ಮಂಗಳವಾರ, ಜುಲೈ 14, 2020
27 °C

‘ಸಿಡಿಪಿ ವರದಿ ಸಮರ್ಪಕವಾಗಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಿಡಿಪಿ ವರದಿ ಸಮರ್ಪಕವಾಗಿಲ್ಲ’

ಬೆಂಗಳೂರು: ‘ಬಿಡಿಎ ರಚಿಸುವ ಪರಿಷ್ಕೃತ ಮಹಾ ಯೋಜನೆ–2031ರ ಕರಡ (ಸಿಡಿಪಿ) ವರದಿ, ಸಮರ್ಪಕವಾಗಿಲ್ಲ. ಅವ್ಯವಹಾರಕ್ಕೆ ದಾರಿಮಾಡಿಕೊಡುವಂತಿದೆ’ ಎಂದು ಶಾಸಕ ಅರವಿಂದ ಲಿಂಬಾವಳಿ ಆರೋಪಿಸಿದರು.

ಮಹದೇವಪುರ ಕ್ಷೇತ್ರದ ದೊಡ್ಡನೆಕುಂದಿ ವಾರ್ಡ್‌ನ ಕುಂದಲಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾರ್ಡ್ ಅಭಿವೃದ್ಧಿಗೆ ಅಗತ್ಯವಾದ ಆ್ಯಪ್‌ ಬಿಡುಗಡಗೊಳಿಸಿ ಅವರು ಮಾತನಾಡಿದರು.

‘ವರದಿಯಲ್ಲಿ ಕಟ್ಟಡ ಇರುವ ಕರೆ ರಸ್ತೆ ತೋರಿಸಿದ್ದಾರೆ. ಇದು ಕಟ್ಟಡ ಮಾಲೀಕರಲ್ಲಿ ಬೆದರಿಕೆ ಹುಟ್ಟಿಸಲು ಮಾಡಿರುವ ತಂತ್ರ. ನಂತರ ಮಾಲೀಕರಿಂದ ದುಡ್ಡು ವಸೂಲಿ ಮಾಡಿ ರಸ್ತೆ ಬದಲಿಸುತ್ತಾರೆ. ನಗರಕ್ಕೆ ದೊಡ್ಡ ಸಮಸ್ಯೆಯಾಗಿರುವ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರವಿಲ್ಲ’ ಎಂದು ಹೇಳಿದರು.

‘ಚಲ್ಲಘಟ್ಟ ಬಳಿಯಿರುವ ಗಾಲ್ಫ್ ಕೋರ್ಟ್ ಹಿಂದೆ ಕೆರೆಯಾಗಿತ್ತು. ಗ್ರಾಮ ನಕ್ಷೆಯಲ್ಲಿ ಕೆರೆ ಎಂದು ಹೆಸರಿಸಲಾಗಿದೆ. ಬಿಬಿಎಂಪಿಯಲ್ಲಿ ಕೆರೆ ಕಣ್ಮರೆಯಾಗಿದೆ,. ಸಿಡಿಪಿಯಲ್ಲೂ ಕೆರೆ ಕಾಣುತ್ತಿಲ್ಲ’ ಎಂದರು.

‘ಕಣ್ಮರೆಯಾಗಿರುವ ಕೆರೆಗೂ ಬಫರ್ ಜೋನ್ ತೋರಿಸಿದ್ದಾರೆ. ಕೆಲವೆಡೆ ಕೆರೆಗಳು ಡಿ–ನೋಟಿಫೈ ಆಗಿವೆ. ಈಗಿರುವ ಕೆರೆಗಳನ್ನು ಉಳಿಸಿಕೊಳ್ಳುವುದು ಬಿಟ್ಟು ಇಲ್ಲದ ಕೆರೆಗಳತ್ತ ಮುಖ ಮಾಡಿದ್ದಾರೆ. ನಮ್ಮ ಸರ್ಕಾರ ಬಂದರೆ ಈ ಯೋಜನೆ ಮರು ಪರಿಶೀಲಿಸಿ ಸೂಕ್ತ ಯೋಜನೆ ರೂಪಿಸುತ್ತೇವೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ತೆರಿಗೆಯಲ್ಲಿ ತಮ್ಮ ಪಕ್ಷದ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಪಿಐಎಲ್ ಅರ್ಜಿ ಸಲ್ಲಿಸಲಾಗಿದೆ’ ಎಂದರು.

ದೊಡ್ಡನಕುಂದಿ ವಾರ್ಡ್‌ನ ಪಾಲಿಕೆ ಸದಸ್ಯೆ ಶ್ವೇತಾ ವಿಜಯ್ ಕುಮಾರ್, ‘3 ವರ್ಷಗಳಲ್ಲಿ ಸಮಗ್ರ ಅಭಿವೃದ್ಧಿ ಮಾಡಿದ್ದೇವೆ. ವಾರ್ಡ್‌ನಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ದೂರು ಅಥವಾ ಸಲಹೆಗಳನ್ನು ತಿಳಿಸಲು ಆ್ಯಪ್‌ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.

ಪಾಲಿಕೆ ಸದಸ್ಯೆ ಶ್ವೇತಾ ವಿಜಯ್ ಕುಮಾರ್, ‘ಜನರು ತಮ್ಮ ಗಮನಕ್ಕೆ ಬರುವ ಕುಂದುಕೊರತೆಗಳು, ತಾವು ಎದುರಿಸುವ ಸಮಸ್ಯೆಗಳು ಮತ್ತು ಸಲಹೆಗಳನ್ನು ಆಪ್ ಮೂಲಕ ತಿಳಿಸಬಹುದು ಹಾಗೂ ವಾರ್ಡ್‌ನ ಚಟುವಟಿಕೆಗಳನ್ನು ಅರಿಯುವ ಮೂಲಕ ಆಡಳಿತದಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಳ್ಳಬಹುದು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.