ಸೋಮವಾರ, ಆಗಸ್ಟ್ 3, 2020
26 °C

ವರ್ಷಗಳು ಉರುಳಿದರೂ ದುರಸ್ತಿ ಕಾಣದ ಅಶೋಕ ರಸ್ತೆ

ವಿಜಯ ಸಿ.ಕೆಂಗಲಹಳ್ಳಿ Updated:

ಅಕ್ಷರ ಗಾತ್ರ : | |

ವರ್ಷಗಳು ಉರುಳಿದರೂ ದುರಸ್ತಿ ಕಾಣದ ಅಶೋಕ ರಸ್ತೆ

ದಾವಣಗೆರೆ: ಕಿರಿದಾದ ಈ ರಸ್ತೆಯಲ್ಲಿ ಸದಾ ಜನಜಂಗುಳಿ, ದಟ್ಟ ದೂಳು, ಎಲ್ಲೆಂದರಲ್ಲಿ ಅಪಾಯಕಾರಿ ತಗ್ಗು ಗುಂಡಿ ಗಳು, ವಾಹನ ಸವಾರರ ಹರಸಾಹಸ, ವ್ಯಾಪಾರಸ್ಥರಿಗೆ ತಪ್ಪದ ಕಿರಿಕಿರಿ.

ನಗರದ ಅಶೋಕ ಚಿತ್ರಮಂದಿರದ ರಸ್ತೆ ಈ ಎಲ್ಲಾ ಸಮಸ್ಯೆಗಳಿಗೆ ಸಾಕ್ಷಿಯಾಗಿದೆ. ಹಳೇ ದಾವಣಗೆರೆ ಭಾಗದ ಹರಪನಹಳ್ಳಿ, ಜಗಳೂರು ಬಸ್‌ಗಳ ನಿಲ್ದಾಣಕ್ಕೆ ಈ ರಸ್ತೆ ಮುಖ್ಯ ಮಾರ್ಗವಾಗಿದೆ. ಅಲ್ಲದೇ ವ್ಯಾಪಾರ ವಹಿವಾಟು ನಡೆಯುವ ಸ್ಥಳಕ್ಕೆ ನೇರ ಸಂಪರ್ಕ ಕಲ್ಪಿಸುತ್ತದೆ. ನೂರಾರು ಹಳ್ಳಿಗಳಿಗೆ ಜನ ಸಂಚರಿಸುವ ಮಾರ್ಗವೂ ಇದೇ.

ನಿತ್ಯ ಜಗಳ ತಪ್ಪುತ್ತಿಲ್ಲ: ಕಿರಿದಾದ ಈ ಹಳೆಯ ಕಾಂಕ್ರೀಟ್‌ ರಸ್ತೆ ಸಂಪೂರ್ಣ ಹಾಳಾಗಿದೆ. ಎಲ್ಲೆಂದರಲ್ಲಿ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿವೆ. ಗಂಟೆಗೆ ಎರಡು ಬಾರಿ ರೈಲ್ವೆ ಗೇಟ್‌ ಹಾಕಲಾಗುತ್ತದೆ. ಇದರಿಂದ ವಿಪರೀತ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ. ಜತೆಗೆ ಬೈಕ್‌, ಕಾರು, ಆಟೊ, ಸರಕು ಸಾಗಣೆ ವಾಹನ ಸವಾರರು ಮುನ್ನುಗ್ಗಲು ಹೋಗಿ ಡಿಕ್ಕಿ ಸಂಭವಿಸುತ್ತಲೇ ಇರುತ್ತದೆ. ಇದರಿಂದ ಜಗಳ ತಪ್ಪಿದ್ದಲ್ಲ. ಇನ್ನು ಕೆಲವರು ಗುಂಡಿಗಳನ್ನು ದಾಟಲು ಹೋಗಿ ಬೀಳುತ್ತಾರೆ. ಇದು ಈ ರಸ್ತೆಯಲ್ಲಿ ನಿತ್ಯದ ಗೋಳಾಗಿದೆ.

ಫುಟ್‌ಪಾತ್ ಅವ್ಯವಸ್ಥೆ: ಮೋತಿ ಚಿತ್ರಮಂದಿರದಿಂದ ರೈಲ್ವೆ ಗೇಟ್ ದಾಟುವವರೆಗೂ ಎರಡೂ ಬದಿಯಲ್ಲಿ ಫುಟ್‌ಪಾತ್‌ ಇದ್ದು, ಅದು ಹಾಳಾಗಿದೆ. ಅಲ್ಲಿಯೇ ಬಟ್ಟೆ, ಚಪ್ಪಲಿ, ಹಣ್ಣು ಇತರೆ ವಸ್ತುಗಳನ್ನು ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಹಾಗಾಗಿ ಪಾದಾಚಾರಿಗಳಿಗೆ ಓಡಾಡಲು ತೀವ್ರ ಸಮಸ್ಯೆ ಉಂಟಾಗುತ್ತಿದೆ. ರಸ್ತೆ ಮೇಲೆ ಓಡಾಡುವುದೋ, ಫುಟ್‌ಪಾತ್‌ ಮೇಲೆ ನಡೆದಾಡುವುದೋ ತೋಚುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಪಾದಚಾರಿಗಳು.

‘ರೈಲ್ವೆ ಗೇಟ್ ಹಾಕಿದಾಗ ಈ ರಸ್ತೆಯಲ್ಲಿ ಉಂಟಾಗುವ ವಾಹನಗಳ ಕರ್ಕಶ ಧ್ವನಿಯಿಂದಾಗಿ ಕಿವಿಯಲ್ಲಿ ತಮಟೆ ಬಾರಿಸಿದಂತೆ ಭಾಸವಾಗುತ್ತದೆ. ದೂಳಿನಿಂದಾಗಿ ಸಾಕಷ್ಟು ರೋಸಿ ಹೋಗಿದ್ದೇವೆ. ಇಲ್ಲಿನ ರಸ್ತೆಗೆ ರೈಲ್ವೆ ಮೇಲುಸೇತುವೆ ನಿರ್ಮಾಣವಾದರೆ ಮಾತ್ರ ನೆಮ್ಮದಿಯ ಬದುಕು ಕಂಡುಕೊಳ್ಳಲು ಸಾಧ್ಯ’ ಎನ್ನುತ್ತಾರೆ ಇಲ್ಲಿನ ಕನ್ನಡಕದ ಅಂಗಡಿ ಮಾಲೀಕ ಗುರುರಾಜ್‌.

ವ್ಯಾಪಾರಿಗಳಿಗೆ ತಪ್ಪದ ಗೋಳು: ‘10 ವರ್ಷಗಳಿಂದ ಅಶೋಕ ರಸ್ತೆಯ ಬದಿ ವ್ಯಾಪಾರ ಮಾಡುತ್ತಿದ್ದೇನೆ. ರಸ್ತೆಯಲ್ಲಿನ ದೂಳು, ಬಿಸಿಲಿನಿಂದಾಗಿ ಇಲ್ಲಿನ ಬಹುಪಾಲು ಬೀದಿ ವ್ಯಾಪಾರಿಗಳು ಅನಾರೋಗ್ಯಕ್ಕೆ ತುತ್ತಾಗುವುದು ಸಾಮಾನ್ಯವಾಗಿದೆ. ಆದರೆ ಏನೂ ಮಾಡುವಂತಿಲ್ಲ. ಸಣ್ಣ ಪುಟ್ಟ ಕಾಯಿಲೆ ಬಂದರೆ ಮಾತ್ರೆ ನುಂಗುತ್ತೇವೆ. ಜೀವದ ಹಂಗು ತೊರೆದು ಜೀವನ ಸಾಗಿಸುತ್ತಿದ್ದೇವೆ’ ಎನ್ನುತ್ತಾರೆ ಬೀದಿಬದಿ ಎಲೆ ವ್ಯಾಪಾರಿ ಚಮನ್‌ಸಾಬ್‌.

ದಿನಕ್ಕೆ 50ಕ್ಕೂ ಹೆಚ್ಚು ಬಾರಿ ರೈಲ್ವೆ ಗೇಟ್‌ ಬಂದ್: ಅಶೋಕ ಚಿತ್ರಮಂದಿರದ ರಸ್ತೆಯ ಈ ರೈಲ್ವೆ ಗೇಟ್‌ ಅನ್ನು ದಿನಕ್ಕೆ 50ಕ್ಕೂ ಹೆಚ್ಚು ಬಾರಿ ಹಾಕಲಾಗುತ್ತದೆ. ರೈಲು ಬರುವ ಮುನ್ನ ಗೇಟ್‌ ಹಾಕಲು ಮಂದಾದಾಗ ಗೇಟ್‌ ಸರಳು ಬಡಿಯುತ್ತದೆ ಎಂಬುದನ್ನೂ ಮರೆತು ಜನರು ನುಗ್ಗುತ್ತಾರೆ. ನಿಯಮ ಉಲ್ಲಂಘಿಸಿದ ತಪ್ಪನ್ನು ಮರೆತು ಗೇಟ್‌ ಬಡಿಸಿಕೊಂಡು ಕೆಲವರು ಶಪಿಸುತ್ತಾರೆ. ಅಲ್ಲದೆ ಕೆಲವರು ಇಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇಲ್ಲಿ ಉಂಟಾಗುವ ದುರ್ವಾಸನೆ, ದೂಳಿನಿಂದಾಗಿ ಕೆಲಸ ನಿರ್ವಹಿಸುವುದೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು.

ಮೋತಿ ಚಿತ್ರಮಂದಿರದ ರೈಲ್ವೆ ಗೇಟಿನ ಹಳೆಭಾಗದ ಮಂಡಿಪೇಟೆ ವ್ಯಾಪ್ತಿಯ ಎಲ್ಲಾ ರಸ್ತೆಗಳು ₹ 20 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿವೆ. ಹಣ ಕೂಡ ಬಿಡುಗಡೆ ಆಗಿದ್ದು, ವರ್ಕ್‌ ಆರ್ಡರ್‌ ದೊರೆತಲ್ಲಿ ಶೀಘ್ರವೇ ರಸ್ತೆ ಕಾಮಗಾರಿ ಆರಂಭ ವಾಗಲಿದೆ ಎಂದು ಪಾಲಿಕೆಯ 16ನೇ ವಾರ್ಡಿನ ಸದಸ್ಯರಾದ ಮಂಜಮ್ಮ ತಿಳಿಸಿದರು.

ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ

‘ಅಶೋಕ ರಸ್ತೆಯ ರೈಲ್ವೆ ಗೇಟ್‌ ಬಳಿ ಮೇಲುಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪರ್ಯಾಯ ಪ್ರಸ್ತಾವನೆಯ ವರದಿ ಸಲ್ಲಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮೂರ್ನಾಲ್ಕು ತಿಂಗಳ ಹಿಂದೆಯೇ ಬೆಂಗಳೂರಿನಲ್ಲಿ ಸಭೆ ಕೂಡ ನಡೆಸಲಾಗಿತ್ತು. ಸರ್ಕಾರದಿಂದ ಆದೇಶದ ವರದಿ ಬರುತ್ತಿದ್ದಂತೆಯೇ ಕಾಮಗಾರಿ ಬಗ್ಗೆ ಶೀಘ್ರ ಕ್ರಮಕೈಗೊಳ್ಳುತ್ತೇನೆ. ಆಗ ಸುಲಭ ಸಂಚಾರ ವ್ಯವಸ್ಥೆ ಜನರಿಗೆ ಲಭ್ಯವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.