ಬೈಂದೂರು ಕ್ಷೇತ್ರಕ್ಕೆ ‘ಅಭಿವೃದ್ಧಿಯ ಭಾಗ್ಯ’

7

ಬೈಂದೂರು ಕ್ಷೇತ್ರಕ್ಕೆ ‘ಅಭಿವೃದ್ಧಿಯ ಭಾಗ್ಯ’

Published:
Updated:

ಬೈಂದೂರು: ‘ಹಲವು ಭಾಗ್ಯಗಳನ್ನು ಕರುಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕೂವರೆ ವರ್ಷಗಳಲ್ಲಿ ₹ 2000 ಕೋಟಿ ಅನುದಾನ ಒದಗಿಸುವ ಮೂಲಕ ಅತ್ಯಧಿಕ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಿಸಿದ ಕ್ಷೇತ್ರವೆನಿಸುವ ಭಾಗ್ಯವನ್ನು ಬೈಂದೂರಿಗೆ ನೀಡಿದ್ದಾರೆ’ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಬೈಂದೂರಿನ ಗಾಂಧಿ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಸರ್ಕಾರದ ಸಾಧನಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ನಾಲ್ಕು ಅವಧಿಗೆ ಶಾಸಕನಾಗಿರುವ ನನ್ನ ಮೇಲೆ ಜನರ ಋಣದ ಭಾರ ಇದೆ. ನಿರಂತರ ಶ್ರಮದಿಂದ ಪ್ರಸ್ತಾವನೆಗಳ ಬೆನ್ನುಹತ್ತಿ ಮುಖ್ಯಮಂತ್ರಿ ಹಾಗೂ ಇತರ ಸಚಿವರ ಮನವೊಲಿಸಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ. ಆದರೆ, ಸ್ಥಳೀಯ ಬಿಜೆಪಿ ಮುಖಂಡರು ಕೆಲವು ಮಹತ್ವದ ಯೋಜನೆಗಳನ್ನು ತಮ್ಮ ಶಿಫಾರಸಿನಿಂದ ಸಂಸದರು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸಿದರು ಎಂದು ಸುಳ್ಳು ಹೇಳುತ್ತಿದ್ದಾರೆ. ಜನರು ಈ ಅಪಪ್ರಚಾರಕ್ಕೆ ಕಿವಿಗೊಡಬಾರದು’ ಎಂದರು.

ವಿವಿಧ ಬೇಡಿಕೆ: ಕ್ಷೇತ್ರದ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಶಾಸಕರು ಮುಖ್ಯಮಂತ್ರಿಯ ಗಮನಕ್ಕೆ ತಂದರು. ರೈತರ ಸಾಲ ಮನ್ನಾ ಸೌಲಭ್ಯ ಪಡೆಯಲು ನಿಗದಿಗೊಳಿಸಿದ ದಿನಕ್ಕಿಂತ ಮುನ್ನ ಸಾಲ ಮರುಪಾವತಿಸಿದ ರೈತರಿಗೂ ಸಾಲಮನ್ನಾ ಸೌಲಭ್ಯ ಸಿಗಬೇಕು. ಜಿಲ್ಲೆಯನ್ನು ಸಿಆರ್‌ಝಡ್ ವಲಯ 3ರ ಬದಲಿಗೆ 2 ಆಗಿ ಪರಿಗಣಿಸಬೇಕು. ಮೀನುಗಾರರಿಗೆ ರಾಜ್ಯ ಸರ್ಕಾರವೇ ಸೀಮೆಎಣ್ಣೆ ವಿತರಿಸಬೇಕು, ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿ ಸಾಲ ಸೌಲಭ್ಯ ನೀಡಬೇಕು. ಬೈಂದೂರು ಕೆ.ಎಸ್‌.ಆರ್‌.ಟಿ.ಸಿ. ಘಟಕ ಮತ್ತು ನಿಲ್ದಾಣಕ್ಕೆ ₹ 11 ಕೋಟಿ ಮಂಜೂರು ಮಾಡಬೇಕು ಎಂದರು.

ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಮಾತನಾಡಿ, ‘ಸಿದ್ದರಾಮಯ್ಯ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಅಸಮಾನತೆಯಿಂದ ಮುಕ್ತಿ ಎಂಬ ಗಾಂಧೀಜಿಯವರ ಆಶಯಕ್ಕೆ ಬದ್ಧವಾಗಿ ಕೆಲಸಮಾಡುತ್ತಿದೆ. ವಾರಾಹಿ ಏತನೀರಾವರಿ ಯೋಜನೆ ಅನುಷ್ಠಾನಗೊಳ್ಳುತ್ತಿರುವುದರಿಂದ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮರುಜೀವ ನೀಡಬೇಕು. ಮೀನುಗಾರ ಸಮುದಾಯವನ್ನು ಪರಿಶಿಷ್ಟ ಪಂಗಡವೆಂದು ಪರಿಗಣಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ, ಭಟ್ಕಳ ಶಾಸಕ ಮಂಕಾಳ ವೈದ್ಯ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರಕುಮಾರ್, ಸ್ಥಳೀಯ ಮುಖಂಡರು ಇದ್ದರು. ವಿವಿಧ ಸಂಘಟನೆಗಳ ಪ್ರಮುಖರು ಮುಖ್ಯ ಮಂತ್ರಿಗಳನ್ನು ಸನ್ಮಾನಿಸಿ, ಮನವಿ ಸಲ್ಲಿಸಿದರು. ಪತ್ರಕರ್ತ ಕೆ. ಸಿ. ರಾಜೇಶ್ ನಿರೂಪಿಸಿದರು.

ಕಪ್ಪು ಬಾವುಟ: ಯಡ್ತರೆ ಜಂಕ್ಷನ್‌ನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶಿಸಿದರು. ಹಲವರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.

* * 

ಬೈಂದೂರಿನಲ್ಲಿ ಭಾರಿ ಸಂಖ್ಯೆಯಲ್ಲಿ ಜನ ನೆರೆದಿರುವುದು ರಾಜ್ಯ ಸರ್ಕಾರದ ಒಂದಲ್ಲ ಒಂದು ಸೌಲಭ್ಯ ಪಡೆದಿರುವುದರ ದ್ಯೋತಕ.

ಪ್ರಮೋದ್ ಮಧ್ವರಾಜ್

ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry