ಸೋಮವಾರ, ಆಗಸ್ಟ್ 3, 2020
26 °C

ಸಲಿಂಗಕಾಮ: ಸರ್ಕಾರ ವಿರೋಧಿಸುವ ಸಾಧ್ಯತೆ ಕಡಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಲಿಂಗಕಾಮ: ಸರ್ಕಾರ ವಿರೋಧಿಸುವ ಸಾಧ್ಯತೆ ಕಡಿಮೆ

ನವದೆಹಲಿ: ಸಲಿಂಗ ಲೈಂಗಿಕ ಸಂಬಂಧವನ್ನು ಅಪರಾಧಮುಕ್ತಗೊಳಿಸುವ ವಿಚಾರವನ್ನು ಸುಪ್ರೀಂ ಕೋರ್ಟ್‌ ಮರುಪರಿಶೀಲನೆಗೆ ಒಳಪಡಿಸುವಾಗ ಕೇಂದ್ರ ಸರ್ಕಾರ ಅದನ್ನು ವಿರೋಧಿಸುವ ಸಾಧ್ಯತೆ ಕಡಿಮೆ ಇದೆ.

ರಾಜಕೀಯ ಕಾರಣಗಳಿಂದಾಗಿ ಈ ವಿಚಾರದ ಬಗ್ಗೆ ಬಿಜೆಪಿ ಸ್ಪಷ್ಟ ನಿರ್ಧಾರವನ್ನು ಈವರೆಗೆ ಪ್ರಕಟಿಸಿಲ್ಲ. ಆದರೆ ಕ್ರಮೇಣ ಪಕ್ಷದ ನಿಲುವು ಬದಲಾಗಬಹುದು ಎಂದು ಪಕ್ಷದ ಮೂಲಗಳು ಹೇಳಿವೆ. ನ್ಯಾಯಾಲಯವೇ ತನ್ನ ತೀರ್ಪಿನ ಮೂಲಕ ಸ್ಪಷ್ಟ ನಿರ್ಧಾರ ಪ್ರಕಟಿಸಿ ಕೇಂದ್ರ ಸರ್ಕಾರದ ಕೆಲಸವನ್ನು ಸುಲಭವಾಗಿಸಬಹುದು ಎಂಬ ನಿರೀಕ್ಷೆಯೂ ಪಕ್ಷದ ಕೆಲವು ಮುಖಂಡರಲ್ಲಿ ಇದೆ.

ಕೇಂದ್ರ ಸರ್ಕಾರದ ನಿಲುವು ಏನು ಎಂಬುದನ್ನು ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಕೇಳಬಹುದು. ಹಾಗಾಗಿ ಸ್ಪ‍ಷ್ಟ ನಿರ್ಧಾರಕ್ಕೆ ಬರುವುದು ಕೇಂದ್ರಕ್ಕೆ ಅನಿವಾರ್ಯವಾಗಲಿದೆ.

‘ಸಲಿಂಗ ಸಂಬಂಧವನ್ನು ಅಪರಾಧ ಎಂದು ಪರಿಗಣಿಸಬಾರದು. ಹಾಗೆಯೇ ಅದನ್ನು ವೈಭವೀಕರಿಸಲೂಬಾರದು’ ಎಂಬ ನಿಲುವನ್ನು ಆರ್‌ಎಸ್‌ಎಸ್‌ ಎರಡು ವರ್ಷಗಳ ಹಿಂದೆ ತಳೆದಿತ್ತು. ಆರ್‌ಎಸ್‌ಎಸ್‌ನ ಮುಖಂಡ ದತ್ತಾತ್ರೇಯ ಹೊಸಬಾಳೆ ಈ ನಿಲುವನ್ನು ಬಹಿರಂಗಪಡಿಸಿದ್ದರು. ಆಗ ಇದು ಬಿಜೆಪಿಯಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.

2013ರಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದ ಈಗಿನ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ‘ಸಲಿಂಗ ಲೈಂಗಿಕ ಸಂಬಂಧ ಅಸಹಜ’ ಎಂದು ಹೇಳಿದ್ದರು. ಆದರೆ, ಸಲಿಂಗ ಲೈಂಗಿಕತೆಯನ್ನು ಅಪರಾಧಮುಕ್ತಗೊಳಿಸಿದ ದೆಹಲಿ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ ನಿರ್ಧಾರವನ್ನು ಬಿಜೆಪಿ ಹಿರಿಯ ಮುಖಂಡ ಅರುಣ್‌ ಜೇಟ್ಲಿ ಟೀಕಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಈ ವಿಚಾರದಲ್ಲಿ ಈವರೆಗೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಆದರೆ, ಸಲಿಂಗ ಲೈಂಗಿಕತೆಯನ್ನು ಅಪರಾಧಮುಕ್ತಗೊಳಿಸುವ ಸುಳಿವನ್ನು ಸುಪ್ರೀಂ ಕೋರ್ಟ್‌ ಈಗ ನೀಡಿದೆ.

ಸಲಿಂಗಕಾಮ: ಕಾನೂನು ಹೋರಾಟದ ಹಾದಿ

2001: ಇಬ್ಬರು ವಯಸ್ಕರ ನಡುವಣ ಸಮ್ಮತ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಬೇಕು ಎಂದು ಮನವಿ ಮಾಡಿ ಸಲಿಂಗಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ನಾಜ್‌ ಫೌಂಡೇಷನ್‌ನಿಂದ ದೆಹಲಿ ಹೈಕೋರ್ಟ್‌ಗೆ ಅರ್ಜಿ

2004, ಸೆಪ್ಟೆಂಬರ್‌ 2: ಅರ್ಜಿ ವಜಾ ಮಾಡಿದ ಹೈಕೋರ್ಟ್‌. ಅದೇ ತಿಂಗಳು ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಸಲಿಂಗಿಗಳ ಹಕ್ಕುಗಳ ಕಾರ್ಯಕರ್ತರು

ನವೆಂಬರ್‌ 3: ಪುನರ್‌ ಪರಿಶೀಲನಾ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

ಡಿಸೆಂಬರ್‌: ಹೈಕೋರ್ಟ್‌ ಆದೇಶದ ವಿರುದ್ಧ ಸಲಿಂಗಿಗಳ ಹಕ್ಕುಗಳ ಕಾರ್ಯಕರ್ತರಿಂದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ಏಪ್ರಿಲ್‌, 2006: ಆದ್ಯತೆಯ ಮೇರೆಗೆ ಅರ್ಜಿಯನ್ನು ಪರಿಗಣಿಸುವಂತೆ ಹೈಕೋರ್ಟ್‌ಗೆ ಸೂಚಿಸಿದ ಸುಪ್ರೀಂ ಕೋರ್ಟ್‌

ಸೆಪ್ಟೆಂಬರ್‌, 2008: ಸಲಿಂಗಕಾಮ ಅಪರಾಧವೇ ಅಲ್ಲವೇ ಎಂಬ ವಿಚಾರದಲ್ಲಿ ಕೇಂದ್ರ ಗೃಹ ಮತ್ತು ಆರೋಗ್ಯ ಸಚಿವಾಲಯಗಳ ನಡುವೆ ಭಿನ್ನಾಭಿಪ್ರಾಯ. ಪ್ರತಿಕ್ರಿಯೆ ನೀಡಲು ಹೆಚ್ಚುವರಿ ಸಮಯ ನೀಡಲು ಹೈಕೋರ್ಟ್‌ಗೆ ಕೇಂದ್ರ ಸರ್ಕಾರದಿಂದ ಮನವಿ. ಮನವಿ ತಿರಸ್ಕಾರ. ಅಂತಿಮ ವಾದ–ಪ್ರತಿವಾದ ಆರಂಭ

ಸೆಪ್ಟೆಂಬರ್‌ 25: ನೈತಿಕತೆಯ ಆಧಾರದಲ್ಲಿ ಸಲಿಂಗಕಾಮವನ್ನು ಅಪರಾಧ ಎಂದು ಘೋಷಿಸಿ ತಮ್ಮ ಮೂಲಭೂತಹಕ್ಕುಗಳನ್ನು ಸರ್ಕಾರಕ್ಕೆ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸಲಿಂಗಿಗಳ ಹಕ್ಕುಗಳ ಕಾರ್ಯಕರ್ತರಿಂದ ವಾದ

ಸೆಪ್ಟೆಂಬರ್‌ 26: ಸಲಿಂಗಕಾಮ ಕಾನೂನಿನ ವಿಚಾರವಾಗಿ ಕೇಂದ್ರ ಗೃಹ ಮತ್ತು ಆರೋಗ್ಯ ಸಚಿವಾಲಯಗಳು ಭಿನ್ನ ನಿಲುವಿನ ಪ್ರಮಾಣಪತ್ರ ಸಲ್ಲಿಸಿದ್ದಕ್ಕೆ ಕೇಂದ್ರಕ್ಕೆ ಹೈಕೋರ್ಟ್‌ ತರಾಟೆ

‘ಸಲಿಂಗಕಾಮ ಅನೈತಿಕ. ಅದು ಅಪರಾಧ ಅಲ್ಲ ಎಂದು ಘೋಷಿಸಿದರೆ ಸಮಾಜವು ನೈತಿಕವಾಗಿ ಅಧಃಪತನಕ್ಕೆ ಇಳಿಯುತ್ತದೆ’ ಎಂದು ವಾದಿಸಿದ ಕೇಂದ್ರ

ಅಕ್ಟೋಬರ್‌ 15, 2008: ಸಲಿಂಗಕಾಮದ ಮೇಲೆ ನಿರ್ಬಂಧ ಹೇರಲು ಧರ್ಮಗ್ರಂಥಗಳನ್ನು ಆಧಾರವಾಗಿಟ್ಟುಕೊಂಡ ಕೇಂದ್ರ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌. ವಾದದ ಸಮರ್ಥನೆಗೆ ವೈಜ್ಞಾನಿಕ ವರದಿಗಳನ್ನು ಮಂಡಿಸುವಂತೆ ಸೂಚನೆ

ನವೆಂಬರ್‌: ‘ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಸಂಸತ್ತಿನ ಹಕ್ಕು. ನ್ಯಾಯಾಂಗವು ಇಂತಹ ವಿಚಾರಗಳಲ್ಲಿ ಮಧ್ಯಪ್ರವೇಶಿಸಬಾರದು ಎಂದು ಕೇಂದ್ರದಿಂದ ಲಿಖಿತ ಹೇಳಿಕೆ

ನವೆಂಬರ್‌ 7: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಜುಲೈ, 2009: ಸಲಿಂಗಿ ಕಾರ್ಯಕರ್ತರ ಅರ್ಜಿ ಮಾನ್ಯ ಮಾಡಿದ ದೆಹಲಿ ಹೈಕೋರ್ಟ್‌, ಸಲಿಂಗಕಾಮ ಅಪರಾಧ ಅಲ್ಲ ಎಂದು ತೀರ್ಪು

ಜುಲೈ: ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ದೆಹಲಿಯ ಜ್ಯೋತಿಷಿ. ತದ ನಂತರ ತೀರ್ಪನ್ನು ವಿರೋಧಿಸಿ ಹಲವರಿಂದ ಅರ್ಜಿ

ಫೆಬ್ರುವರಿ 15, 2012: ಅಂತಿಮ ಹಂತದ ದಿನಂಪ್ರತಿ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್‌

ಮಾರ್ಚ್ 27, 2012: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ಡಿಸೆಂಬರ್‌ 11,2013: 2009ರ ದೆಹಲಿ ಹೈಕೋರ್ಟ್‌ ತೀರ್ಪು ವಜಾ ಮಾಡಿದ ‘ಸುಪ್ರೀಂ’. ಸಲಿಂಗಕಾಮ ಅಪರಾಧ ಎಂದು ಘೋಷಣೆ

ಡಿಸೆಂಬರ್‌ 20, 2013: ಸಲಿಂಗಕಾಮದ ವಿರುದ್ಧ ಹೇರಲಾಗಿರುವ ನಿರ್ಬಂಧವನ್ನು ವಾಪಸ್‌ ಪಡೆಯುವಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮನವಿ.

ಜನವರಿ 28, 2014: ಕೇಂದ್ರದ ಅರ್ಜಿಯನ್ನು ವಜಾ ಮಾಡಿದ ‘ಸುಪ್ರೀಂ’

ಜೂನ್‌ 30, 2016: ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸುವಂತೆ ಮನವಿ ಮಾಡಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಐವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಕಳುಹಿಸಿದ ಇಬ್ಬರು ನ್ಯಾಯಮೂರ್ತಿಗಳ ನ್ಯಾಯಪೀಠ

ಆಗಸ್ಟ್ 24, 2017: ‘ಖಾಸಗಿತನವು ಮೂಲಭೂತ ಹಕ್ಕು’ ಎಂದು ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ. ‘ಲೈಂಗಿಕ ಪ್ರವೃತ್ತಿಯು ವ್ಯಕ್ತಿಯೊಬ್ಬನ ಖಾಸಗಿತನದ ಅತ್ಯಂತ ಪ್ರಮುಖ ಭಾಗ’ ಎಂದು ಪ್ರತಿಪಾದನೆ.

ಜನವರಿ 8, 2018: ಐಪಿಸಿ ಸೆಕ್ಷನ್‌ 377 ಅನ್ನು ಸುಪ್ರೀಂಕೋರ್ಟ್‌ನ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಿದ ಸುಪ್ರೀಂ ಕೋರ್ಟ್‌. ‘2013ರ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ’ ಎಂದು ಹೇಳಿಕೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.