ಆಕೃತಿಯಲ್ಲಿ ಸ್ಫುರದ್ರೂಪಿಗಳಾಗಿದ್ದು ಸದಾ ಜಗಳಗಂಟಿಗಳಾಗಿ ದುಷ್ಟರಾಗಿ ಅಸೂಯಾಪರರಾಗಿ ಸಣ್ಣಮನಸ್ಸಿನವರಾಗಿದ್ದರೆ ಅಂಥವರ ಸಂಸಾರ ಹೇಯ; ನಿತ್ಯ ನರಕ. ಅಲ್ಲಿನ ಆಕೃತಿ ಸೌಂದರ್ಯ ಶವದ ಶೃಂಗಾರ ಏಕೆಂದರೆ ಪ್ರಕೃತಿಯಲ್ಲಿ ಶಿವದ ಬೆಳಗು ಇಲ್ಲ; ಶಿವಜೀವಸತ್ವ ಇಲ್ಲ. ಅಲ್ಲಿನ ಸೌಂದರ್ಯ ಸ್ಮಶಾನಸೌಂದರ್ಯ. ಆದ್ದರಿಂದಲೇ ನಮ್ಮ ಜನಪದ ಲೋಕದರ್ಶನ ಕಾಣುವ ಸೌಂದರ್ಯ ಬಹಿರಂಗದ ಆಡಂಬರದಲ್ಲಿಲ್ಲ ಅದು ವ್ಯಕ್ತಿಯ ಅಂತರಂಗದ ಬೆಳಗಿನಲ್ಲಿದೆ. ಇದನ್ನೇ ಶರಣ ಸಿದ್ಧರಾಮಣ್ಣ ತನ್ನೊಂದು ವಚನದಲ್ಲಿ ಹೀಗೆ ಹೇಳಿದ್ದಾನೆ.
ಒಪ್ಪುದ ನಲ್ಲದುದನೊಪ್ಪವ ಮಾಡುವಿರಯ್ಯಾ
ನಿಮ್ಮೊಲವು ಚೆಲುವು ಕಂಡಯ್ಯಾ
ನೀವೆಂತು ನೋಡಿದಡಂತಿಪ್ಪುದಲ್ಲದೆ
ಅಪ್ಪುದಲ್ಲವೆಂಬವರಿಲ್ಲ ಕಾಣಾ ಕಪಿಲಸಿದ್ಧ ಮಲ್ಲಿಕಾರ್ಜುನಾ.

ಈ ವಚನ ಶರಣರ ಶಿವ ಬೆಳಗಿನ ಅಂತಃಕರಣ ಶುದ್ಧಿಯ ಕಡೆಗೆ ಬೆರಳು ತೋರಿದೆ. ನಿಮ್ಮೊಲವು ಚೆಲುವು ಅನ್ನುವಲ್ಲಿ ಅದು ವ್ಯಕ್ತಿತ್ವದ ಒಲವು ಎಂಬ ಶಿವಬೆಳಗನ್ನು ಕುರಿತಾಗಿ ಹೇಳಿದ್ದು. ಈ ಶಿವಬೆಳಗೇ ನಿಜವಾದ ಸೌಂದರ್ಯ.

ಇದು ನೋಡುವ ಕಣ್ಗಳಲ್ಲಿದೆ. ದೃಷ್ಟಿಯಂತೆ ಸೃಷ್ಟಿ. ಬಯಸಿದಂತೆ ಭಾಗ್ಯ. ಅಪ್ಪುದಲ್ಲವೆಂಬುವರಿಲ್ಲ ಎಂಬ ಮಾತು ಶರಣ ಸ್ಥಿತಿಯ ಶಿವಬೆಳಗಿನ ವ್ಯಕ್ತಿ
ಸ್ವಾತಂತ್ರ್ಯದ ಅಸ್ಮಿತೆಗೆ ಸಂಬಂಧಿಸಿದ ಮಾತಾಗಿದೆ. ಹೀಗಾಗಿ ಸೌಂದರ್ಯತತ್ವದ ತಿರುಳು ಇರುವುದು ಅಂತರಂಗ ಬಹಿರಂಗಗಳ ಆತ್ಮಸಂಗದ ದೃಷ್ಟಿ
ಧೋರಣೆಯಲ್ಲಿ. ಇದು ಲಿಂಗಾಯತದ ಅಧ್ಯಾತ್ಮಜೀವನ ಸೌಂದರ್ಯಮಿಮಾಂಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT