ಬುಧವಾರ, ಜೂಲೈ 8, 2020
23 °C

ಯಾವುದೇ ಆರೋಪ ಇಲ್ಲ: ಮಂಜುನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕ್ರಿಮಿನಲ್ ಮೊಕದ್ದಮೆ ಹೂಡಿ ವಿಚಾರಣೆಗೆ ಗುರಿಪಡಿಸಲು ಅನುಮತಿ ಕೋರಿದ್ದ ಲೋಕಾಯುಕ್ತದ ಪ್ರಸ್ತಾವವನ್ನು ಸರ್ಕಾರ ತಿರಸ್ಕರಿಸಿದೆ. ನನ್ನ ವಿರುದ್ಧ ಯಾವುದೇ ಆರೋಪ ಇಲ್ಲ’ ಎಂದು ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ವೈ. ಮಂಜುನಾಥ್‌ ಹೇಳಿದ್ದಾರೆ.

‘ಕಳಂಕಿತ ಅಧಿಕಾರಿಗೆ ಐಎಎಸ್ ಹುದ್ದೆ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘2012ರಲ್ಲಿ ಮೈಸೂರು ಲೋಕಾಯುಕ್ತ ಪೊಲೀಸರು ನನ್ನ ವಿರುದ್ಧ ದಾಖಲಿಸಿದ್ದ ಎಫ್ಐಆರ್ ಅನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ವಿಚಾರಣೆಗೆ ಅನುಮತಿ ನೀಡುವಂತೆ ಕೋರಿ ಲೋಕಾಯುಕ್ತ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ 2015ರಲ್ಲಿ ರದ್ದುಪಡಿಸಿದೆ’ ಎಂದು ಅವರು ವಿವರಿಸಿದರು.

‘ಲೋಕಾಯುಕ್ತ ಎಡಿಜಿಪಿಗೆ 2017ರ ಡಿಸೆಂಬರ್‌ 23ರಂದು ಆರ್ಥಿಕ ಇಲಾಖೆ ಪತ್ರ ಬರೆದಿದೆ. ಲೋಕಾಯುಕ್ತ ಸಲ್ಲಿಸಿದ ಅಂತಿಮ ತನಿಖಾ ವರದಿಯಲ್ಲಿ ಮಂಜುನಾಥ್‌ ವಿರುದ್ಧ ಯಾವುದೇ ನೇರ ಆರೋಪ ಇಲ್ಲ. ಆರೋಪಕ್ಕೆ ಪೂರಕವಾಗಿ ಮೌಖಿಕ ಸಾಕ್ಷಿಗಳನ್ನು ಬಿಟ್ಟರೆ ಯಾವುದೇ ಪೂರಕ ಕ್ರಿಮಿನಲ್ ಮೊಕದ್ದಮೆ ಹೂಡುವ ಸಾಕ್ಷ್ಯಾಧಾರಗಳು ಕಂಡುಬರುತ್ತಿಲ್ಲ. ಭ್ರಷ್ಟಾಚಾರ ನಿರ್ಬಂಧ ಕಾಯ್ದೆಯ ಅನುಸಾರ ಅವರು ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುವುದಿಲ್ಲ ಎಂದೂ ‍ಪತ್ರದಲ್ಲಿ ವಿವರಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಕೆಎಎಸ್‌ ವೃಂದದವರಲ್ಲದ ಅಧಿಕಾರಿಗಳಿಗೆ ಐಎಎಸ್‌ ಹುದ್ದೆಗೆ ಬಡ್ತಿ ನೀಡಲು ಮೊದಲ ಹಂತದಲ್ಲಿ 36 ಅಧಿಕಾರಿಗಳ ಪಟ್ಟಿ ತಯಾರಿಸಿತ್ತು. ಈ ಪೈಕಿ 15 ಅಧಿಕಾರಿಗಳ ಹೆಸರನ್ನು ಅಂತಿಮವಾಗಿ ಆಯ್ಕೆ ಮಾಡಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಕಳುಹಿಸಲಾಗಿದೆ. ಎರಡೂ ಪಟ್ಟಿಗಳಲ್ಲಿ ನನ್ನ ಹೆಸರಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.