ರೈತರ ಬೆಳೆಗೆ ನೀರು; ಶಾಸಕರು ಸ್ಪಷ್ಟನೆ ನೀಡಲಿ

7

ರೈತರ ಬೆಳೆಗೆ ನೀರು; ಶಾಸಕರು ಸ್ಪಷ್ಟನೆ ನೀಡಲಿ

Published:
Updated:

ಸಿಂಧನೂರು: ‘ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಫೆಬ್ರುವರಿ 28ರವರೆಗೆ ಮಾತ್ರ ಜಲಾಶಯದಿಂದ ನೀರು ಪೂರೈಕೆಯಾಗುತ್ತದೆ. ಆದರೆ ಕೆಲ ಕಾಂಗ್ರೆಸ್ ಮುಖಂಡರು ಬೇಸಿಗೆ ಬೆಳೆಗೆ ನೀರು ಕೊಡಿಸುವುದಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದಾಗಿ ರೈತರಲ್ಲಿ ಗೊಂದಲ ಉಂಟಾಗಿದ್ದು, ಶಾಸಕ ಹಂಪನಗೌಡ ಬಾದರ್ಲಿ ಅವರು ಕೂಡಲೇ ನೀರು ಕೊಡಿಸುವ ಬಗ್ಗೆ ರೈತರಿಗೆ ಸ್ಪಷ್ಟ ಮಾಹಿತಿ ನೀಡಬೇಕು’ ಎಂದು ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಹಂಪನಗೌಡ ಅವರು ಫೆ.28ರ ವರೆಗೆ ಮಾತ್ರ ನೀರು ಎಂಬ ಹೇಳಿಕೆ ನೀಡಿದರೆ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸವರಾಜ ಹಿರೇಗೌಡರ್, ಬಾಬುಗೌಡ ಬಾದರ್ಲಿ, ಕಾಂಗ್ರೆಸ್ ಮುಖಂಡ ಲಿಂಗರಾಜ ಪಾಟೀಲ ಹಂಚಿನಾಳಕ್ಯಾಂಪ್ ಅವರು ತೆಲಂಗಾಣ ಸರ್ಕಾರದೊಂದಿಗೆ ಶಾಸಕರು ಮಾತುಕತೆ ನಡೆಸಿ ಬೆಳೆಗೆ ನೀರು ಬಿಡಿಸುತ್ತಾರೆ ಎಂದು ರೈತರಿಗೆ ಭರವಸೆ ನೀಡುತ್ತಿದ್ದಾರೆ. ಅಲ್ಲದೆ ಹಂಚಿನಾಳಕ್ಯಾಂಪಿನಲ್ಲಿ ಈ ಕುರಿತು ಡಂಗೂರ ಹಾಕಿಸಲಾಗಿದೆ. ಆದರೆ ಜ.4 ರಂದು ಜಲಸಂಪನ್ಮೂಲ ಸಚಿವರು ಹಾಗೂ ಜನಪ್ರತಿಗಳು ತೆಲಂಗಾಣಕ್ಕೆ ಹೋಗಿ ಬಂದ ನಂತರ 2 ಟಿಎಂಸಿ ನೀರು ಕರ್ನಾಟಕಕ್ಕೆ ಕೊಡುವುದಾಗಿ ಮಾಧ್ಯಮಗಳಲ್ಲಿ ಸುದ್ದಿ ಬಂದಿದೆ ಹೊರತು ಈ ಬಗ್ಗೆ ಶಾಸಕರಾಗಲಿ, ಅಧಿಕಾರಿಗಳಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ’ ಎಂದು ವಿವರಿಸಿದರು.

‘ಚುನಾವಣಾ ವರ್ಷವಾಗಿರುವುದರಿಂದ ಶಾಸಕರು ಹಾಗೂ ಅವರ ಹಿಂಬಾಲಕರು ನೀರಿನ ವಿಷಯದಲ್ಲಿ ಇಂತಹ ಗೊಂದಲದ ಹೇಳಿಕೆ ನೀಡಿ ರೈತರ ದಿಕ್ಕು ತಪ್ಪಿಸುತ್ತಿರುವುದು ಸರಿಯಲ್ಲ. ತೆಲಂಗಾಣ ತನ್ನ ಪಾಲಿನ 2 ಟಿಎಂಸಿ ನೀರು ಬೆಳೆಗೆ ಬಿಡುವ ಕುರಿತು ನೀರಾವರಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್‌ ಅನ್ನು ಕೇಳಿದರೆ ಈ ಬಗ್ಗೆ ಅಧಿಕೃತವಾಗಿ ಸರ್ಕಾರದಿಂದ ಯಾವುದೇ ಆದೇಶಗಳು ಬಂದಿಲ್ಲ ಎಂದು ಉತ್ತರಿಸುತ್ತಿದ್ದಾರೆ. ಇವರಿಗೆ ಮಾಹಿತಿ ಇಲ್ಲವೆಂದರೆ ನೀರು ಬರುವುದಾದರೂ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ನೀರು ಬರುತ್ತದೆ ಎಂಬ ಆಸೆಯಿಂದ ಶೇ 40 ರಷ್ಟು ರೈತರು ಈಗಾಗಲೇ ಭತ್ತದ ಸಸಿ ಮಡಿಗಳನ್ನು ಹಚ್ಚಿ, ಒಂದೆರಡು ಬಾರಿ ಗೊಬ್ಬರ ಹಾಕಿದ್ದಾರೆ. ಆದರೆ ನೀರಾವರಿ ಅಧಿಕಾರಿಗಳು ವಿತರಣಾ ಕಾಲುವೆ 31 ಮತ್ತು 32ರಲ್ಲಿ ನೀರಿನ ಗೇಜ್‌ನ್ನು ವೆಲ್ಡ್ ಮಾಡಿ ನೀರು ಕಡಿಮೆ ಪ್ರಮಾಣದಲ್ಲಿ ಹರಿಯುವಂತೆ ಮಾಡಿದ್ದಾರೆ ಎಂದು ರೈತರು ತಮ್ಮ ಗಮನಕ್ಕೆ ತಂದಿದ್ದಾರೆ. ಈಗ ಬರುವ ನೀರನ್ನೆ ಈ ರೀತಿಯಾಗಿ ಕಡಿತಗೊಳಿಸಿದರೆ ಬೆಳೆ ಬೆಳೆಯಲು ಹೇಗೆ ಸಾಧ್ಯ. ಕೂಡಲೇ ಶಾಸಕರು ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮೊಸಳೆ ಕಣ್ಣೀರು ಸುರಿಸಿ ಬೇಜವಾಬ್ದಾರಿಯಿಂದ ವರ್ತಿಸಿದರೆ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದಿಂದ ಬೀದಿಗಿಳಿದು ಹೋರಾಟ ಮಾಡಲಾಗುವುದು’ ಎಂದು ನಾಡಗೌಡ ಎಚ್ಚರಿಸಿದರು.

‘ಮಂಗಳೂರಿನಲ್ಲಿ ದೀಪಕ್‌ ರಾವ್ ಹಾಗೂ ಬಶೀರ್ ಎಂಬ ಅಮಾಯಕರ ಹತ್ಯೆಯಾಗಿರುವುದು ಖಂಡನೀಯ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ, ಧರ್ಮಗಳ ಹೆಸರಿನಲ್ಲಿ ಕೋಮು ಪ್ರಚೋದನೆ ನೀಡಿ ಅಮಾಯಕರನ್ನು ಬಲಿಕೊಟ್ಟು, ಸಾವಿನ ಮನೆಗಳಲ್ಲಿ ರಾಜಕಾರಣ ಮಾಡುತ್ತಿವೆ’ ಎಂದು ಆಪಾದಿಸಿದರು.

ತುರ್ವಿಹಾಳ ಪಟ್ಟಣದ ಬಳಿ ನೂತನವಾಗಿ ನಿರ್ಮಿಸಲಾಗಿರುವ ನೂತನ ಕೆರೆ ಕಾಮಗಾರಿಯ ವೀಕ್ಷಣೆ ಮತ್ತು ಪರಿಶೀಲನೆಗೆ ಹಿರಿಯ ಅಧಿಕಾರಿಗಳ ತಂಡ ಜನವರಿ 9 ರಂದು ಬರುತ್ತಿದ್ದು, ಅಲ್ಲಿಗೆ ತಮಗೂ ಆಹ್ವಾನ ಬಂದಿದೆ. ಕಾರ್ಯಕರ್ತರು ಹಾಗೂ ಅನುಭವಿ ಎಂಜಿನಿಯರೊಂದಿಗೆ ಹೋಗಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಗಮನ ಸೆಳೆಯಲಾಗುವುದು ಎಂದು ನಾಡಗೌಡ ತಿಳಿಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಲಿಂಗಪ್ಪ ದಢೇಸುಗೂರು, ವಕ್ತಾರ ಬಸವರಾಜ ನಾಡಗೌಡ, ಮುಖಂಡರಾದ ಅಶೋಕಗೌಡ ಗದ್ರಟಗಿ, ಜಿ.ಸತ್ಯನಾರಾಯಣ, ಕೆ.ಜಿಲಾನಿಪಾಷಾ, ದೇವೇಂದ್ರಗೌಡ, ಧರ್ಮನಗೌಡ ಮಲ್ಕಾಪುರ, ಎಂ.ಡಿ.ನದೀಮುಲ್ಲಾ, ಸಾಯಿರಾಮಕೃಷ್ಣ, ವೆಂಕಟೇಶ ನಂಜಲದಿನ್ನಿ, ಸುಮಿತ್ ತಡಕಲ್, ವೀರೇಶ ಹಟ್ಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry