ದಿನಕ್ಕೆ 122 ಅಪಘಾತ, 30 ಸಾವು!

7
ಸುರಕ್ಷತಾ ಕ್ರಮ ಕೈಗೊಂಡಿದ್ದರಿಂದ ರಾಜ್ಯದಲ್ಲಿ ರಸ್ತೆ ಅವಘಡ ಪ್ರಮಾಣ ಇಳಿಕೆ

ದಿನಕ್ಕೆ 122 ಅಪಘಾತ, 30 ಸಾವು!

Published:
Updated:
ದಿನಕ್ಕೆ 122 ಅಪಘಾತ, 30 ಸಾವು!

ಬೆಂಗಳೂರು: ರಾಜ್ಯದಲ್ಲಿ ದಿನವೊಂದಕ್ಕೆ ಸರಾಸರಿ 122 ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಸರಾಸರಿ 30 ಮಂದಿ ಇದರಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ದೇಶದಲ್ಲಿ ಸಂಭವಿಸುವ ಅಪಘಾತಗಳಲ್ಲಿ ರಾಜ್ಯದ ಪಾಲು ಶೇ 7.4ರಷ್ಟಿದೆ. ದೇಶದಾದ್ಯಂತ ದಿನವೊಂದಕ್ಕೆ ಸರಾಸರಿ 1,317 ಅಪಘಾತ ಸಂಭವಿಸುತ್ತಿದ್ದು, ಇದರಿಂದಾಗಿ ನಿತ್ಯ ಸರಾಸರಿ 413 ಮಂದಿ ಅಸುನೀಗುತ್ತಿದ್ದಾರೆ. ಅಪಘಾತಗಳ ಪ್ರಮಾಣದಲ್ಲಿ ರಾಜ್ಯವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಇದರಿಂದ ಉಂಟಾಗುವ ಸಾವಿನ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಸಾರಿಗೆ ಇಲಾಖೆಯ ಆಯುಕ್ತ ಬಿ.ದಯಾನಂದ್‌ ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅಪಘಾತಗಳ ಅಂಕಿ–ಅಂಶಗಳನ್ನು ನೀಡಿದರು. ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರಿಂದ ಅಪಘಾತಗಳ ಹಾಗೂ ಸಾವಿನ ಸಂಖ್ಯೆಯಲ್ಲಿ ಇಳಿಕೆ ಆಗಿದೆ ಎಂದರು.

ಪ್ರತ್ಯೇಕ ವೆಬ್‌ಸೈಟ್‌: ‘ಅಪಘಾತಗಳ ಮಾಹಿತಿ ದಾಖಲಾತಿಗಾಗಿ ಪ್ರಸಕ್ತ ವರ್ಷದಿಂದ ಪ್ರತ್ಯೇಕ ಜಾಲತಾಣ ಆರಂಭಿಸಲಿದ್ದೇವೆ. ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇದಕ್ಕೆ ಮಾಹಿತಿ ಅಪ್‌ಲೋಡ್‌ ಮಾಡಲಿದ್ದಾರೆ. ಅಪಘಾತ ಸಂಭವಿಸುವ ಸ್ಥಳಗಳಲ್ಲಿ ತಕ್ಷಣವೇ ಸುರಕ್ಷತಾ ಕ್ರಮ ಕೈಗೊಳ್ಳಲು ಜಾಲತಾಣ ನೆರವಾಗಲಿದೆ’ ಎಂದರು.

‘ಕೋಶ’ದ ಬದಲು ಪ್ರಾಧಿಕಾರ: ‘ರಸ್ತೆ ಸುರಕ್ಷತಾ ಕೋಶವನ್ನು ಪ್ರಾಧಿಕಾರವನ್ನಾಗಿ ಮಾರ್ಪಡಿಸುವ ಮಸೂದೆ ಬೆಳಗಾವಿ ಅಧಿವೇಶನದಲ್ಲಿ ಅಂಗೀಕಾರವಾಗಿದೆ. ಅದು ಶೀಘ್ರವೇ ಜಾರಿಗೆ ಬರಲಿದೆ’ ಎಂದು ದಯಾನಂದ್‌ ತಿಳಿಸಿದರು.

‘ಸಾರಿಗೆ ಸಚಿವರ ಅಧ್ಯಕ್ಷತೆಯ ರಾಜ್ಯ ರಸ್ತೆ ಸುರಕ್ಷತಾ ಮಂಡಳಿಯ ಅಡಿ ಪ್ರಾಧಿಕಾರ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಇರಲಿದೆ. ಅವುಗಳಿಗೆ ವಿಶೇಷ ಅಧಿಕಾರಗಳು ದೊರೆಯಲಿದ್ದು, ಸಾಕಷ್ಟು ಅನುದಾನವೂ ಸಿಗಲಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಾಧಿಕಾರದ ಅಧ್ಯಕ್ಷರಾಗಲಿದ್ದು, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಉಪಾಧ್ಯಕ್ಷರು. ಹಣಕಾಸು, ಗೃಹ, ಲೋಕೋಪಯೋಗಿ, ಆರೋಗ್ಯ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸದಸ್ಯರಾಗಿರಲಿದ್ದಾರೆ’ ಎಂದರು.

ಸೈಲೆನ್ಸರ್‌ನಲ್ಲಿ ದೋಷವಿದ್ದರೆ ನೋಂದಣಿ ಅಮಾನತು: ‘ಹಲವರು ವಾಹನಗಳ ಸೈಲೆನ್ಸರ್‌ ಬದಲಾಯಿಸುತ್ತಾರೆ. ದೋಷಪೂರಿತವಾಗಿರುವ ಇಂತಹ ಸೈಲೆನ್ಸರ್‌ಗಳಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ’ ಎಂದು ದಯಾನಂದ್ ತಿಳಿಸಿದರು.

‘ಪಾನಮತ್ತರಾಗಿ ವಾಹನ ಚಲಾಯಿಸುವವರ ಚಾಲನಾ ಪರವಾನಗಿಯನ್ನು ಅಮಾನತು ಮಾಡುತ್ತಿದ್ದೇವೆ. ಅದೇ ಮಾದರಿಯಲ್ಲೇ ದೋಷಪೋರಿತ ಸೈಲೆನ್ಸರ್‌ ಅಳವಡಿಸಿರುವ ವಾಹನಗಳನ್ನು ಪತ್ತೆ ಹಚ್ಚಿ, ನೋಂದಣಿ ಅಮಾನತು ಮಾಡಲು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಸಾರಿಗೆ ಅಧಿಕಾರಿಗಳೂ ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಿದ್ದಾರೆ’ ಎಂದರು.

***

‘ಅಪಘಾತಕ್ಕೆ ಕಡಿವಾಣ– ರಾಜ್ಯಕ್ಕೆ ಮೊದಲ ಸ್ಥಾನ’

‘ದೇಶದಲ್ಲಿ ಅಪಘಾತಗಳಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌, ಈ ಪ್ರಮಾಣವನ್ನು ಶೇ 10ರಷ್ಟಾದರೂ ಕಡಿಮೆ ಮಾಡುವಂತೆ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿತ್ತು. ಅದರಿಂದಾಗಿ ರಾಜ್ಯದಲ್ಲಿ ರಸ್ತೆ ಸುರಕ್ಷತಾ ಕೋಶ ರಚಿಸಿ ಕ್ರಮಗಳನ್ನು ಕೈಗೊಳ್ಳಲಾಯಿತು. ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಿದ ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ’ ಎಂದು ಹೇಳಿದರು.

***

ಅಪಘಾತ ವರ್ಷವಾರು ವಿವರ

ವರ್ಷ     ಅಪಘಾತ      ಸಾವು      ಗಾಯ

2013    44,020     10,046     56,781

2014    43,713     10,452     56,831

2015    44,011      10,856    56,971

2016    44,403      11,133    54,556

2017   31,658        7,640     39,879

***

ಅಪಘಾತದ ಸಾವಿನ ಪ್ರಮಾಣ ಹೆಚ್ಚು ಇರುವ ಜಿಲ್ಲೆಗಳು

ಜಿಲ್ಲೆ                               2014     2015     2016     2017

ಬೆಳಗಾವಿ                          786      808       858       609

ಬೆಂಗಳೂರು ನಗರ              729       713       835       494

ಬೆಂಗಳೂರು ಗ್ರಾಮಾಂತರ    645        682      682        477

ತುಮಕೂರು                      598        586      669        482

ಮೈಸೂರು                       552         460      496        369

ಹಾಸನ                           438         461      500        310

ಮಂಡ್ಯ                           408          419      481       357

ರಾಮದುರ್ಗ                     465          430      459       287

ಚಿತ್ರದುರ್ಗ                       397         429       420       292

ವಿಜಯಪುರ                     368          441       397       246

***

ರಾಜ್ಯವಾರು ಅಪಘಾತಗಳ ಅಂಕಿ–ಅಂಶ

ರಾಜ್ಯ ಅಪಘಾತ ಸಾವು

ಉತ್ತರ ಪ್ರದೇಶ  35,61219,320

ತಮಿಳುನಾಡು    71,431 17,218

ಮಹಾರಾಷ್ಟ್ರ     39,878 12,935

ಕರ್ನಾಟಕ        44,403 11,133

ರಾಜಸ್ಥಾನ       23,066 10,465

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry