ಬುಧವಾರ, ಆಗಸ್ಟ್ 5, 2020
21 °C

ಗಡಿಲಿಂಗದಳ್ಳಿ: ನಿರುಪಯುಕ್ತ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಹಾಗೂ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಗ್ರಾಮೀಣ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆಯಿಂದ ₹4 ಕೋಟಿ ಖರ್ಚು ಮಾಡಿದರೂ ಕೂಡ ಜನರ ದಾಹ ನೀಗಿಸಲು ಸಾಧ್ಯವಾಗಿಲ್ಲ.

ತಾಲ್ಲೂಕಿನ ಐನಾಪುರ ಹಾಗೂ ಗಡಿಲಿಂಗದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐನಾಪುರ, ಗಡಿಲಿಂಗದಳ್ಳಿ, ಹಾಗೂ ಕಾನು ನಾಯಕ ತಾಂಡಾ, ಚನ್ನೂರು ತಾಂಡಾ, ಫತ್ತು ನಾಯಕ ತಾಂಡಾ, ರೂಪ್ಲಾ ನಾಯಕ ತಾಂಡಾ, ಹೇಮ್ಲಾ ನಾಯಕ ತಾಂಡಾ, ಶಿವರಾಮ ನಾಯಕ ತಾಂಡಾಗಳ ಜನರಿಗೆ ಶುದ್ಧ ಹಾಗೂ ಶಾಶ್ವತ ನೀರು ಪೂರೈಸಲು ಯೋಜನೆ ಅನುಷ್ಠಾನಗೊಳಿಸಲಾಗಿದೆ.

ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ (ಚನ್ನೂರು ಬಳಿ) ಜಾಕ್‌ವೆಲ್‌ ನಿರ್ಮಿಸಿ ಅಲ್ಲಿಂದ ಹೇಮ್ಲಾ ನಾಯಕ ಹಾಗೂ ಕಾನು ನಾಯಕ ತಾಂಡಾ ಕ್ರಾಸ್‌ನಲ್ಲಿ (ಡಬ್ಲ್ಯೂಟಿಪಿ) ನೀರು ಶುದ್ಧಿಕರಣ ಘಟಕ ಹಾಗೂ ಮಾಸ್ಟರ್‌ ಬ್ಯಾಲೆನ್ಸಿಂಗ್‌ ಟ್ಯಾಂಕ್‌ ನಿರ್ಮಿಸಲಾಗಿದೆ. ಇದಕ್ಕಾಗಿ ಇಬ್ಬರು ವ್ಯಕ್ತಿಗಳಿಗೆ ಸೇರಿದ ಒಂದು ಎಕರೆ ಜಮೀನು ಬಳಸಿಕೊಳ್ಳಲಾಗಿದೆ.

ಯೋಜನೆಯ ನೀರು ಶುದ್ಧಿಕರಣ ಘಟಕ ಹಾಗೂ ಮಾಸ್ಟರ್‌ ಬ್ಯಾಲೆನ್ಸಿಂಗ್‌ ಟ್ಯಾಂಕ್‌ ನಿರ್ಮಾಣಕ್ಕೆ ತಮ್ಮ ಜಮೀನು ನೀಡಲು ಸಿದ್ಧರಿದ್ದೇವೆ. ಆದರಂತೆ ಜಮೀನಿಗೆ ಪರಿಹಾರ ನೀಡಬೇಕೆಂದು ಮಾಲೀಕರು ತಿಳಿಸಿದ್ದರು. ಇದಕ್ಕೆ ಒಪ್ಪಿದ ರೈತರ ಜಮೀನಿನಲ್ಲಿ ಇದನ್ನು ಕೈಗೊಳ್ಳಲಾಗಿದೆ. ಆದರೆ, ಜಮೀನು ಕಳೆದುಕೊಂಡ ರೈತರಿಗೆ ಈವರೆಗೆ ಒಂದುಪೈಸೆ ಕೂಡ ಪರಿಹಾರ ನೀಡಿಲ್ಲ.

ಒಬ್ಬ ರೈತನ 17 ಗುಂಟೆ, ಇನ್ನೊಬ್ಬ ರೈತನ 23 ಗುಂಟೆ ಜಮೀನು ಇದಕ್ಕಾಗಿ ಬಳಕೆಯಾಗಿದೆ. ಪರಿಹಾರ ನೀಡುವುದಾಗಿ ಹೇಳಿ ಕಾಮಗಾರಿ ಆರಂಭಿಸಿದ್ದರು. ವರ್ಷ ಕಳೆದರೂ ಪರಿಹಾರ ಸಿಗದಿದ್ದಾಗ ಅವರು ಕಾಮಗಾರಿ ತಡೆದಿದ್ದರು. ಇದರಿಂದ ನನೆಗುದಿಗೆ ಬಿದ್ದು ಕಾಮಗಾರಿ ಪೂರ್ಣಗೊಳಿಸಲು ಒಂದು ವರ್ಷ ವಿಳಂಬವಾಗಿತ್ತು.

ಮತ್ತೆ ರೈತರಿಗೆ ಪರಿಹಾರದ ಹಣ ಕೊಡಿಸುತ್ತೇವೆ ಎಂದು ಭರವಸೆ ನೀಡಿ ರೈತರನ್ನು ಸೇಡಂ, ಕಲಬುರ್ಗಿಗೆ ಕರೆಸಿಕೊಂಡು ಭರವಸೆ ನೀಡಿ 2014–15ನೇ ಸಾಲಿನ ಯೋಜನೆ 2017ರಲ್ಲಿ ಪೂರ್ಣಗೊಂಡಿದೆ. ಕಾಮಗಾರಿ ಪೂರ್ಣಗೊಂಡ ಮೇಲೆ 2 ತಿಂಗಳು ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಜನರು ನೀರು ಪಡೆಯತೊಡಗಿದರು. ಆದರೆ, ಜಮೀನು ಕಳೆದುಕೊಂಡಿದ್ದಕ್ಕೆ ಪರಿಹಾರವೂ ಇಲ್ಲ. ಜತೆಗೆ, ಜಮೀನಿನಲ್ಲಿ ಕಟ್ಟಡ ನಿರ್ಮಿಸಿದ್ದರಿಂದ ಬೆಳೆ ಬೆಳೆಯಲು ಸಾಧ್ಯವಾಗದ ರೈತರು ಗೊಂದಲಕ್ಕೆ ಒಳಗಾಗಿ ಮತ್ತೆ ನೀರು ಬಿಡುಗಡೆ ಮಾಡುವುದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿ ತಮ್ಮ ಜಮೀನಿನಲ್ಲಿ ಯಾರೂ ಬರುವಂತಿಲ್ಲ ಎಂದು ತಡೆ ಹಿಡಿದಿದ್ದಾರೆ.

ಇದರಿಂದ ಕಳೆದ 6 ತಿಂಗಳಿನಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಈಗ ತಮ್ಮ ಜಮೀನು ವಶಪಡಿಸಿಕೊಂಡಿದ್ದಕ್ಕೆ ತಮಗೆ ಸರ್ಕಾರದ ನಿಯಮಾನುಸಾರ ಪರಿಹಾರ ನೀಡಬೇಕು. ಜತೆಗೆ, ಉದ್ಯೋಗ ಕೊಡಬೇಕೆಂದು ಹೊಲದ ಮಾಲೀಕ ಶೆಟ್ಟಿ ಚವ್ಹಾಣ ಒತ್ತಾಯಿಸಿದ್ದಾರೆ.

‘ಎಕರೆಗೆ ₹4.2ಲಕ್ಷ ದರ ನಿಗದಿಯಾಗಿದೆ. ನೀರು ಶುದ್ಧಿಕರಣ ಘಟಕ ಹಾಗೂ ಮಾಸ್ಟರ್‌ ಬ್ಯಾಲೆನ್ಸಿಂಗ್‌ ಟ್ಯಾಂಕ್‌ ನಿರ್ಮಿಸಿದ ಸ್ಥಳ ಸುಮಾರು ಒಂದು ಎಕರೆಯಿದ್ದು, ಇದರಲ್ಲಿ ಇಬ್ಬರು ರೈತರಿದ್ದಾರೆ. ಭೂಮಿ ಅಳತೆಯ ಗೊಂದಲದಿಂದ ಒಬ್ಬ ರೈತ ಅಳತೆಗೆ ಸಹಕಾರ ನೀಡದ ಕಾರಣ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ’ ಎಂದು ಗ್ರಾಮೀಣ ನೀರು ಪೂರೈಕೆ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಿವಾಜಿ ಡೋಣಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಪರಿಹಾರ ನೀಡಬೇಕಾದರೆ ಇಬ್ಬರು ರೈತರು ತಮ್ಮ ಜಮೀನಿನ ನಕ್ಷೆಯೊಂದಿಗೆ ತಮಗೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಡಬೇಕಾಗಿದೆ. ಇದಕ್ಕಾಗಿ 11ಇ ನಕಾಶೆ ಅಗತ್ಯವಿದ್ದು ಭೂ ಅಳತೆಯ ಗೊಂದಲದಿಂದ ಸಾಧ್ಯವಾಗಿಲ್ಲ. ಎರಡು ವಾರದಲ್ಲಿ ಸಮಸ್ಯೆಗೆ ಪರಿಹಾರ ದೊರೆಯಲಿದೆ. ರೈತರು ಭೂಮಿಯ ನೋಂದಣಿ ಮಾಡಿಸಿದ ಕೂಡಲೆ ಪರಿಹಾರಧನ ನೀಡಲಾಗುವುದು. ಈ ಬಗ್ಗೆ ಯಾವುದೇ ಸಮಸ್ಯೆಯಿಲ್ಲ’ ಎಂದರು.

ಎರಡು ಬಾರಿ ಕಾಮಗಾರಿ ತಡೆದ ರೈತರಿಗೆ ಪರಿಹಾರ ಸಿಕ್ಕಿಲ್ಲ. ಕಾಮಗಾರಿ ಮುಗಿದ ಮೇಲೆ ಪರಿಹಾರ ನೀಡುವ ಪ್ರಯತ್ನ ಅಧಿಕಾರಿಗಳಿಂದ ಆಗಿಲ್ಲ. ಒಂದು ಎಕರೆ ಜಮೀನು ವಶಪಡಿಸಿಕೊಳ್ಳಲು 4 ವರ್ಷ ಬೇಕಾ ಎಂಬ ಪ್ರಶ್ನೆಯನ್ನು ಸ್ಥಳೀಯ ಜನರು ಕೇಳುತ್ತಿದ್ದಾರೆ.

* * 

ನೀರು ಪೂರೈಕೆಯ ಯೋಜನೆಯ ಶುದ್ಧೀಕರಣ ಘಟಕ ನನ್ನ ಜಮೀನಿನಲ್ಲಿ ಸ್ಥಾಪನೆ ಮಾಡಲಾಗಿದೆ. ಕಾಮಗಾರಿ ನಡೆಸಿದ್ದರಿಂದ ಕಳೆದ ವರ್ಷದಿಂದ ನನಗೆ ಬೆಳೆಯೂ ಸಿಕ್ಕಿಲ್ಲ. ಜತೆಗೆ, ಭೂಮಿಗೆ ಪರಿಹಾರವನ್ನೂ ನೀಡಿಲ್ಲ.

ಶೆಟ್ಟಿ ಚವ್ಹಾಣ,

ಭೂಮಿಯ ಮಾಲೀಕ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.