ದೀಪಕ್‌, ಬಶೀರ್‌ ಕೊಲೆ ಐವರಿಗಾಗಿ ಶೋಧ

7
ಕೊಲೆಗಳ ಸಂಚಿನಲ್ಲಿ ಭಾಗಿಯಾದವರ ಬಂಧನಕ್ಕಾಗಿ ಹುಡುಕಾಟ ಆರಂಭ

ದೀಪಕ್‌, ಬಶೀರ್‌ ಕೊಲೆ ಐವರಿಗಾಗಿ ಶೋಧ

Published:
Updated:

ಮಂಗಳೂರು: ಇದೇ 3ರಂದು ನಡೆದ ದೀಪಕ್‌ ರಾವ್‌ ಮತ್ತು ಅಬ್ದುಲ್ ಬಶೀರ್‌ ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಐವರು ಆರೋಪಿಗಳಿಗಾಗಿ ಪೊಲೀಸ್‌ ತಂಡಗಳು ಶೋಧ ನಡೆಸುತ್ತಿವೆ. ಇವರೆಲ್ಲರೂ ಈ ಕೊಲೆಗಳ ಸಂಚಿನಲ್ಲಿ ಭಾಗಿಯಾದ ಪ್ರಮುಖರು ಎಂಬ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.

ಕಾಟಿಪಳ್ಳದಲ್ಲಿ ನಡೆದ ದೀಪಕ್‌ ರಾವ್‌ ಕೊಲೆ ಪ್ರಕರಣದಲ್ಲಿ ಭಾಗಿಯಾದ ಪಿಂಕಿ ನವಾಝ್‌, ರಿಜ್ವಾನ್‌, ಮೊಹಮ್ಮದ್ ನೌಷಾದ್‌ ಮತ್ತು ಮೊಹಮ್ಮದ್ ಇರ್ಷಾನ್‌ ಎಂಬ ಆರೋಪಿಗಳನ್ನು ಅದೇ ದಿನ ಬಂಧಿಸಲಾಗಿತ್ತು. ಬುಧವಾರ ರಾತ್ರಿ ಪ್ರತೀಕಾರವಾಗಿ ಕೊಟ್ಟಾರ ಚೌಕಿಯಲ್ಲಿ ಅಬ್ದುಲ್ ಬಶೀರ್‌ ಅವರನ್ನು ಕೊಲೆ ಮಾಡಲು ಯತ್ನಿಸಲಾಗಿತ್ತು. ಭಾನುವಾರ  ಬಶೀರ್‌ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಭಾಗಿಯಾದ ಪಿ.ಕೆ.ಶ್ರೀಜಿತ್‌, ಕಿಶನ್‌ ಪೂಜಾರಿ, ಧನುಷ್ ಪೂಜಾರಿ ಮತ್ತು ಸಂದೇಶ್ ಕೋಟ್ಯಾನ್‌ ಎಂಬ ಆರೋಪಿಗಳನ್ನು ಶನಿವಾರ ಬಂಧಿಸಲಾಗಿತ್ತು.

ನೌಷಾದ್‌ ಮತ್ತು ಇರ್ಷಾನ್‌ರನ್ನು ವಿಚಾರಣೆ ನಡೆಸಿದ್ದು, ಕೊಲೆಯ ಸಂಚಿನಲ್ಲಿ ಇನ್ನೂ ಇಬ್ಬರು ಭಾಗಿಯಾಗಿರುವ ಮಾಹಿತಿ ತನಿಖಾ ತಂಡಕ್ಕೆ ಲಭ್ಯವಾಗಿದೆ. ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮೂವರಿಗಾಗಿ ಶೋಧ: ಕಂಕನಾಡಿ ಗರಡಿ ಜಾತ್ರೆಯಲ್ಲಿ ಒಟ್ಟು ಸೇರಿದ್ದ ನಾಲ್ವರು ಅಲ್ಲಿಂದ ಬಂದು ಅಬ್ದುಲ್‌ ಬಶೀರ್‌ ಕೊಲೆಗೆ ಯತ್ನಿಸಿದ್ದರು. ಆದರೆ, ಅದಕ್ಕೂ ಮೊದಲೇ ಇಂತಹ ದಾಳಿಯ ಸಂಚು ನಡೆದಿರುವ ಕುರಿತು ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಕೃತ್ಯದಲ್ಲಿ ಇನ್ನೂ ಮೂವರು ಭಾಗಿಯಾಗಿರುವ ಸುಳಿವು ಬಂಧನದಲ್ಲಿರುವ ಆರೋಪಿ

ಗಳ ವಿಚಾರಣೆಯಿಂದ ಸಿಕ್ಕಿದೆ. ಅವರನ್ನು ಸೆರೆ ಹಿಡಿಯಲು ಸಿಸಿಆರ್‌ಬಿ ಎಸಿಪಿ ವೆಲೆಂಟೈನ್‌ ಡಿಸೋಜ ನೇತೃತ್ವದ ತನಿಖಾ ತಂಡ ಶೋಧ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಎರಡೂ ಕೊಲೆ ಪ್ರಕರಣಗಳ ತನಿಖೆಯ ಕುರಿತು ನಗರ ಪೊಲೀಸ್ ಕಮಿಷನರ್‌ ಟಿ.ಆರ್.ಸುರೇಶ್ ಖುದ್ದಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಬಿ ಇನ್‌ಸ್ಪೆಕ್ಟರ್‌ ಶಾಂತಾರಾಂ ಸೇರಿದಂತೆ ಹಲವು ಅಧಿಕಾರಿಗಳನ್ನು ಈ ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ನಿಯೋಜನೆ ಮಾಡಲಾಗಿದೆ.

ಸಂಘಟನೆಗಳ ನಂಟು

‘ಅಬ್ದುಲ್‌ ಬಶೀರ್‌ ಕೊಲೆಯಲ್ಲಿ ಭಾಗಿಯಾದ ಕಾಸರಗೋಡು ಜಿಲ್ಲೆಯ ಪಿ.ಕೆ.ಶ್ರೀಜಿತ್‌ ಬಜರಂಗದಳದ ಮುಖಂಡನಾಗಿದ್ದು, ಅಲ್ಲಿನ ಇನ್ನೊಬ್ಬ ಆರೋಪಿ ಸಂದೇಶ್ ಕೋಟ್ಯಾನ್‌ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಎಂಬುದು ತನಿಖಾ ತಂಡಕ್ಕೆ ಖಚಿತವಾಗಿದೆ. ಪಡೀಲ್‌ನ ಧನುಷ್ ಪೂಜಾರಿ ಮತ್ತು ಕಿಶನ್‌ ಪೂಜಾರಿ ಮೊದಲು ಶ್ರೀರಾಮ ಸೇನೆಯಲ್ಲಿದ್ದು, ಈಗ ಬಜರಂಗದಳದಲ್ಲಿದ್ದರು ಎಂಬುದೂ ತನಿಖೆಯಲ್ಲಿ ದೃಢಪಟ್ಟಿದೆ’ ಎಂದು ಮೂಲಗಳು ತಿಳಿಸಿವೆ.

ದೀಪಕ್‌ ಕೊಲೆಯಲ್ಲಿ ಭಾಗಿಯಾದವರಿಗೂ ಕೆಲವು ಸಂಘಟನೆಗಳ ನಂಟು ಇತ್ತು ಎಂಬ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಕೆಲವು ಆರೋಪಿಗಳ ಬಂಧನವಾದ ಬಳಿಕ ಈ ಬಗ್ಗೆ ಸರಿಯಾದ ಚಿತ್ರಣ ಲಭಿಸಲಿದೆ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry