ಗುರುವಾರ , ಜೂಲೈ 2, 2020
22 °C

ಉದ್ಯಾನದಲ್ಲಿ ‘ಉದಯರಾಗ’ದ ಮೋಡಿ

ಜೋಮನ್‌ ವರ್ಗೀಸ್‌ Updated:

ಅಕ್ಷರ ಗಾತ್ರ : | |

ಉದ್ಯಾನದಲ್ಲಿ ‘ಉದಯರಾಗ’ದ ಮೋಡಿ

ಗದಗ: ಜಿಲ್ಲಾಕೇಂದ್ರ ಗದುಗಿನಲ್ಲಿ ಸಾಹಿತ್ಯ ಭವನ ನಿರ್ಮಾಣವಾದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ಗರಿಗೆದರಿವೆ. ಸಾಕಷ್ಟು ಸ್ಥಳೀಯ ಕಲಾವಿದರಿಗೆ ಅವಕಾಶ ಲಭಿಸುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಆಶ್ರಯದಲ್ಲಿ ಬೆಟಗೇರಿಯ ಕಿತ್ತೂರ ಚನ್ನಮ್ಮ ಉದ್ಯಾನ, ರಾಜೀವ ಗಾಂಧಿ ನಗರದ ಹರಳಯ್ಯ ಉದ್ಯಾನ ಹಾಗೂ ಹುಡ್ಕೋದ ಆದಿಶಕ್ತಿ ಉದ್ಯಾನದಲ್ಲಿ ನವೆಂಬರ್ ಮೊದಲ ವಾರದಿಂದ ಪ್ರಾರಂಭಿಸಿರುವ ‘ಉದ್ಯಾನಗಳಲ್ಲಿ ಉದಯರಾಗ’ ಕಾರ್ಯಕ್ರಮಕ್ಕೆ ಸಾರ್ವಜನಿಕ ವಲಯದಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಬೆಂಗಳೂರಿನಲ್ಲಿ ತೋಟಗಾರಿಕೆ ಇಲಾಖೆ ಅಲ್ಲಿನ ಕಬ್ಬನ್‌ ಉದ್ಯಾನದಲ್ಲಿ ಪ್ರತಿ ಭಾನುವಾರ ಉದಯರಾಗ ಹಾಗೂ ಸಂಧ್ಯಾರಾಗ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದೇ ಮಾದರಿಯಲ್ಲಿ ಗದುಗಿನಲ್ಲಿ ಈ ಪ್ರಯೋಗ ನಡೆದಿದೆ. ಸ್ಥಳೀಯ ಕಲಾವಿದರನ್ನು ಪರಿಚಯಿಸುವ ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ಭಾನುವಾರ ಬೆಳಿಗ್ಗೆ 6.30ರಿಂದ 7.30ರವರೆಗೆ ಈ ಕಾರ್ಯಕ್ರಮ ನಡೆಯುತ್ತಿದೆ. ಉದ್ಯಾನಗಳ ವಾಯುವಿಹಾರಿಗಳ ಸಂಘವೂ ಇದಕ್ಕೆ ಸಾಥ್‌ ನೀಡುತ್ತಿದೆ.

ಭಾನುವಾರ ಸಂಜೆ ನಗರದ ಹೃದಯ ಭಾಗದ ಭೀಷ್ಮಕರೆ ಆವರಣದ ಬಸವೇಶ್ವರ ಪುತ್ಥಳಿ ಸಮೀಪದ ಉದ್ಯಾನದಲ್ಲಿ ನಡೆಯುವ ಸಂಧ್ಯಾರಾಗ ಕಾರ್ಯಕ್ರಮ ಲಘು ಸಾಂಸ್ಕೃತಿಕ ಜಾತ್ರೆಯಂತೆ ನಡೆಯುತ್ತದೆ. ವಾರಾಂತ್ಯದ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ.

ಈಗ ಚಳಿ ಇರುವುದರಿಂದ ಉದಯರಾಗದ ಶೋತೃಗಳ ಸಂಖ್ಯೆ ಸ್ವಲ್ಪ ಕಡಿಮೆ ಇದೆ. ಆದರೆ, ಈ ಕೊರತೆ ನೀಗಿಸುವಂತೆ ಸಂಧ್ಯಾರಾಗ ಕಾರ್ಯಕ್ರಮಕ್ಕೆ ಜನರು ಸೇರುತ್ತಿದ್ದಾರೆ. ‘ನ. 5ರಂದು ರಾಜೀವಗಾಂಧಿ ನಗರದ ಹರಳಯ್ಯ ಉದ್ಯಾನದಲ್ಲಿ ಮೊದಲ ಉದಯರಾಗ ಕಾರ್ಯಕ್ರಮ ನಡೆಯಿತು. ಇದುವರೆಗೆ ನಾಲ್ಕೂ ಉದ್ಯಾನಗಳು ಸೇರಿ 40ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳು ನಡೆದಿವೆ. 120ಕ್ಕೂ ಹೆಚ್ಚು ಕಲಾವಿದರಿಗೆ ಅವಕಾಶ ಲಭಿಸಿವೆ. ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನರ ಮನೋಭಾವದಲ್ಲೂ ಬದಲಾವಣೆ ಕಾಣುತ್ತಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಉದಯರಾಗ ಕಾರ್ಯಕ್ರಮಗಳಿಗೆ ಉತ್ತಮ ಜನಸ್ಪಂದನ ವ್ಯಕ್ತವಾದ ಬೆನ್ನಲ್ಲೇ, ಪ್ರವಾಸೋದ್ಯಮ ಇಲಾಖೆಯು, ಆದರ್ಶನಗರ ಮತ್ತು ಕಿತ್ತೂರ ಚನ್ನಮ್ಮ ಉದ್ಯಾನಕ್ಕೆ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲು ಸೌಂಡ್‌ಸಿಸ್ಟಂ ಒದಗಿಸಿದೆ. ‘ಉದಯರಾಗ ಕಾರ್ಯಕ್ರಮದಲ್ಲಿ ಭಾಗವಹಿಸುವ ಒಂದು ಕಲಾ ತಂಡಕ್ಕೆ ₨2 ಸಾವಿರ ಗೌರವಧನ ನೀಡಲಾಗುತ್ತದೆ’ ಎಂದು ಗೋಗೇರಿ ಹೇಳಿದರು.

ಪ್ರತಿ ಭಾನುವಾರ ಮೂಡಣದಲ್ಲಿ ನೇಸರ ಕೆಂಪೇರುತ್ತಿದ್ದಂತೆ ಇಲ್ಲಿನ ಉದ್ಯಾನದಲ್ಲಿ ಭೈರವ್ ರಾಗದ ಅಲೆಗಳು ತೇಲಿಬರುತ್ತದೆ. ಆಗಷ್ಟೇ ಮಂಜಿನ ಪರದೆ ಸರಿಸಿ, ಹರಿಯುತ್ತಿರುವ ನಸು ಬೆಳಕಿನಲ್ಲಿ ಸಂಗೀತ ಸುಧೆ ಸೇರಿಕೊಂಡು ಹೊಸತೊಂದು ಮುಂಜಾವು ತೆರೆದುಕೊಳ್ಳುತ್ತದೆ.

* * 

ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ 2017ರ ನವೆಂಬರ್‌ನಿಂದ 2018ರ ನವೆಂಬರ್‌ವರೆಗೆ ವೈವಿಧ್ಯಮಯ 100 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು

ಶರಣು ಗೋಗೇರಿ

ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.