ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್‌ಗೆ ಬೆಂಕಿ: ಐವರ ಆಹುತಿ

ಕಲಾಸಿಪಾಳ್ಯದ ಕುಂಬಾರ ಸಂಘದ ಬಹುಮಹಡಿ ಕಟ್ಟಡದಲ್ಲಿ ಅವಘಡ
Last Updated 8 ಜನವರಿ 2018, 19:42 IST
ಅಕ್ಷರ ಗಾತ್ರ

ಬೆಂಗಳೂರು: ಕಲಾಸಿಪಾಳ್ಯದ ಕುಂಬಾರ ಸಂಘದ ಬಹುಮಹಡಿ ಕಟ್ಟಡದಲ್ಲಿರುವ ‘ಕೈಲಾಶ್‌ ಬಾರ್‌ ಹಾಗೂ ರೆಸ್ಟೋರಂಟ್‌’ನಲ್ಲಿ ಸೋಮವಾರ ನಸುಕಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಐವರು ನೌಕರರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಾಳೇನಹಳ್ಳಿಯ ರಂಗಸ್ವಾಮಿ (22), ಅವರ ಸಂಬಂಧಿ ಜೈಪ್ರಸಾದ್ (20), ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದ ಎಚ್.ಎಸ್‌.ಮಂಜುನಾಥ್‌ (45), ಮುಕ್ಕಿಕೆರೆಯ ಮಹೇಶ್‌ (35) ಹಾಗೂ ಮಂಡ್ಯ ಜಿಲ್ಲೆಯ ಶಿವಳ್ಳಿಯ ಕೀರ್ತಿ (19) ಮೃತರು.

ಮೂರು ಅಂತಸ್ತಿನ ಈ ಕಟ್ಟಡದಲ್ಲಿ ಅರ್ಧ ಭಾಗ ವಿದ್ಯಾರ್ಥಿಗಳ ಹಾಸ್ಟೆಲ್‌ ಇದೆ. ಇನ್ನರ್ಧ ಸ್ಥಳದಲ್ಲಿ 24 ವಾಣಿಜ್ಯ ಮಳಿಗೆಗಳಿವೆ. ಆ ಪೈಕಿ ನೆಲಮಹಡಿಯ ಒಂದು ಮಳಿಗೆಯಲ್ಲಿ ಬಾರ್‌ ಇದೆ.

ಭಾನುವಾರ ರಾತ್ರಿ 1.15 ಗಂಟೆವರೆಗೆ ವಹಿವಾಟು ನಡೆದಿತ್ತು. ಬಳಿಕ ನೌಕರರು ರೋಲಿಂಗ್‌ ಷಟರ್‌ ಹಾಕಿಒಳಗಿನಿಂದ ಲಾಕ್‌ ಮಾಡಿ ಮಲಗಿದ್ದರು.

‘ನಸುಕಿನ ವೇಳೆ 2.45ರ ಸುಮಾರಿಗೆ ನೆಲ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಅದನ್ನು ನೋಡಿದ್ದ ಸ್ಥಳೀಯರು, ಕ್ಯಾಷಿಯರ್‌ ರಾಮಚಂದ್ರಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅವರು ಸ್ಥಳಕ್ಕೆ ಬರುವಷ್ಟರಲ್ಲೇ ಐವರು ಮೃತಪಟ್ಟಿದ್ದರು’ ಎಂದು ಕಲಾಸಿಪಾಳ್ಯ ಪೊಲೀಸರು ತಿಳಿಸಿದರು.

‘ಕೊಠಡಿಯಲ್ಲಿದ್ದ ಐವರೂ ಸಹಾಯಕ್ಕಾಗಿ ಕೂಗಿಕೊಂಡಿದ್ದರು. ಮಾರುಕಟ್ಟೆಯಲ್ಲಿದ್ದ ತರಕಾರಿ ವ್ಯಾಪಾರಿಗಳು ಹಾಗೂ ವಾಹನ ಚಾಲಕರು ಚೀರಾಟ ಕೇಳಿ ಅವರನ್ನು ರಕ್ಷಿಸಲು ಹೋಗಿದ್ದರು. ಷಟರ್‌ ಲಾಕ್‌ ಆಗಿದ್ದರಿಂದ, ಅದನ್ನು ತೆರೆಯಲು ಸಾಧ್ಯವಾಗಿರಲಿಲ್ಲ. 15 ನಿಮಿಷಗಳಲ್ಲೇ ಒಳಗಿನಿಂದ ಕಿರುಚಾಟ ನಿಂತು ಹೋಗಿತ್ತು.’

‘ರಾತ್ರಿ 3.05 ಗಂಟೆಗೆ ರಾಮಚಂದ್ರ ಸ್ಥಳಕ್ಕೆ ಬಂದಾಗ ಬಾರ್ ಸಂಪೂರ್ಣವಾಗಿ ಸುಟ್ಟು ಹೋಗಿತ್ತು.  ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ, ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದರು’ ಎಂದು ಅವರು ಹೇಳಿದರು.

ತಬ್ಬಿದ ಸ್ಥಿತಿಯಲ್ಲಿ ಮೃತದೇಹಗಳು: ‘ಕೊಠಡಿಯ ಒಳಗೆ ಹೊಗೆ ಆವರಿಸಿದ್ದರಿಂದ ಭಯಗೊಂಡ ಮೂವರು ನೌಕರರು ಶೌಚಾಲಯಕ್ಕೆ ಹೋಗಿ ಕುಳಿತುಕೊಂಡಿದ್ದರು. ಇನ್ನಿಬ್ಬರು, ಕೊಠಡಿಯಲ್ಲಿದ್ದರು. ಶೌಚಾಲಯದಲ್ಲಿದ್ದವರು ಪರಸ್ಪರ ತಬ್ಬಿ ಹಿಡಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಅವರ ಮೃತದೇಹಗಳು ಒಬ್ಬರನ್ನೊಬ್ಬರು ಹಿಡಿದುಕೊಂಡಿದ್ದ ಸ್ಥಿತಿಯಲ್ಲಿದ್ದವು. ದಟ್ಟ ಹೊಗೆಯಿಂದಾಗಿ ಉಸಿರಾಡಲಾಗದೇ ಐವರು ಮೃತಪಟ್ಟಿದ್ದಾರೆ’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದರು.
*
ಮಾಲೀಕರ ಅಣ್ಣ ಸೇರಿ ಇಬ್ಬರ ಬಂಧನ
ಅವಘಡ ಸಂಬಂಧ ಬಾರ್‌ ಮಾಲೀಕ ದಯಾಶಂಕರ್, ಅವರ ಅಣ್ಣ ವಿ.ಆರ್‌.ಪ್ರಕಾಶ್‌, ಸ್ನೇಹಿತ ಸೋಮಶೇಖರ್‌ ಹಾಗೂ ಕುಂಬಾರ ಸಂಘದ ವ್ಯವಸ್ಥಾಪಕರ ವಿರುದ್ಧ ಉದ್ದೇಶಪೂರ್ವಕವಲ್ಲದ ಹತ್ಯೆ (ಐಪಿಸಿ 304) ಆರೋಪದಡಿ ಕಲಾಸಿಪಾಳ್ಯ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಈ ಪೈಕಿ ‍‍ಪ್ರಕಾಶ್‌ ಹಾಗೂ ಸೋಮಶೇಖರ್‌ ಅವರನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.

ಬಾರ್‌ಗೆ ಇದ್ದುದು ಒಂದೇ ದ್ವಾರ: ‘ಬಾರ್‌ಗೆ ಇದ್ದುದು ಒಂದೇ ದ್ವಾರ. ಇಲ್ಲಿ ಯಾವುದೇ ತುರ್ತು ನಿರ್ಗಮನ ವ್ಯವಸ್ಥೆ ಇರಲಿಲ್ಲ. ಛಾವಣಿಯೂ ಕಳಪೆ ಗುಣಮಟ್ಟದ್ದಾಗಿತ್ತು. ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಬಾರ್‌ ಕ್ಯಾಷಿಯರ್‌ ರಾಮಚಂದ್ರ ನೀಡಿದ್ದ ದೂರಿನನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT