ಕಂಠ ಮುಚ್ಚುವ ದಿರಿಸು

5

ಕಂಠ ಮುಚ್ಚುವ ದಿರಿಸು

Published:
Updated:
ಕಂಠ ಮುಚ್ಚುವ ದಿರಿಸು

ಚಳಿಗಾಲದಲ್ಲಿ ಮೈಬೆಚ್ಚಗಾಗಿಸುವ ಉಡುಪುಗಳಿಗೆ ಬೇಡಿಕೆ ಹೆಚ್ಚು. ಈ ಬಗೆಯ ದಿರಿಸಿನಲ್ಲಿ ಕತ್ತನ್ನು ಸುತ್ತುವರೆದ ‘ಟರ್ಟಲ್‌ ನೆಕ್‌’ ವಿನ್ಯಾಸ ಬಹುಜನರ ಆಯ್ಕೆ. ಈ ದಿರಿಸು ಕತ್ತಿನವರೆಗಿದ್ದು, ಮುಖ ಮಾತ್ರವೇ ಕಾಣುವುದರಿಂದ ಆಮೆಗೆ ಹೋಲಿಸಿ ಈ ಹೆಸರು ಇಡಲಾಗಿದೆ. ಸೆಲೆಬ್ರಿಟಿಗಳು ‘ಏರ್‌ಪೋರ್ಟ್‌ ಔಟ್‌ಫಿಟ್‌’ನಲ್ಲಿಯೂ ಹೆಚ್ಚಾಗಿ ಕಾಣಿಸುವುದು ಈ ಬಗೆಯ ದಿರಿಸೇ.

ಫ್ಯಾಷನ್‌ ಕ್ಷೇತ್ರದಲ್ಲಿ ಧರಿಸಲು ಆರಾಮದಾಯಕವೆನ್ನಿಸುವ ಉಡುಪಿಗೆ ಹೆಚ್ಚು ಬೇಡಿಕೆ. ಹಾಗಾಗಿಯೇ ಇದು ಬಹುಜನರ ಮನವನ್ನು ಗೆದ್ದಿದೆ. 1860ರಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ದಿರಿಸಿದು. ಪೋಲೊ ಆಟಗಾರರು ಇದನ್ನು ಹೆಚ್ಚಾಗಿ ಧರಿಸುತ್ತಿದ್ದರು. ಈ ಕಾರಣ ಕ್ಕಾಗಿಯೇ ಇದಕ್ಕೆ ‘ಪೋಲೊ ನೆಕ್‌’ ಎಂಬ ಹೆಸರೂ ಇದೆ. ಇದರಲ್ಲಿ ಹುಡುಗರು, ಮಕ್ಕಳಿಗೂ ಹಲವು ಆಯ್ಕೆಗಳಿವೆ.

ಪ್ರಾರಂಭದಲ್ಲಿ ಸ್ವೆಟರ್‌ ಫ್ಯಾಬ್ರಿಕ್‌ಗಳಲ್ಲಿ ಮಾತ್ರವೇ ಹೆಚ್ಚಾಗಿ ಕಾಣಿಸುತ್ತಿದ್ದ ಈ ವಿನ್ಯಾಸ, ಈಗ ಸಿಲ್ಕ್‌, ಕಾಟನ್‌ ಸೇರಿದಂತೆ ಹಲವು ಫ್ಯಾಬ್ರಿಕ್‌ಗಳಲ್ಲಿಯೂ ಕಾಣಿಸುತ್ತದೆ. ಆಧುನಿಕ ಉಡುಪಿಗಷ್ಟೇ ಇದು ಸೀಮಿತವಾಗಿಲ್ಲ. ಹಿಂದೆಲ್ಲ ಏಕತಾನತೆ ಎನಿಸುತ್ತಿದ್ದ ಇವುಗಳ ರೂಪದಲ್ಲಿಯೂ ಸಾಕಷ್ಟು ವ್ಯತ್ಯಾಸವಾಗಿದೆ. ವಿನ್ಯಾಸಕಾರರ ಜಾಣ್ಮೆಯಿಂದಾಗಿ ಸದ್ಯ ಹೊಸ ರೂಪಿನೊಂದಿಗೆ ಮತ್ತೆ ಫ್ಯಾಷನ್‌ ಜಗತ್ತನ್ನು ಆಕ್ರಮಿಸಿಕೊಂಡಿದೆ. ವಿಭಿನ್ನ ಚೆಲುವು ಹಾಗೂ ಸಮಕಾಲೀನ ವಿನ್ಯಾಸದಿಂದ ಸೀರೆ, ಚೂಡಿದಾರದ ಲೋಕದಲ್ಲಿಯೂ ಪ್ರವೇಶ ಪಡೆದಿದೆ.

ಆ್ಯಪಲ್‌ ಸಂಸ್ಥೆ ಸ್ಥಾಪಕ ಸ್ಟೀವ್‌ ಜಾಬ್ಸ್‌ ಅವರಿಗೂ ಟರ್ಟಲ್‌ ನೆಕ್‌ ಶರ್ಟ್‌ ಇಷ್ಟದ ಆಯ್ಕೆಯಾಗಿತ್ತು. ನಟಿ ಆಂಡ್ರಿ ಹೆಪ್‌ಬರ್ನ್‌ ‘ಫನ್ನಿ ಫೇಸ್‌’ ಸಿನಿಮಾದಲ್ಲಿ ಈ ಬಗೆಯ ಉಡುಪು ಧರಿಸಿದ ನಂತರ ಇದರ ವೇಗ ಇನ್ನಷ್ಟು ಹೆಚ್ಚಿತು. ಯಾವ ಸಂದರ್ಭದಕ್ಕಾದರೂ ಈ ಬಗೆಯ ಉಡುಪು ಹೊಂದುತ್ತದೆ. ಆದರೆ ಇದರಲ್ಲಿ ಯಾವ ಬಗೆಯ ಉಡುಗೆ ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದು ಮುಖ್ಯ.

ಸಂಜೆ ಪಾರ್ಟಿಗಳಿಗೆ ಈ ವಿನ್ಯಾಸದ ದಿರಿಸುಗಳು ಹೆಚ್ಚು ಸೂಕ್ತ. ತೋಳಿಲ್ಲದ ಉಡುಪು, ಕೂಲ್‌ ಶೋಲ್ಡರ್‌, ಆಫ್‌ ಶೋಲ್ಡರ್‌ಗಳಲ್ಲಿಯೂ ಈ ವಿನ್ಯಾಸಗಳಿದ್ದು, ಮದುಮಗಳ ದಿರಿಸಿನಲ್ಲಿಯೂ ಈ ವಿನ್ಯಾಸ ಸ್ಥಾನ ಪಡೆದಿದೆ.

ಬ್ಲೇಜರ್, ಶ್ರಗ್ಸ್ ಜತೆ ಇದನ್ನು ಹೊಂದಿಸಿಕೊಳ್ಳಬಹುದು. ಕ್ಯಾಶುವಲ್‌ ಉಡುಪಿಗೆ ಹೆಚ್ಚು ಹೊಂದುವ ಇದು, ಸರಳವಾಗಿ ಕಾಣುವುದರ ಜೊತೆಗೆ ಶ್ರೀಮಂತ ನೋಟ ನೀಡುತ್ತದೆ. ಉದ್ದ ಕತ್ತು ಇರುವವರಿಗೆ ಚೆನ್ನಾಗಿ ಒಪ್ಪುತ್ತದೆ. ಸ್ಕರ್ಟ್ಸ್ ಅಥವಾ ಮಿನಿ ಸ್ಕರ್ಟ್ಸ್‌ಗೆ ಟರ್ಟಲ್‌ ಶರ್ಟ್‌ ಧರಿಸಿದಾಗ ಹೈ ಹೀಲ್ಡ್‌ ಚಪ್ಪಲಿಯನ್ನು ಮ್ಯಾಚ್‌ ಮಾಡಿಕೊಳ್ಳಿ. ಇಂಥ ಉಡುಪು ತೊಟ್ಟಾಗ ಆಭರಣವನ್ನು ಅತಿ ಎನ್ನುವಂತೆ ಧರಿಸಬೇಡಿ. ಕೈಗೆ ಬೇಕಿದ್ದರೆ ಸರಳ ಆಭರಣ ಹಾಕಿಕೊಳ್ಳಬಹುದು.

ಶಾರ್ಟ್ಸ್‌ಗಳೊಂದಿಗೂ ಟರ್ಟಲ್ ಶರ್ಟ್‌ ತೊಡುವ ಟ್ರೆಂಡ್ ಇದೆ. ಕೆಂಪು ಬಣ್ಣದ ಪೋಲೊ ನೆಕ್‌ಗೆ ಕಪ್ಪು ಬಣ್ಣದ ಮೊಣಕಾಲಿನವರೆಗೂ ಬರುವ ಸ್ಕರ್ಟ್‌ ಸುಂದರವಾಗಿ ಕಾಣುತ್ತದೆ. ಕೇಶ ವಿನ್ಯಾಸವೂ ಸರಳವಾಗಿರಲಿ. ಇದು ಟೀನೇಜ್ ಹುಡುಗಿಯರಿಗೆ, ಉದ್ಯೋಗಸ್ಥ ಹೆಣ್ಣುಮಕ್ಕಳಿಗೆ ಹಾಗೂ ಕಾರ್ಪೊರೇಟ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಾಗೂ ಕ್ಯಾಶುವಲ್ ಉಡುಪನ್ನು ಚೆನ್ನಾಗಿ ನಿರ್ವಹಣೆ ಮಾಡುವವರಿಗೆ ಹೊಂದಿಕೆ ಆಗುತ್ತದೆ. ಕೂದಲನ್ನು ಇಳಿಬಿಡಬಹುದು, ಪೋನಿಟೇಲ್‌ ಹಾಕಿದರೆ ಲುಕ್ ಸುಧಾರಿಸುತ್ತದೆ.

ಕತ್ತು ಉದ್ದ ಕಾಣುವುದರಿಂದ ಉದ್ದ ಕತ್ತಿನವರಿಗೆ ಈ ದಿರಿಸು ಹೊಂದಿಕೆಯಾಗುವುದಿಲ್ಲ. ದುಂಡು ಮುಖದವರು ಮತ್ತು ಕುಳ್ಳಗಿರುವವರು ಇದನ್ನು ಅವಾಯ್ಡ್‌ ಮಾಡುವುದು ಒಳ್ಳೆಯದು. ಅಂಥವರು ಟರ್ಟಲ್ ಶರ್ಟ್ ಧರಿಸಿದರೆ ಇನ್ನಷ್ಟು ದಪ್ಪ ಕಾಣುತ್ತಾರೆ. ಉದ್ದ ಮುಖದವರಿಗೆ ಇದು ಚೆನ್ನಾಗಿ ಒಪ್ಪುತ್ತದೆ. ಈ ದಿರಿಸು ತೊಟ್ಟಾಗ ಆಭರಣ ಧರಿಸುವುದು ಬೇಡ. ಕಿವಿಯೋಲೆಯ ಅಗತ್ಯವೂ ಇಲ್ಲ.

-ನಿಶಾರಾ ಕಿರಣ್‌, ವಸ್ತ್ರವಿನ್ಯಾಸಕಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry