ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಸಚಿವಾಲಯಕ್ಕೆ ಡಿಪಿಎಆರ್‌ ನಿರ್ದೇಶನ

‘ಸುಪ್ರೀಂ’ ಆದೇಶದಂತೆ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಲು ಸೂಚನೆ
Last Updated 7 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರವೇ ವಿಧಾನಸಭೆ ಸಚಿವಾಲಯ ಸಿಬ್ಬಂದಿಯ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸುವಂತೆ ವಿಧಾನಸಭೆ ಕಾರ್ಯದರ್ಶಿ (ಪ್ರಭಾರ) ಎಸ್‌. ಮೂರ್ತಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ನಿರ್ದೇಶನ ನೀಡಿದೆ.

ಬಿ.ಕೆ. ಪವಿತ್ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, 1978ರಿಂದ ಅನ್ವಯವಾಗುವಂತೆ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಬೇಕು. ಆದರೆ, ವಿಧಾನಸಭೆ ಸಚಿವಾಲಯದಲ್ಲಿ 1998ರಿಂದ ಅನ್ವಯವಾಗುವಂತೆ ಪರಿಷ್ಕರಿಸಲಾಗಿದೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಲವು ನೌಕರರು, 1978ರಿಂದಲೇ ಅನ್ವಯವಾಗುವಂತೆ ಪರಿಷ್ಕರಿಸಬೇಕು ಎಂದು ಡಿಪಿಎಆರ್‌ ಕಾರ್ಯದರ್ಶಿ ಅನಿಲ್‌ ಕುಮಾರ್‌ ಝಾಗೆ ಪತ್ರ ಬರೆದಿದ್ದರು.

ಸಿಬ್ಬಂದಿಯ ಮನವಿಯನ್ನು ಮಾನ್ಯ ಮಾಡಿರುವ ಇಲಾಖೆ, ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸುವ ಸಂಬಂಧ ಹೊರಡಿಸಿದ್ದ ಮಾರ್ಗಸೂಚಿಯಂತೆ ಪಟ್ಟಿ ಸಿದ್ಧಪಡಿಸಿ, ನಿಗದಿತ ನಮೂನೆಯಲ್ಲಿ ಪ್ರಕಟಿಸಬೇಕು ಎಂದು ಡಿಪಿಎಆರ್‌ ತಿಳಿಸಿದೆ.

‘ಕರ್ನಾಟಕ ವಿಧಾನ ಮಂಡಲ ಕಾರ್ಯಾಲಯ 1998ರ ಏ. 2ರಂದು ವಿಧಾನಸಭೆ ಮತ್ತು ವಿಧಾನಪರಿಷತ್‌ ಸಚಿವಾಲಯವಾಗಿ ವಿಭಜನೆಗೊಂಡಿತ್ತು. ಪ್ರತ್ಯೇಕಗೊಂಡ ಬಳಿಕ ಎರಡೂ ಸಚಿವಾಲಯಗಳು ತನ್ನದೇ ವೃಂದ ಮತ್ತು ನೇಮಕಾತಿ ನಿಯಮ ಜಾರಿಗೆ ತಂದಿವೆ.

ಈ ಕಾರಣಕ್ಕೆ, 1998ಕ್ಕೂ ಮೊದಲಿನ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕೋ, ಬಳಿಕದ ಪಟ್ಟಿ ಸಿದ್ಧಪಡಿಸಬೇಕೋ ಎಂಬ ಬಗ್ಗೆ ಅಡ್ವೊಕೇಟ್‌ ಜನರಲ್‌ ಅವರಿಂದ ಅಭಿಪ್ರಾಯ ಕೋರಲಾಗಿತ್ತು. ಆದರೆ, ಅವರು ಅಭಿಪ್ರಾಯ ನೀಡಿಲ್ಲ ಎಂದು ಪರಿಷ್ಕೃತ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯಲ್ಲಿ ವಿಧಾನಸಭಾ ಸಚಿವಾಲಯ ವಿವರಣೆ ನೀಡಿತ್ತು. ಅಲ್ಲದೆ, 1998ರಿಂದ ಅನ್ವಯವಾಗುವಂತೆ ಪಟ್ಟಿ ಪರಿಷ್ಕರಿಸಿತ್ತು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ನೌಕರರು, ‘ವಿಧಾನಸಭೆ ಮತ್ತು ಪರಿಷತ್‌ನಲ್ಲಿ 1978ರಿಂದಲೇ ನೌಕರರ ಜ್ಯೇಷ್ಠತೆ ಪರಿಗಣಿಸಲಾಗಿದೆ. ಇದನ್ನು ಪರಿಗಣಿಸದೆ, ವಿಧಾನಸಭಾ ಸಚಿವಾಲಯ ಪಟ್ಟಿ ಪರಿಷ್ಕರಿಸಿದೆ’ ಎಂದು ಆಕ್ಷೇಪಣೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT