ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

32 ಕಚೇರಿ ಆರಂಭಕ್ಕೆ ಸಿದ್ಧತೆ ಪೂರ್ಣ

Last Updated 8 ಜನವರಿ 2018, 5:39 IST
ಅಕ್ಷರ ಗಾತ್ರ

ಮಸ್ಕಿ: ಜಿಲ್ಲಾ ಹಾಗೂ ತಾಲ್ಲೂಕು ಪುನರ್‌ವಿಂಗಡಣೆಯ ನಾಲ್ಕು ಸಮಿತಿಗಳ ಶಿಪಾರಸಿನ ಮೇರೆಗೆ ಸರ್ಕಾರ ಹೊಸದಾಗಿ ಅಸ್ತಿತ್ವಕ್ಕೆ ತಂದಿರುವ ತಾಲ್ಲೂಕು ಆಡಳಿತ ಕಚೇರಿಗಳ ಕಾರ್ಯಾರಂಭಕ್ಕೆ ದಿನಗಣನೆ ಆರಂಭವಾಗಿದೆ.

ನೂತನ ತಾಲ್ಲೂಕು ಕೇಂದ್ರಕ್ಕೆ 32 ವಿವಿಧ ಇಲಾಖೆಗಳ ಕಚೇರಿಗಳು ಕಾರ್ಯಾರಂಭ ಮಾಡಲಿವೆ. ಕಚೇರಿಗಳ ಆರಂಭಕ್ಕೆ ಈಗಾಗಲೇ ಶಾಸಕ ಪ್ರತಾಪಗೌಡ ಪಾಟೀಲ ಹಾಗೂ ಜಿಲ್ಲಾಧಿಕಾರಿ ಡಾ. ಗೌತಮ್‌ ಬುಗಾದಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಪಟ್ಟಣದ ನೀರಾವರಿ ಇಲಾಖೆ ಕಚೇರಿಯಲ್ಲಿ ಖಾಲಿ ಇರುವ 20 ಕೊಠಡಿಗಳನ್ನು ವಿವಿಧ ಇಲಾಖೆ ಕಚೇರಿಗಳಿಗಾಗಿ ಬಳಸಲಾಗುವುದು.

ಈಗಿರುವ ವಿಶೇಷ ತಹಶೀಲ್ದಾರ ಕಚೇರಿ ತಹಶೀಲ್ದಾರ ಕಚೇರಿಯಾಗಿ, ವಾಲ್ಮೀಕಿ ಭವನ ತಾಲ್ಲೂಕು ಪಂಚಾಯಿತಿ ಕಚೇರಿಯಾಗಿ, ಕೇಂದ್ರ ಶಾಲೆ ಆವರಣದಲ್ಲಿ ಇರುವ ಕ್ಲಸ್ಟರ್‌ ಕೇಂದ್ರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಾಗಿ, ಹಳೆಯ ಸರ್ಕಾರಿ ಆಸ್ಪತ್ರೆ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿಯಾಗಿ ಕಾರ್ಯಾರಂಭ ಮಾಡಲಿವೆ.

ಈಗಾಗಲೇ ಆರೋಗ್ಯ ಇಲಾಖೆ ತನ್ನ ಕಟ್ಟಡಕ್ಕೆ ತಾಲ್ಲೂಕು ಆರೋಗ್ಯ ಇಲಾಖೆ ಕಚೇರಿ ಎಂಬ ನಾಮಫಲಕ ಹಾಕುವ ಮೂಲಕ ಕಚೇರಿ ಆರಂಭಿಸಿದ ಮೊದಲ ಇಲಾಖೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಚೇರಿಗೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಇಲಾಖೆ ಮಾಡಿಕೊಂಡಿದೆ.

‘ಸರ್ಕಾರ ಈಗಾಗಲೇ ನೂತನ ತಾಲ್ಲೂಕು ಕೇಂದ್ರ ಘೋಷಣೆ ಮಾಡಿದ್ದು, ತಕರಾರು ಸಲ್ಲಿಸಲು ಜ. 7 ಕೊನೆಯ ದಿನವಾಗಿತ್ತು. ಸಾರ್ವಜನಿಕರಿಂದ ಯಾವುದೇ ತಕರಾರು ಬಾರದಿದ್ದರೆ, ಯಾವುದೇ ಕ್ಷಣದಲ್ಲಿ ಸರ್ಕಾರ ಹೊಸ ತಾಲ್ಲೂಕು ಕಚೇರಿಗಳ ಕಾರ್ಯಾರಂಭಕ್ಕೆ ಹಸಿರು ನಿಶಾನೆ ತೊರಲಿದೆ’ ಎಂದು ಲಿಂಗಸುಗೂರು ತಹಶೀಲ್ದಾರ ಚಾಮರಾಜ ಎಚ್‌, ಪಾಟೀಲ ತಿಳಿಸಿದ್ದಾರೆ.

ಆದೇಶ ಇಲ್ಲ: ‘ವಿವಿಧ ತಾಲ್ಲೂಕು ಕಚೇರಿಗಳ ಆರಂಭಕ್ಕೆ ನೀರಾವರಿ ಇಲಾಖೆ ಕಚೇರಿಯ 20 ಕೊಠಡಿಗಳನ್ನು ಜಿಲ್ಲಾಡಳಿತ ಪಡೆದಿದೆ. ಆದರೆ, ನೀರಾವರಿ ನಿಗಮದಿಂದ ನಮಗೆ ಯಾವುದೇ ಆದೇಶ ಬಂದಿಲ್ಲ’ ಎಂದು ನೀರಾವರಿ ನಿಗಮದ ಮಸ್ಕಿ ಉಪ ವಿಭಾಗದ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಾಶ್‌ ತಿಳಿಸಿದ್ದಾರೆ. ‘ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕೊಠಡಿ ಒದಗಿಸಲಾಗಿದೆ. ಒಂದೆರಡು ದಿನಗಳಲ್ಲಿ ಅಧಿಕೃತ ಆದೇಶ ಬರುವ ನಿರೀಕ್ಷೆಯಿದೆ’ ಎಂದು ಅವರು ತಿಳಿಸಿದರು.

* * 

ಸರ್ಕಾರ ಯಾವುದೇ ಕ್ಷಣ ತಾಲ್ಲೂಕು ಕಚೇರಿಗಳ ಆರಂಭಕ್ಕೆ ಆದೇಶ ನೀಡುವ ಸಾದ್ಯತೆಯಿದೆ. ಇದರ ಹಿನ್ನೆಲೆಯಲ್ಲಿ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ
ಚಾಮರಾಜ ಎಚ್‌, ಪಾಟೀಲ ತಹಶೀಲ್ದಾರ ಲಿಂಗಸುಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT