ಸೋಮವಾರ, ಜೂಲೈ 6, 2020
27 °C

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಾಸಕರು ಹೊಣೆಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಳೆಹೊನ್ನೂರು: ಅಕ್ರಮ –ಸಕ್ರಮದ ರೈತರಿಗೆ  ಹಕ್ಕುಪತ್ರ ವಿತರಣೆಯಲ್ಲಿ ವಿಳಂಬವಾಗದಂತೆ ಶಾಸಕ ಡಿ.ಎನ್.ಜೀವರಾಜ್ ಅವರು ಪದೇ ಪದೇ ಅಧಿಕಾರಿಗಳಿಗೆ ಸೂಚಿಸಿ ಸಭೆ ಕರೆಯಲೂ ತಿಳಿಸಿದರೂ ಸಹ ಅಧಿಕಾರಿಗಳು ಬೇಜವಾಬ್ದಾರಿ, ನಿರ್ಲಕ್ಷ್ಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಅದಕ್ಕೆ ಶಾಸಕರು ಹೊಣೆಗಾರರಲ್ಲ’ ಎಂದು ಬಿಜೆಪಿ ಮುಖಂಡ ಟಿ.ಎಂ.ಉಮೇಶ್ ಕಲ್ಮಕ್ಕಿ ಹೇಳಿದ್ದಾರೆ.

ಕ್ಷೇತ್ರದ ರೈತರು ಒತ್ತುವರಿ ಮಾಡಿರುವ ಬಗರ್‍ಹುಕುಂ ಜಮೀನು ಮಂಜೂರು ಮಾಡಬಾರದು ಎಂದು ಹಾಸನದ ರೈತರೊಬ್ಬರು ಹೈಕೋರ್ಟ್‍ಗೆ ಮೆಟ್ಟಿಲೇರಿದ್ದರಿಂದ ಹಕ್ಕುಪತ್ರ ವಿತರಣೆಯಲ್ಲಿ ವಿಳಂಬವಾಗಿತ್ತು. ಬಳಿಕ ಶಾಸಕರು ಕೊಪ್ಪದಲ್ಲಿ ರೈತರ ಸಭೆ ಕರೆದು ಚರ್ಚಿಸಿ ರೈತರ ಮೂಲಕವೇ ತಡೆಯಾಜ್ಞೆ ತೆರವುಗೊಳಿಸಲು ಶ್ರಮಿಸಿ ಯಶಸ್ವಿಯಾಗಿದ್ದರು’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಸಕರು ತಡೆಯಾಜ್ಞೆ ಪ್ರತಿಯನ್ನು ತಮ್ಮ ವ್ಯಾಪ್ತಿಗೆ ಒಳಪಡುವ ನಾಲ್ಕೂ ತಾಲೂಕುಗಳ ತಹಶೀಲ್ದಾರ್‍ರವರಿಗೆ ತಲುಪಿಸಿ ಅರ್ಹ ರೈತರಿಗೆ ಹಕ್ಕುಪತ್ರ ವಿತರಿಸುವಂತೆ ಸೂಚಿಸಿದ್ದರು. ಆ ಬಳಿಕ ಕ್ಷೇತ್ರದಲ್ಲಿ ಒಟ್ಟು 380 ಸಾಗುವಳಿ ಚೀಟಿಯ ವಿತರಣೆಯಾಗಿದೆ.

ಈ ಹಿಂದೆ ಕ್ಷೇತ್ರದ ತಾಲೂಕು ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಹಶೀಲ್ದಾರ್‍ರವರು ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಕಾಲಕಾಲಕ್ಕೆ ಸರಿಯಾಗಿ ಬಗರ್‍ಹುಕುಂ ಸಭೆಗಳನ್ನು ಕರೆಯದೇ ಉದಾಸೀನ ಮಾಡಿದ್ದರು’ ಎಂದರು.

‘ಹಲವು ಬಾರಿ ಬಗರ್‍ಹುಕುಂ ಸಭೆಗೆ ಶಾಸಕರು ಹೋಗಿ ಕಾದುಕುಳಿತರೂ ಸಹ ತಹಶೀಲ್ದಾರ್‍ಗಳು ಸಭೆ ಬಾರದೇ, ಬಂದರೂ ಸಹ ಸಮರ್ಪಕ ಮಾಹಿತಿ ತರದೇ ಸಭೆ ಯಶಸ್ವಿಯಾಗದಂತೆ ಮಾಡಿದ್ದರು. ಈ ಕುರಿತು ಶಾಸಕರು ಹಲವು ಬಾರಿ ತಹಸೀಲ್ದಾರ್‍ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಮಪರ್ಕವಾಗಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೂ ಸಹ ಅಧಿಕಾರಿಗಳು ರೈತರಪರ ಕಾರ್ಯನಿರ್ವಹಣೆ ಮಾಡದೇ ಮನಸೋಇಚ್ಛೆ ವರ್ತಿಸುತ್ತಿದ್ದರು. ಇದರಿಂದ ಹಕ್ಕುಪತ್ರ ವಿತರಣೆಯಲ್ಲಿ ವಿಳಂಭವಾಗಿದೆ ಹೊರತು ಇದರಲ್ಲಿ ಶಾಸಕರ ಪಾತ್ರ ಶೂನ್ಯ’ ಎಂದರು.

ಆದರೆ ಇದನ್ನೆಲ್ಲಾ ಅರಿಯದ ಕಾಂಗ್ರೆಸ್ಸಿಗರು ಕ್ಷೇತ್ರದ ರೈತರ, ಮತದಾರರ ದಿಕ್ಕುತಪ್ಪಿಸುವ ಯತ್ನದಲ್ಲಿ ತೊಡಗಿದ್ದಾರೆ. ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ಇರುವಾಗ ಅದನ್ನು ತೆರವುಗೊಳಿಸಲು ಯತ್ನಿಸದ ಕಾಂಗ್ರೆಸ್ಸಿಗರು, ಹಕ್ಕುಪತ್ರ ವಿತರಣೆ ಮಾಡುವ ಸಂದರ್ಭದಲ್ಲಿ ಶಾಸಕರ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಖಂಡನೀಯವಾಗಿದೆ. ಚುನಾವಣಾ ದೃಷ್ಟಿಯಿಂದ ಮಾಧ್ಯಮಗಳಲ್ಲಿ ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡುವುದನ್ನು ಬಿಟ್ಟು ಅಭಿವೃದ್ಧಿ ಕಾರ್ಯಗಳತ್ತ ಗಮನನೀಡಲಿ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.