ಮಂಗಳವಾರ, ಆಗಸ್ಟ್ 4, 2020
22 °C

ಧರ್ಮದ ದ್ವೀಪಕ್ಕೆ ಮಾನವೀಯತೆಯ ಸೇತುವೆ

ಕೋಡಿಬೆಟ್ಟು ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

ಧರ್ಮದ ದ್ವೀಪಕ್ಕೆ ಮಾನವೀಯತೆಯ ಸೇತುವೆ

ಮಂಗಳೂರು: ದೀಪಕ್‍ ರಾವ್‍ ಹಾಗೂ ಬಶೀರ್‍ ಸಾವಿನಿಂದಾಗಿ ಕರಾವಳಿ ಭಾಗದಲ್ಲಿ ಹಲವು ದಿನಗಳಿಂದ ಆತಂಕದ ವಾತಾವರಣ ಇದ್ದರೂ ಸೌಹಾರ್ದದ ವಾತಾವರಣಕ್ಕೆ ಧಕ್ಕೆ ಬಂದಿಲ್ಲ. ದ್ವೀಪವೊಂದರಲ್ಲಿ ನಡೆದ ಉರೂಸ್‌ಗೆ ಧರ್ಮದ ಹಂಗಿಲ್ಲದೇ ಸೇತುವೆ ನಿರ್ಮಿಸಿದ ಆಪ್ತ ವಿದ್ಯಮಾನವೊಂದು ಗಮನ ಸೆಳೆಯುವಂತಿದೆ.

ಮಂಗಳೂರಿನಿಂದ ಸುಮಾರು 10 ಕಿ.ಮೀ. ದೂರದ ಕಣ್ಣೂರಿನಲ್ಲಿ ನೇತ್ರಾವತಿ ನದಿ ಮಧ್ಯದ ಕುದುರು ‘ನಡುಪಳ್ಳಿ’ ಯಲ್ಲಿ ರಹ್ಮಾನಿಯಾ ಮಸೀದಿ ವಠಾರದ ದರ್ಗಾ ಉರುಸ್‌ ಸಂಭ್ರಮದಲ್ಲಿ ಎಲ್ಲ ಧರ್ಮದವರೂ ಭಾಗಿಯಾಗಿದ್ದಾರೆ. ಇದೇ 6 ಮತ್ತು 7ರಂದು ಉರುಸ್‌ ಉತ್ಸವ ನಡೆದಿದೆ. ವಿಶೇಷವೆಂದರೆ ನಡುಪಳ್ಳಿಗೆ ಹೋಗಲು ಸೇತುವೆ ಇಲ್ಲ. ಉರುಸ್‌ ಸಂದರ್ಭ ಸಾವಿರಾರು ಮಂದಿ ಭಕ್ತರು ಬರುವುದರಿಂದ ನದಿ ಬದಿಯಲ್ಲಿ ಮರಳುಗಾರಿಕೆ ನಡೆಸುವ ದಕ್ಕೆ(ದೋಣಿಗಳ ತಂಗುದಾಣ)ಯಲ್ಲಿ ಕೆಲಸ ಮಾಡುವವರೆಲ್ಲರೂ ಸೇರಿ ದೋಣಿಗಳನ್ನೇ ಸಾಲಾಗಿ ಇರಿಸಿ ವಿಭಿನ್ನ ಸೇತುವೆಯೊಂದನ್ನು ನಿರ್ಮಿಸಿದ್ದಾರೆ.

ಎರಡು ದಿನಗಳ ಮಟ್ಟಿಗೆ ಇರುವ ತಾತ್ಕಾಲಿಕ ಸೇತುವೆ ನಿರ್ಮಾಣ ಕೆಲಸದಲ್ಲಿ ಮರಳುಗಾರಿಕೆ ಮಾಡುವ ಶ್ರಮಿಕರು, ಸ್ಥಳೀಯ ಕಾರ್ಮಿಕರು, ಮುಸ್ಲಿಂ ಭಕ್ತರು ಜಾತಿ ಭೇದವಿಲ್ಲದೇ ಭಾಗವಹಿಸುತ್ತಾರೆ. ಜಿಲ್ಲೆಯಲ್ಲಿ ನಡೆದ ಕೊಲೆ ಕೃತ್ಯಗಳು ಇಲ್ಲಿನವರ ಪ್ರೀತಿಗೆ ಅಡ್ಡಿ ಮಾಡಿಲ್ಲ. ಶುಕ್ರವಾರವೇ ಸೇತುವೆ ನಿರ್ಮಣ ಕೆಲಸ ಶುರುವಾಗಿದ್ದು, ಸಂಜೆ ವೇಳೆಗೆ ಎಲ್ಲ ದೋಣಿಗಳನ್ನು ಬಿಗಿದು ಹಸಿರು ಹಾಸು ಹಾಸಿ, ಲೈಟುಗಳನ್ನು ಕಟ್ಟಿ ಆಕರ್ಷಕ ಸೇತುವೆ ನಿರ್ಮಿಸಲಾಗಿತ್ತು.

ಈ ಮುನ್ನ ನಡುಪಳ್ಳಿಗೆ ಭಕ್ತರನ್ನು ದೋಣಿಯಲ್ಲಿ ಉಚಿತವಾಗಿ ಕರೆದೊಯ್ಯಲಾಗುತ್ತಿತ್ತು. ಆದರೆ ಭಕ್ತಿಯ ಉತ್ಸಾಹದಲ್ಲಿ ದೋಣಿಯಲ್ಲಿ ಜನರ ಹೊಯ್ದಾಟದಿಂದ ಆತಂಕ ಉಂಟಾಗುತ್ತಿತ್ತು. ಹಾಗಾಗಿ ಮೂರು ವರ್ಷಗಳಿಂದ ಈ ತಾತ್ಕಾಲಿಕ ಸೇತುವೆಯ ನಿರ್ಮಿಸಲಾಗುತ್ತಿದೆ ಎಂದು ಮಸೀದಿಯ ಮದರಸ ಕಾರ್ಯದರ್ಶಿ ಡಿ. ಅಬ್ದುಲ್‌ ಹಮೀದ್‌  ವಿವರಿಸುತ್ತಾರೆ.

ಮರಳುದೋಣಿಗಳನ್ನು ನಿರ್ವಹಿಸುವ ಮಹಮ್ಮದ್‌ ಶರೀಫ್‌ ಸೇತುವೆ ಕಟ್ಟುವ ಪ್ರಕ್ರಿಯೆ ವಿವರಿಸುವುದು ಹೀಗೆ: ‘67 ದೋಣಿಗಳನ್ನು ಸಾಲಾಗಿ ನಿಲ್ಲಿಸಿ ಅದರ ಮೇಲೆ ಕಬ್ಬಿಣದ ಹಲಗೆಗಳನ್ನು ಜೋಡಿಸಿ ಮಾಡುವ ಸುಂದರ ಸೇತುವೆ ಇದು. ಹಿಂದೂಗಳ ಅನೇಕ ದೋಣಿಗಳು ಈ ಸಾಲಿನಲ್ಲಿವೆ.  ಸ್ವ ಇಚ್ಛೆಯಿಂದ ದೋಣಿ ತಂದು ನಿಲ್ಲಿಸುತ್ತಾರೆ. ಬಹಳ ಪುರಾತನವಾದ ಈ ದರ್ಗಾ 1923ರಲ್ಲಿ ಬೃಹತ್‌ ನೆರೆ ಬಂದು ಕೊಚ್ಚಿಹೋಯಿತು. ನದಿಯು ಮೇರೆ ಮೀರಿ ಈ ಕುದುರು ನಿರ್ಮಾಣ ಆಗಿತ್ತು’.

ಮೂರು ವರ್ಷವೂ ತಮ್ಮ ದೋಣಿಗಳನ್ನು ಸೇತುವೆಗೆಂದು ನಿಲ್ಲಿಸುವ ಜಯಶೀಲ ಅಡ್ಯಂತಾಯರು ಶನಿವಾರ ಮಸೀದಿಗೆ ಬೆಲ್ಲ, ಗಂಜಿ ವಾರ್ಷಿಕ ಹರಕೆ ಒಪ್ಪಿಸಿದ್ದು, ಉರುಸ್‌ನ ಸಂಭ್ರಮದಲ್ಲಿ ಭಾಗವಹಿಸಿದ್ದಾರೆ. ‘ಕರಾವಳಿಯಲ್ಲಿ ರಾಜಕೀಯ ಪ್ರೇರಿತ ಘಟನೆಗಳೇನೇ ನಡೆಯಲಿ, ನಮ್ಮೂರಿನ ಸೌಹಾರ್ದಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಅವರು. ಅಂದ ಹಾಗೆ ಈ ದರ್ಗಾಕ್ಕೆ ಭಕ್ತರನ್ನು ಕರೆದೊಯ್ದರೆ ಯಾವ ದೋಣಿಯವರೂ ಶುಲ್ಕ ತಗೊಳ್ಳುವುದಿಲ್ಲ.

‘ಉರುಸ್‌ ದಿನ ಯಾರೂ ಇಲ್ಲಿ ಸ್ವಯಂ ಇಚ್ಛೆಯಿಂದ ಮರಳುಗಾರಿಕೆ ಮಾಡುವುದಿಲ್ಲ’ ಎಂದು ಮರಳುಗಾರಿಕೆಯ ಕೆಲಸ ನಿರ್ವಹಿಸುವ ರಾಜೇಶ್‌ ದರ್ಗಾದ ಬಗ್ಗೆ ಇರುವ ಶ್ರದ್ಧೆಯನ್ನು ವಿವರಿಸುತ್ತಾರೆ.

ಸೋಮವಾರ ಮುಂಜಾನೆ ಉರುಸ್‌ ಮುಗಿದ ಬಳಿಕ ದೋಣಿಗಳೆಲ್ಲ ಕಳಚಿಕೊಳ್ಳುತ್ತಿದ್ದವು. ರಹ್ಮಾನಿಯಾ ಮಸೀದಿಯ ಕಾರ್ಯದರ್ಶಿ ಇಕ್ಬಾಲ್‌ ಅಹ್ಮದ್‌ ಅವರು ಮತ್ತೊಂದು ಕಾರ್ಯಕ್ರಮಕ್ಕೆ ಸಿದ್ಧರಾಗುತ್ತಿದ್ದರು. ಮಕರ ಸಂಕ್ರಾಂತಿಗೆ ಅಯ್ಯಪ್ಪ ವ್ರತಧಾರಿಗಳು ಕಣ್ಣೂರನ್ನು ಹಾದು ಹೋಗುವಾಗ ಅವರಿಗೆ ಸ್ವಾಗತ ಕೋರಿ, ಶುಭಪ್ರಯಾಣ ಹೇಳುವ ಒಂದು ವಿಶೇಷ ಕಾರ್ಯಕ್ರಮ ಮಾಡಲು ಉತ್ಸುಕರಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.