ಅಕ್ರಮ ಪಂಪ್‌ಸೆಟ್‌ ತೆರವಿಗೆ ರೈತರ ವಿರೋಧ

7

ಅಕ್ರಮ ಪಂಪ್‌ಸೆಟ್‌ ತೆರವಿಗೆ ರೈತರ ವಿರೋಧ

Published:
Updated:
ಅಕ್ರಮ ಪಂಪ್‌ಸೆಟ್‌ ತೆರವಿಗೆ ರೈತರ ವಿರೋಧ

ದಾವಣಗೆರೆ: ಅಕ್ರಮ ಪಂಪ್‌ಸೆಟ್‌ ತೆರವು ಕಾರ್ಯಾಚರಣೆಗೆ ಜಿಲ್ಲೆಯ ಕೆಲವು ಕಡೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸ್ಥಳಕ್ಕೆ ಸೋಮವಾರ ತೆರಳಿದ್ದ ಕಂದಾಯ, ಪೊಲೀಸ್‌, ನೀರಾವರಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ಬರಿಗೈಯಲ್ಲಿ ಹಿಂತಿರುಗಿದೆ.

ಜಿಲ್ಲಾಡಳಿತದ ಸೂಚನೆ ಮೇರೆಗೆ ಭದ್ರಾ ನಾಲೆಗೆ ರೈತರು ಅಕ್ರಮ ವಾಗಿ ಅಳವಡಿಸಿದ್ದ ಪಂಪ್‌ಸೆಟ್‌ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ಜಿಲ್ಲಾಧಿಕಾರಿ ರಚಿಸಿ, ನಿಯೋಜಿಸಿದ್ದರು. ಅದರಂತೆ ಅಧಿಕಾರಿಗಳ ತಂಡ ಬೆಳಿಗ್ಗೆ ನಾಲೆ ಉದ್ದಕ್ಕೂ ಇರುವ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು ಮುಂದಾದಾಗ ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಹೋಬಳಿ ರೈತರು ಕಾರ್ಯಾಚರಣೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳ ವಿರುದ್ಧ ಅಸಮಾಧಾನ: ನಾಲೆ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಜಿಲ್ಲಾಡಳಿತದ ಸೂಚನೆಯೆ ಮೇರೆಗೆ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಬೇಕಾಗಿದೆ. ಇದಕ್ಕೆ ರೈತರು ಸಹಕರಿಸಬೇಕು ಎಂದು ತಂಡ ಮನವಿ ಮಾಡಿತು.

ಆದರೆ, ಅಣಬೇರು, ನಲ್ಕುಂದ ಗ್ರಾಮಗಳ ರೈತರು, ಜಿಲ್ಲಾಡಳಿತದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು. ‘ಸತತ ಬರಗಾಲದಿಂದ ಬೋರ್‌ನಲ್ಲಿ ನೀರು ಬತ್ತಿದ್ದರಿಂದ ಕಂಗಾಲು ಆಗಿದ್ದೇವೆ. ಫಸಲು ಉಳಿಸಿಕೊಳ್ಳಲು ಅನಿವಾರ್ಯವಾಗಿ ಪಂಪ್‌ಸೆಟ್‌ ಅಳವಡಿಸಿಕೊಂಡಿದ್ದೇವೆ. ಪಂಪ್‌ಸೆಟ್‌, ಪೈಪ್‌ಲೈನ್‌ಗಾಗಿ ಲಕ್ಷಾಂತರ ಹಣ ಖರ್ಚು ಮಾಡಿದ್ದೇವೆ’ ಎಂದು ಸಮಜಾಯಿಷಿ ನೀಡಿದರು.

ಜೀಪ್‌ನಿಂದ ಇಳಿಯದ ಪೊಲೀಸರು!: ಸ್ಥಳಕ್ಕೆ ಗುಂಪು, ಗುಂಪಾಗಿ ಬಂದ ರೈತರು ಅಧಿಕಾರಿಗಳೊಂದಿಗೆ ಜಟಾಪಟಿಗೆ ಇಳಿದರು. ಕೆಲ ಸಮಯ ಗೊಂದಲದ ಸನ್ನಿವೇಶ ನಿರ್ಮಾಣಗೊಂಡಿತು. ರೈತರ ಗುಂಪು ನೋಡಿದ ಪೊಲೀಸರು ಜೀಪ್‌ನಿಂದ ಇಳಿಯದೆ ಹಿಂತಿರುಗಿದರು. ಇತರೆ ಅಧಿಕಾರಿಗಳೂ ಕ್ಷಣಾರ್ಧದಲ್ಲೇ ಮರೆಯಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆ ತಂಡದಲ್ಲಿ ದಾವಣಗೆರೆ ಉಪ ತಹಶೀಲ್ದಾರ್ ಚಂದ್ರಪ್ಪ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೊಟ್ರೇಶ್, ಕಂದಾಯ ನಿರೀಕ್ಷಕ ಚಂದ್ರಪ್ಪ ಇದ್ದರು.

ಇದು ರೈತರ ವಿರುದ್ಧ ಕಾರ್ಯಾಚರಣೆ ಅಲ್ಲ. ಅವರ ಒಳಿತಿಗಾಗಿಯೇ ನಡೆಸಲಾಗುತ್ತಿದೆ. ಕೊನೆ ಭಾಗದ ರೈತರಿಗೆ ನಾಲೆ ನೀರು ಸಿಗುತ್ತಿಲ್ಲ. ಆದ್ದರಿಂದ ತೆರವು ಅನಿವಾರ್ಯ. ಇದು ಮುಂದುವರಿಯುತ್ತದೆ. ರೈತರು ಸಹರಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry