ಗುರುವಾರ , ಜೂಲೈ 9, 2020
24 °C

ಮಂಗಳವಾರ, 9–1–1968

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಾಂಗ್ರೆಸ್ಸೇತರ ಸರಕಾರಗಳ ಬೇಜವಾಬ್ದಾರಿ ವರ್ತನೆ ಪ್ರಜಾತಂತ್ರಕ್ಕೆ ಪೆಟ್ಟು’ (ಎಸ್.ವಿ. ಜಯಶೀಲರಾವ್ ಅವರಿಂದ)

ಲಾಲ್‌ಬಹಾದುರ್‌ನಗರ, ಜ. 8– ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲೇ ಬಹುತೇಕ ಕಾಂಗ್ರೆಸ್ಸೇತರ ಸರಕಾರಗಳ ಬಗ್ಗೆ ಜನತೆ ನಿರಾಶೆಗೊಳ್ಳುತ್ತಿದ್ದಾರೆಂದು ಇಂದು ಬೆಳಿಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಂತಿಮವಾಗಿ ಸಿದ್ಧಪಡಿಸಿದ ನಿರ್ಣಯ ತಿಳಿಸಿದೆ.

‘ಪರಸ್ಪರ ವಿರೋಧವಾದ ಧ್ಯೇಯೋದ್ದೇಶಗಳುಳ್ಳ ನಾನಾ ಪಕ್ಷಗಳು ಸೇರಿ ರಚಿತವಾದ ಸಮಯಸಾಧಕ ಮೈತ್ರಿಯ ದೌರ್ಬಲ್ಯ ಹಾಗೂ ಕೊರತೆಗಳನ್ನು’ ಸುದೀರ್ಘವಾಗಿ ಪ್ರಸ್ತಾಪಿಸಿರುವ ಈ ನಿರ್ಣಯ, ಪ್ರಜಾಪ್ರಭುತ್ವದಲ್ಲಿ ಅಪನಂಬಿಕೆ, ಜವಾಬ್ದಾರಿ ಸ್ಥಾನಗಳಿಂದ ಕರ್ತವ್ಯ ನಿರ್ವಹಿಸದೆ ಪಲಾಯನ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿಧಾನಗಳನ್ನು ಆಲಕ್ಷಿಸಿ, ಪ್ರಶ್ನೆಗಳನ್ನು ಬೀದಿಗೆ ಕೊಂಡೊಯ್ಯುವ ಹಿಂಸಾತ್ಮಕ ಮಾರ್ಗದ ಅವಲಂಬನೆ ಮುಂತಾದ ಆಪಾದನೆಗಳನ್ನು ಕಾಂಗ್ರೆಸ್ಸೇತರ ಸರ್ಕಾರಗಳ ಮೇಲೆ ಹೊರಿಸಿದೆ.

ನಂಜನಗೂಡು ಬಳಿ ಇಬ್ಬರನ್ನು ಸಾಯಿಸಿದ ಆನೆಗೆ ಗುಂಡು

ನಂಜನಗೂಡು, ಜ. 8– ಸಮೀಪದ ಅರಣ್ಯದಿಂದ ತಪ್ಪಿಸಿಕೊಂಡು ಬಂದ ಆನೆಯೊಂದು ಪಾಂಡವಪುರದಲ್ಲಿ ಇಂದು ಬೆಳಿಗ್ಗೆ ಇಬ್ಬರ ಬಲಿ ತೆಗೆದುಕೊಂಡಿತು.

ಪಾಂಡವಪುರ ಗ್ರಾಮದ ರೈಲ್ವೆಗೇಟನ್ನು ಪುಡಿ ಮಾಡಿ ಒಳಗೆ ನುಗ್ಗಿದ ಆನೆ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಮ್ಮ ಎಂಬಾಕೆಯನ್ನು ಕೊಂದು ಅಲ್ಲೇ ಆಡುತ್ತಿದ್ದ ಮೂರು ವರ್ಷದ ಮಗುವೊಂದನ್ನು ಮನೆಯ ಜಗುಲಿಯೊಂದರತ್ತ ಎತ್ತಿ ಎಸೆಯಿತು.

ಇನ್ನೊಂದು ಗ್ರಾಮದ ಸಿದ್ದಯ್ಯ ಎಂಬುವನ ಮೇಲೂ ಆನೆ ದಾಳಿ ನಡೆಸಿ ಆತನನ್ನು ತೀವ್ರ ಗಾಯಗೊಳಿಸಿತು. ಈಗ ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿರುವ ಸಿದ್ದಯ್ಯನ ಸ್ಥಿತಿ ಶೋಚನೀಯವಾಗಿದೆ.

ಚಿಕ್ಕಮಗಳೂರಿನಲ್ಲಿ ಮತ್ತೆ ಅಗ್ನಿಸ್ಪರ್ಶ ಲೂಟಿ ಪ್ರಕರಣ

ಚಿಕ್ಕಮಗಳೂರು, ಜ. 8– ಈ ದಿನ ಬೆಳಿಗ್ಗೆ ಊರಿನ ರಸ್ತೆಗಳಲ್ಲಿ ಜನರು ಎಂದಿನಂತೆ ನಿರ್ಭಯವಾಗಿ ಓಡಾಡುತ್ತಿದ್ದಂತೆಯೇ ಒಂದು ಮತದ ಜನರನ್ನು ಇರಿಯಲಾಯಿತೆಂಬ ಸುದ್ದಿ ಹಠಾತ್ತನೆ ಹಬ್ಬಿ, ಷರೀಫ್ ಗಲ್ಲಿಯಲ್ಲಿ ಪರಿಸ್ಥಿತಿ ತೀವ್ರ ಸ್ವರೂಪವನ್ನು ತಾಳಿತು. ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿ ಇಲ್ಲಿನ ಉದ್ರಿಕ್ತ ಜನರನ್ನು ಚದುರಿಸಿದರು.

ಕಳೆದ ಶನಿವಾರ ಇಲ್ಲಿ ನಡೆದ ಮತೀಯ ಘರ್ಷಣೆಗಳ ತರುವಾಯ, ನಿನ್ನೆ ಇಲ್ಲಿ ಜಿಲ್ಲಾಧಿಕಾರಿ ಶ್ರೀ ಜಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಶಾಂತಿ ಸ್ಥಾಪನೆಗಾಗಿ ಶಾಂತಿ ಸಮಿತಿ ಸೇರಿ ತೀರ್ಮಾನ ಕೈಗೊಂಡ ಫಲವಾಗಿ ರಾತ್ರಿ ಪರಿಸ್ಥಿತಿ ಶಾಂತವಾಗಿತ್ತು.

ಆಂಧ್ರ–ಕರ್ನಾಟಕ ಮೈತ್ರಿ ಭವನ ಶಂಕುಸ್ಥಾಪನೆ (ಎಸ್.ವಿ. ಜಯಶೀಲರಾವ್ ಅವರಿಂದ)

ಲಾಲ್‌ಬಹಾದುರ್‌ನಗರ, ಜ. 8– ಶತಮಾನಗಳ ಕರ್ನಾಟಕ – ಆಂಧ್ರ ಐತಿಹಾಸಿಕ ಸ್ನೇಹದ ಸಂಕೇತವಾಗಿ ನಿರ್ಮಾಣವಾಗಲಿರುವ ‘ಮೈತ್ರಿ ಭವನ’ದ ಶಂಕುಸ್ಥಾಪನೆಯನ್ನು ನೂತನ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ನೆರವೇರಿಸಿದರು.

ಶ್ರೀ ನಿಜಲಿಂಗಪ್ಪ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಶ್ರೀ ಬ್ರಹ್ಮಾನಂದ ರೆಡ್ಡಿ ಅವರುಗಳು ಕಟ್ಟಡದ ನಿಧಿಗೆ ತಲಾ 1001 ರೂಪಾಯಿ ಕಾಣಿಕೆ ನೀಡಿದರು.

1956ರಲ್ಲಿ ಸ್ಥಾಪಿತವಾದ ಕನ್ನಡ ಮೈತ್ರಿ ಸಂಘ ಐದೂವರೆ ಲಕ್ಷ ರೂಪಾಯಿ ಖರ್ಚಿನಲ್ಲಿ ಭವನವೊಂದನ್ನು ನಿರ್ಮಿಸಲಿದೆ.

ಕನ್ನಡಿಗರು ಇಲ್ಲಿ ಬಂದು ನೆಲೆಸಿ ಹೈದರಾಬಾದಿನ ಜೀವನದ ಒಂದು ಭಾಗವಾಗಿ ಮಿಲನಗೊಂಡಿರುವುದಕ್ಕಾಗಿ ಶ್ರೀ ನಿಜಲಿಂಗಪ್ಪ ಅವರು ಇಲ್ಲಿನ ಕನ್ನಡಿಗರನ್ನು ಅಭಿನಂದಿಸಿದರು.

ಬ್ಯಾಂಕ್ ರಾಷ್ಟ್ರೀಕರಣಕ್ಕೆ ಮತ್ತೆ ಸೋಷಲಿಸ್ಟ್ ಗುಂಪಿನ ಆಗ್ರಹ

ಲಾಲ್‌ಬಹಾದುರ್‌ನಗರ, ಜ. 8– ಬ್ಯಾಂಕ್ ಮತ್ತು ಸಾಮಾನ್ಯ ವಿಮೆ ರಾಷ್ಟ್ರೀಕರಣಕ್ಕೆ ಸೋಷಲಿಸ್ಟ್ ಕಾರ್ಯಕ್ರಮ ಪ್ರತಿಪಾದಿಸುವ ಕಾಂಗ್ರೆಸ್ ವೇದಿಕೆ ಇಂದು ಮತ್ತೊಮ್ಮೆ ತನ್ನ ಸಮಾವೇಶವೊಂದರಲ್ಲಿ ಒತ್ತಾಯ ಮಾಡಿತು.

ಪಕ್ಷ ರೂಪಿಸಿಕೊಂಡಿರುವ ಧ್ಯೇಯೋದ್ದೇಶಗಳ ಸಿದ್ಧಿಗಾಗಿ ತರುಣ ಕಾಂಗ್ರೆಸ್ಸಿಗರು ಮುನ್ನಡೆಯಬೇಕೆಂದು ಸಮಾವೇಶವನ್ನು ಉದ್ಘಾಟಿಸಿದ ಕೇಂದ್ರ ಆಹಾರ ಸಚಿವ ಶ್ರೀ ಜಗಜೀವನ ರಾಂ ಕರೆಕೊಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.