ಮಂಗಳವಾರ, ಆಗಸ್ಟ್ 11, 2020
23 °C
ಸೈಯದ್‌ ಮುಷ್ತಾಕ್‌ ಅಲಿ ಟ್ವೆಂಟಿ–20 ಕ್ರಿಕೆಟ್‌; ಇಂದು ಗೋವಾ ಎದುರು ಹೋರಾಟ

ಶುಭಾರಂಭದ ನಿರೀಕ್ಷೆಯಲ್ಲಿ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶುಭಾರಂಭದ ನಿರೀಕ್ಷೆಯಲ್ಲಿ ಕರ್ನಾಟಕ

ವಿಶಾಖಪಟ್ಟಣ: ಈ ಬಾರಿಯ ರಣಜಿ ಟ್ರೋಫಿಯಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾಗಿದ್ದ ಕರ್ನಾಟಕ ತಂಡ ಹೊಸ ವರ್ಷದ ಆರಂಭದಲ್ಲಿ ಹೊಸ ಸವಾಲಿಗೆ ಎದೆಯೊಡ್ಡಲು ಸಜ್ಜಾಗಿದೆ.

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಲೀಗ್‌ನ (ದಕ್ಷಿಣ ವಲಯ) ತನ್ನ ಮೊದಲ ಪಂದ್ಯದಲ್ಲಿ ಆರ್‌.ವಿನಯ್‌ ಕುಮಾರ್‌ ಪಡೆ ಗೋವಾ ವಿರುದ್ಧ ಸೆಣಸಲಿದೆ.

ಉಭಯ ತಂಡಗಳ ನಡುವಣ ಹೋರಾಟಕ್ಕೆ ವೈ.ಎಸ್‌.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ.

ಈ ಬಾರಿಯ ರಣಜಿ ಟ್ರೋಫಿಯಲ್ಲಿ ಅಮೋಘ ಆಟ ಆಡಿದ್ದ ವಿನಯ್‌ ಪಡೆ ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ನಾಲ್ಕರ ಘಟ್ಟದಲ್ಲಿ 5ರನ್‌ಗಳಿಂದ ವಿದರ್ಭಕ್ಕೆ ಮಣಿದಿತ್ತು.

ರಣಜಿಯಲ್ಲಿ ಮೋಡಿ ಮಾಡಿದ್ದ ಆರ್‌.ಸಮರ್ಥ್‌ ಮತ್ತು ಮಯಂಕ್‌ ಅಗರವಾಲ್‌ ಚುಟುಕು ಮಾದರಿಯಲ್ಲೂ ತಂಡಕ್ಕೆ ಅಬ್ಬರದ ಆರಂಭ ನೀಡಬಲ್ಲರು. ಬಲಗೈ ಬ್ಯಾಟ್ಸ್‌ಮನ್‌ ಮಯಂಕ್‌, ರಣಜಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಅವರು 8 ಪಂದ್ಯಗಳಿಂದ 1160 ರನ್‌ ಕಲೆಹಾಕಿದ್ದಾರೆ. ಸಮರ್ಥ್‌ ಕೂಡ ಇಷ್ಟೇ ಪಂದ್ಯಗಳಿಂದ 673ರನ್‌ ಪೇರಿಸಿದ್ದಾರೆ.

ಮನೀಷ್‌ ಪಾಂಡೆ, ಕರುಣ್‌ ನಾಯರ್‌ ಮತ್ತು ಸ್ಟುವರ್ಟ್‌ ಬಿನ್ನಿ ಮಧ್ಯಮ ಕ್ರಮಾಂಕದಲ್ಲಿ ತಂಡದ ಆಧಾರ ಸ್ತಂಭಗಳಾಗಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಇವರು ಗೋವಾ ಬೌಲರ್‌ಗಳ ಮೇಲೆ ಸವಾರಿ ಮಾಡಬಲ್ಲರು.

ಸಿ.ಎಂ.ಗೌತಮ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌ ಮತ್ತು ಪವನ್‌ ದೇಶಪಾಂಡೆ ಕೂಡ ತಂಡಕ್ಕೆ ರನ್‌ ಕಾಣಿಕೆ ನೀಡಬಲ್ಲ ಸಮರ್ಥರಾಗಿದ್ದಾರೆ.

ಬೌಲಿಂಗ್‌ನಲ್ಲಿ ವಿನಯ್‌, ಅಭಿಮನ್ಯು ಮಿಥುನ್‌ ಮತ್ತು ಎಸ್‌.ಅರವಿಂದ್‌ ಅವರ ವೇಗದ ಬಲ ತಂಡದ ಬೆನ್ನಿಗಿದೆ. ಸ್ಪಿನ್ನರ್‌ಗಳಾದ ಶ್ರೇಯಸ್‌ ಮತ್ತು ಕೆ.ಗೌತಮ್‌ ಅವರ ಮೇಲೂ ಭರವಸೆ ಇಡಬಹುದು.

ಗೋವಾ ಕೂಡ ಲೀಗ್‌ನಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಈ ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ಹೀಗಾಗಿ ಕರ್ನಾಟಕ ತಂಡ ಎದುರಾಳಿಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

*********

ಮುಷ್ತಾಕ್‌ ಅಲಿ ಟೂರ್ನಿಯ ಹಿಂದಿನ ಐದು ಪಂದ್ಯಗಳಲ್ಲಿ ಉಭಯ ತಂಡಗಳ ಮುಖಾಮುಖಿ ಫಲಿತಾಂಶ

ದಿನಾಂಕ: 16–10–2011

ಕರ್ನಾಟಕ: 8ಕ್ಕೆ170

ಗೋವಾ: 9ಕ್ಕೆ130

ಫಲಿತಾಂಶ: ಕರ್ನಾಟಕಕ್ಕೆ 40ರನ್‌ ಗೆಲುವು.

**

ದಿನಾಂಕ 17–03–2013

ಗೋವಾ: 119

ಕರ್ನಾಟಕ: 1ಕ್ಕೆ125

ಫಲಿತಾಂಶ: ಕರ್ನಾಟಕಕ್ಕೆ 9 ವಿಕೆಟ್‌ ಜಯ.

**

ದಿನಾಂಕ: 4–4–2014

ಗೋವಾ: 6ಕ್ಕೆ174

ಕರ್ನಾಟಕ: 66

ಫಲಿತಾಂಶ: ಗೋವಾಕ್ಕೆ 108ರನ್‌ ಗೆಲುವು.

***

26–03–2015

ಗೋವಾ: 7ಕ್ಕೆ113

ಕರ್ನಾಟಕ: 6ಕ್ಕೆ 114

ಫಲಿತಾಂಶ: ಕರ್ನಾಟಕಕ್ಕೆ 4 ವಿಕೆಟ್‌ ಜಯ.

**

3–2–2017

ಗೋವಾ: 7ಕ್ಕೆ120

ಕರ್ನಾಟಕ: 4ಕ್ಕೆ121

ಫಲಿತಾಂಶ: ಕರ್ನಾಟಕಕ್ಕೆ 6 ವಿಕೆಟ್‌ ಗೆಲುವು.

**********

ತಂಡಗಳು ಇಂತಿವೆ: ಕರ್ನಾಟಕ: ಆರ್‌.ವಿನಯ್‌ ಕುಮಾರ್‌ (ನಾಯಕ), ಆರ್‌.ಸಮರ್ಥ್‌, ಮಯಂಕ್‌ ಅಗರವಾಲ್‌, ಮನೀಷ್‌ ಪಾಂಡೆ, ಕರುಣ್‌ ನಾಯರ್‌, ಸ್ಟುವರ್ಟ್‌ ಬಿನ್ನಿ, ಸಿ.ಎಂ.ಗೌತಮ್‌ (ವಿಕೆಟ್‌ ಕೀಪರ್‌), ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಅಭಿಮನ್ಯು ಮಿಥುನ್‌, ಎಸ್‌.ಅರವಿಂದ್‌, ಪವನ್‌ ದೇಶಪಾಂಡೆ, ಪ್ರಸಿದ್ಧ ಎಂ.ಕೃಷ್ಣ, ಬಿ.ಆರ್‌.ಶರತ್‌ ಮತ್ತು ಪ್ರವೀಣ್ ದುಬೆ.

ಮುಖ್ಯ ಕೋಚ್‌: ಪಿ.ವಿ.ಶಶಿಕಾಂತ್‌, ಸಹಾಯಕ ಕೋಚ್‌: ಜಿ.ಕೆ.ಅನಿಲ್‌ ಕುಮಾರ್‌.

ಗೋವಾ: ಸಗುಣ್‌ ಕಾಮತ್‌ (ನಾಯಕ), ಫೆಲಿಕ್ಸ್‌ ಅಲೆಮಾವೊ, ಸುಮಿರನ್‌ ಅಮೋನ್‌ಕರ್‌, ಸ್ವಪ್ನಿಲ್‌ ಅಸ್ನೋಡ್ಕರ್‌, ಅಮೋಘ್‌ ಸುನಿಲ್‌ ದೇಸಾಯಿ, ಶ್ರೀನಿವಾಸ್‌ ಫಡ್ತೆ, ಲಕ್ಷ್ಯ ಗರ್ಗ್‌, ರಾಜಶೇಖರ್‌ ಹರಿಕಾಂತ್‌, ದರ್ಶನ್‌ ಮಿಸಾಲ್‌, ಹೃಶಿಕೇಶ್‌ ನಾಯಕ್‌, ಅಮೂಲ್ಯ ಪಾಂಡ್ರೇಕರ್‌, ನೀಲೇಶ್‌ ಪ್ರಭುದೇಸಾಯಿ, ರುತ್ವಿಕ್‌ ನಾಯಕ್‌, ಅಚಿತ್‌ ಶಿಗ್ವಾನ್‌ ಮತ್ತು ಕೀನನ್‌ ವಾಜ್‌.

ಪಂದ್ಯದ ಆರಂಭ: ಬೆಳಿಗ್ಗೆ 9ಕ್ಕೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.