‘ಜವ’ ಬರುವುದು ಸ್ವಲ್ಪ ತಡ

7

‘ಜವ’ ಬರುವುದು ಸ್ವಲ್ಪ ತಡ

Published:
Updated:
‘ಜವ’ ಬರುವುದು ಸ್ವಲ್ಪ ತಡ

ಅಭಯ್‌ ಚಂದ್ರ ಮತ್ತು ವಿನಯ್‌ ಚಂದ್ರ ಸಹೋದರರ ‘ಜವ’ ಸಿನಿಮಾ ಬಿಡುಗಡೆಗೆ ಇದೇ ತಿಂಗಳು 19ಕ್ಕೆ ಮುಹೂರ್ತ ನಿಗದಿಯಾಗಿತ್ತು. ಆದರೆ ಚಿತ್ರಮಂದಿರಗಳ ಹೊಂದಾಣಿಕೆಯ ಕೊರತೆಯಿಂದ ‘ಜವ’ ಸ್ವಲ್ಪ ತಡವಾಗಿ ಅಂದರೆ ಫೆ. 2ರಂದು ತೆರೆಗೆ ಬರಲಿದ್ದಾನೆ. ಅಭಯ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದರೆ, ವಿನಯ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಟ್ರೇಲರ್ ಬಿಡುಗಡೆ ಮಾಡಿ, ಬಿಡುಗಡೆಯ ಮಾಹಿತಿಯನ್ನು ಹಂಚಿಕೊಳ್ಳಲಿಕ್ಕಾಗಿ ‘ಜವ’ ತಂಡ ಇತ್ತೀಚೆಗೆ ಪತ್ರಿಕಾಗೋಷ್ಠಿ ಕರೆದಿತ್ತು. ಸಿನಿಮಾ ಬಿಡುಗಡೆಯ ಹಾಗೆಯೇ ಕಾರ್ಯಕ್ರಮ ಆರಂಭವಾಗಿದ್ದೂ ಒಂದು ಗಂಟೆ ವಿಳಂಬವಾಗಿಯೇ.

ಮೊದಲಿಗೆ ಮಾತಿಗೆ ನಿಂತ ಸಾಯಿಕುಮಾರ್‌ ‘ಇದು ಕನ್ನಡದಲ್ಲಿ ನನ್ನ ಇಪ್ಪತ್ತೈದನೇ ಸಿನಿಮಾ. ಈ ಚಿತ್ರದಲ್ಲಿಯೂ ಪೊಲೀಸ್‌ ಅಧಿಕಾರಿಯಾಗಿಯೇ ಕಾಣಿಸಿಕೊಂಡಿದ್ದೇನೆ. ಆದರೆ ಈ ಪಾತ್ರ ಭಿನ್ನವಾಗಿದೆ’ ಎಂದರು.

‘ನಾವು ತುಂಬ ಕಷ್ಟಪಟ್ಟು ಮಾಡಿರುವ ಸಿನಿಮಾ ಇದು’ ಎಂದೇ ಮಾತಿಗಾರಂಭಿಸಿದರು ನಿರ್ದೇಶಕ ಅಭಯ್‌.

‘ಇದು ಸಸ್ಪೆನ್ಸ್‌, ಥ್ರಿಲ್ಲರ್‌ ಮತ್ತು ನಿಗೂಢತೆ ಮೂರೂ ಅಂಶಗಳು ಸೇರಿ ಆಗಿರುವ ಸಿನಿಮಾ. ನಾನು ಹಾಲಿವುಡ್‌ ಸಿನಿಮಾಗಳನ್ನು ತುಂಬ ನೋಡುತ್ತೇನೆ. ಜೇಮ್ಸ್‌ ವ್ಯಾನ್‌ ಅಭಿಮಾನಿ. ಅವನ ಚಿತ್ರಗಳಲ್ಲಿನ ಹಿನ್ನೆಲೆ ಸಂಗೀತದಷ್ಟೇ ಗುಣಮಟ್ಟದ ಸಂಗೀತ ನಮ್ಮ ಸಿನಿಮಾದಲ್ಲಿಯೂ ಇರಬೇಕು ಎಂದು ಮೊದಲೇ ನಿರ್ಧರಿಸಿಕೊಂಡಿದ್ದೆವು’ ಎಂದರು ಅಭಯ್.

ವಚನ್‌ ಶೆಟ್ಟಿ ಮತ್ತು ವೀರೇಂದ್ರ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ‘ವಾಣಿಜ್ಯಾತ್ಮಕ ಚೌಕಟ್ಟಿನಲ್ಲಿಯೇ ಹಲವು ಪ್ರಯೋಗಗಳನ್ನು ಮಾಡಿದ್ದೇನೆ’ ಎಂದು ವಿನಯ್‌ ಚಂದ್ರ ಖುಷಿಯಿಂದಲೇ ಹೇಳಿಕೊಂಡರು. ‘ಹಾರರ್‌ ಸಿನಿಮಾಗೆ ಸಂಗೀತ ಸಂಯೋಜಿಸುವುದು ಸಣ್ಣ ಕೆಲಸವಲ್ಲ. ಇಂಥದ್ದೊಂದು ಅವಕಾಶ ನನ್ನ ತಮ್ಮನಿಂದಲೇ ದೊರಕಿದ್ದು ತುಂಬ ಹೆಮ್ಮೆಯ ವಿಷಯ’ ಎಂದೂ ಅವರು ಹೇಳಿದರು.

ಭವಾನಿ ಪ್ರಕಾಶ್‌, ಕುಶಾಲ್‌, ಮದನ್‌, ದಿಲೀಪ್‌, ಅಕ್ಷತಾ ಮುಂತಾದವರು ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ನಂದಕುಮಾರ್ ಛಾಯಾಗ್ರಹಣ ಇರುವ ಈ ಚಿತ್ರವನ್ನು ಪಿ.ಆರ್‌. ಸುಂದರ್‌ರಾಜ್‌ ಸಂಕಲಿಸಿದ್ದಾರೆ. ಫೆ. 2ರಂದು ಅರವತ್ತು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಜನೆ ತಂಡಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry