ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ವಿರುದ್ಧ ತನಿಖೆ

7

ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ವಿರುದ್ಧ ತನಿಖೆ

Published:
Updated:
ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ವಿರುದ್ಧ ತನಿಖೆ

ಚಿತ್ರದುರ್ಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ 67 ಪ್ರಕರಣಗಳಿದ್ದು, ಒಂದೂ ಎಫ್‌ಐಆರ್ ಮಾಡಿಲ್ಲ. ನಾನು ಮುಖ್ಯಮಂತ್ರಿಯಾದ ಕೂಡಲೇ ಮೊದಲು ಆ ಎಲ್ಲ ಪ್ರಕರಣಗಳನ್ನೂ ತನಿಖೆಗೆ ಒಳಪಡಿಸುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಚ್ಚರಿಸಿದರು. ಇಲ್ಲಿನ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ‘ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ’ಯಲ್ಲಿ ಅವರು ಮಾತನಾಡಿದರು.

ಮಾತಿನ ಉದ್ದಕ್ಕೂ ರಾಜ್ಯ ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ‘ನನ್ನನ್ನು ಪದೇ ಪದೇ ಜೈಲಿಗೆ ಹೋಗಿದ್ದವನು ಎಂದು ಹೇಳುತ್ತೀರಿ, ವಕೀಲರಾಗಿ ನಿಮಗೆ ನಾಚಿಕೆಯಾಗುವುದಿಲ್ಲವೇ’ ಎಂದು ಪ್ರಶ್ನಿಸಿದ, ‘ಎಲ್ಲ ಒಳಸಂಚು ಮಾಡಿ ಜೈಲಿಗೆ ಕಳುಹಿಸಿ, ಜಾಮೀನು ಸಿಗದಂತೆ ಮಾಡಿದ್ದಿರಿ. ಇದೆಲ್ಲ ಗೊತ್ತಿದೆ. ಇನ್ನೊಂದು ತಿಂಗಳಲ್ಲಿ ನಿಮ್ಮ ಮೇಲೆ ಚಾರ್ಜ್‌ ಶೀಟ್ ಪುಸ್ತಕ ಮಾಡಿಸಿ ಮನೆ ಮನೆಗೂ ಹಂಚಿಸುತ್ತೇನೆ’ ಎಂದು ಎಚ್ಚರಿಸಿದರು.

‘ನಾಲ್ಕೂವರೆ ವರ್ಷಗಳಲ್ಲಿ ಸರ್ಕಾರದ ಖಜಾನೆ ಖಾಲಿ ಮಾಡಿ, ಎಂಎಲ್‌ಎ, ಎಂಎಲ್‌ಸಿ ಆಪ್ತ ಸಹಾಯಕರಿಗೆ ಸಂಬಳ ನೀಡಲು ಹಣವಿಲ್ಲದಂತೆ ಮಾಡಿರುವ ಸಿದ್ದರಾಮಯ್ಯ, ನಾನು ಪರಿವರ್ತನಾ ಯಾತ್ರೆ ಹೊರಟ ಕೂಡಲೇ, ನೀವು ಯಾತ್ರೆ ಹೊರಟು, ₹12 ರಿಂದ ₹ 13 ಸಾವಿರ ಕೋಟಿ ಯೋಜನೆಗಳನ್ನು ಘೋಷಿಸುತ್ತಿದ್ದೀರಿ. ಇದಕ್ಕೆ ಬಜೆಟ್‌ನಲ್ಲಿ ಹಣ ತೆಗೆದಿಟ್ಟೀದ್ದೀರಾ, ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದಿದ್ದೀರಾ? ಒಬ್ಬ ಹಣಕಾಸು ಸಚಿವರಾಗಿ ರಾಜ್ಯದ ಆರ್ಥಿಕ ಸ್ಥಿತಿ ನೋಡದೇ ವಿವೇಚನಾ ರಹಿತವಾಗಿ ಹೀಗೆ ಯೋಜನೆ ಘೋಷಿಸುವುದು ಎಷ್ಟು ಸರಿ ’ ಎಂದು ಪ್ರಶ್ನಿಸಿದರು.

‘ನಾವೆಂದೂ ಜಾತಿ ರಾಜಕಾರಣ ಮಾಡಲಿಲ್ಲ. ಹಾಗೆಯೇ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂಥ ಭ್ರಷ್ಟ ಮುಖ್ಯಮಂತ್ರಿಯನ್ನು ಕಂಡಿರಲಿಲ್ಲ. ನಮ್ಮ ದೌರ್ಭಾಗ್ಯ. ನಿಮ್ಮಂಥ ಆಡಳಿತದಿಂದಾಗಿ ಈ ನಾಡಿನ ಅಭಿವೃದ್ಧಿ ಹತ್ತು ವರ್ಷ ಹಿಂದಕ್ಕೆ ಹೋಗಿದೆ’ ಎಂದು ಆಕ್ಷೇಪಿಸಿದರು.

‘ಪರಿವರ್ತನಾ ಯಾತ್ರೆಗೆ ಎಲ್ಲೆಡೆಯೂ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಇಷ್ಟು ಸಾಕು. ಆ ಜನ ಇಟ್ಟಿರುವ ವಿಶ್ವಾಸ, ನಂಬಿಕೆಯೊಂದಿಗೆ ದಕ್ಷ ಮತ್ತು ಪಾರದರ್ಶಕ ಆಡಳಿತ ನೀಡುತ್ತೇನೆ ಎಂಬ ವಿಶ್ವಾಸವೂ ಇದೆ’ ಎಂದು ಪ್ರಕಟಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ’ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದೆ ಉಳಿಯಲು ಈ ಜಿಲ್ಲೆಯ ಉಸ್ತುವಾರಿ ಸಚಿವ ಆಂಜನೇಯ ಕಾರಣ’ ಎಂದು ನೇರವಾಗಿ ಆರೋಪಿಸಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ವೈದ್ಯಕೀಯ ಕಾಲೇಜು ಮಂಜೂರಾಯಿತು. ಆದರೆ, ಸಚಿವ ಆಂಜನೇಯ ಒಮ್ಮೆಯೂ ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಲಿಲ್ಲ. ಈಗ ಅದು ನನೆಗುದಿಗೆ ಬಿದ್ದಿದೆ. ನಗರೋತ್ಥಾನದಲ್ಲಿ ಕೋಟ್ಯಂತರ ಹಣವಿದೆ. ಆ ಸಮಿತಿಗೆ ಸಚಿವರೇ ಅಧ್ಯಕ್ಷರು. ನಾಲ್ಕು ವರ್ಷಗಳಿಂದ ಒಮ್ಮೆಯೂ ಸಭೆ ಕರೆದಿಲ್ಲ. ಕ್ರಿಯಾ ಯೋಜನೆ ಮಾಡಿಲ್ಲ. ನಗರದಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ. ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಕೇಂದ್ರ ಸರ್ಕಾರ ನಗರವನ್ನು ಅಮೃತ್ ಸಿಟಿ ಯೋಜನೆಗೆ ಆಯ್ಕೆ ಮಾಡಿ, ಹಣ ನೀಡಿದೆ. ಅದನ್ನು ಸರಿಯಾಗಿ ಬಳಸಿಲ್ಲ’ ಎಂದು ಟೀಕಿಸಿದರು.

‘ನನ್ನ ವಿಧಾನಸಭಾ ಕ್ಷೇತ್ರದಲ್ಲಿ 11 ಸಾವಿರ ಜನರಿಗೆ ರೇಷನ್ ಕಾರ್ಡ್ ಇಲ್ಲ. ಶವಸಂಸ್ಕಾರ ಮಾಡುವ ಫಲಾನುಭವಿಗಳಿಗೆ ಕೊಡಲು ಸರ್ಕಾರದಲ್ಲಿ ಹಣವಿಲ್ಲ. ‌‌‌‌‌‌‌‌‌‌‌‌‌‌‌‌ಇಂಥ ಸರ್ಕಾರ ಈಗ ಸಾವಿರಾರು ಕೋಟಿಯ ಯೋಜನೆಗಳನ್ನು ಘೋಷಿಸುತ್ತಿದೆ. ಇದು ಹೇಗೆ ಸಾಧ್ಯ ಎಂಬುದನ್ನು ನೀವೇ ಯೋಚಿಸಿ’ ಎಂದರು.

ಮಾಜಿ ಸಚಿವ ಗೋವಿಂದ ಕಾರ ಜೋಳ ಮಾತನಾಡಿ, ‘ಸಮಾಜ ಕಲ್ಯಾಣ ಸಚಿವರು ಹಾಡಿಯಲ್ಲಿ, ಹಟ್ಟಿಯಲ್ಲಿ ಮಲಗಿದರೆ, ಅಲ್ಲೆಲ್ಲ ಹುಟ್ಟುಹಬ್ಬ, ಹೊಸ ವರ್ಷ ಆಚರಿಸಿಕೊಂಡರೆ ದಲಿತರು, ಹಿಂದುಳಿದವರು ಉದ್ಧಾರವಾಗಲ್ಲ. ಭಾಷಣದಿಂದ ದೀನ ದಲಿತರು ಉದ್ಧಾರವಾಗಲ್ಲ’ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಲ್ಯಾಪ್‌ಟಾಪ್ ಖರೀದಿಯಲ್ಲಿ ಅವ್ಯವಾಹರ ಮಾಡಿದೆ. ದೀನದಲಿತರು ಉಣ್ಣುವ ತಟ್ಟೆಯಿಂದ ಅನ್ನ ಕಸಿದುಕೊಂಡಿದೆ. ಇಂಥದ್ದನ್ನು ಮೊದಲೇ ಅರಿತದ್ದ ಅಂಬೇಡ್ಕರ್ ‘ಕಾಂಗ್ರೆಸ್ ಸುಡುವ ಮನೆ, ಅಂಥ ಮನೆಯೊಳಗೆ ಹೋಗಬಾರದು’ ಎಂದು ಹೇಳಿದ್ದರು. ದೀನ ದಲಿತರು ಕಾಂಗ್ರೆಸ್‌ಗೆ ಮತ ಹಾಕದೇ ಅಂಬೇಡ್ಕರ್ ಮಾತನ್ನು ಪಾಲಿಸಿ ಎಂದು ಮನವಿ ಮಾಡಿದರು.

ಚಿತ್ರದುರ್ಗ ತಾಲ್ಲೂಕು ಗ್ರಾಮಾಂತರ ವಿಭಾಗದ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ ಸ್ವಾಗತಿಸಿದರು. ವೇದಿಕೆಯಲ್ಲಿ ಮಾಜಿ ಸಂಸದ ಜನಾರ್ದನಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷ ಟಿ. ಜಿ.ನರೇಂದ್ರನಾಥ್, ಪರಿವರ್ತನಾ ಯಾತ್ರೆ ಉಸ್ತುವಾರಿ ಮಧುಶ್ರು ಮಾಜಿ ಸಚಿವ ರೇಣುಕಾಚಾರ್ಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ನವೀನ್, ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಪ್ರಕಾಶ್, ಮುಖಂಡರಾದ ಲೀಲಾಧರ ಠಾಕೂರ್, ಮುರಳಿ, ಸಿದ್ದೇಶ್ ಯಾದವ್, ಎನ್. ರವಿಕುಮಾರ್, ಜಿ.ಎಂ. ಸುರೇಶ್, ಬದರಿನಾಥ್, ಜಯಣ್ಣ, ರಾಮಯ್ಯ, ಕೆ.ಜಿ.ಟಿ. ಗುರುಮೂರ್ತಿ, ಶ್ಯಾಮಲಾ ಶಿವಪ್ರಕಾಶ್, ಭೀಮರಾಜ್ ಇದ್ದರು.

ಬಿಜೆಪಿಗೆ ಸೇರ್ಪಡೆ

ಪರಿವರ್ತನಾ ಯಾತ್ರೆ ವೇದಿಕೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ. ಕೃಷ್ಣಮೂರ್ತಿ, ಕುರುಬ ಸಮಾಜದ ಮುಖಂಡ ಎಚ್. ಮಂಜಪ್ಪ, ನಗರಸಭೆ ಮಾಜಿ ಸದಸ್ಯ ನರಸಿಂಹಮೂರ್ತಿ, ಕಂಟ್ರಾಕ್ಟರ್ ಪಿಳ್ಳೇಕಾರನಹಳ್ಳಿ ರವಿಕುಮಾರ್ ಅವರು ಬಿಜೆಪಿ ಸೇರಿದರು. ನಾಲ್ವರನ್ನು ಯಡಿಯೂರಪ್ಪ ಅವರು ಬಿಜೆಪಿ ಶಾಲು ಹೊದಿಸಿ, ಪಕ್ಷಕ್ಕೆ ಬರ ಮಾಡಿಕೊಂಡರು.

ಭರ್ಜರಿ ಪರಿವರ್ತನಾ ಯಾತ್ರೆ ಮೆರವಣಿಗೆ

ಕಾರ್ಯಕ್ರಮಕ್ಕೂ ಮುನ್ನ ನಗರ ಪ್ರವೇಶಿಸಿದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಪರಿವರ್ತನಾ ಯಾತ್ರೆ ತಂಡವನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಸಭಾ ಕಾರ್ಯಕ್ರಮ ನಡೆಯುವ ಹಳೇ ಮಾಧ್ಯಮಿಕ ಶಾಲಾ ಮೈದಾನಕ್ಕೆ ಕರೆತರಲಾಯಿತು. ಯಡಿಯೂರಪ್ಪ ಅವರೊಂದಿಗೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಮಾಜಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ವಿವಿಧ ಮುಖಂಡರು ಯಾತ್ರಾ ವಾಹನದಲ್ಲಿ ಆಸೀನರಾಗಿದ್ದರು.

* * 

ಅಚ್ಛೇದಿನ್ ಯಾವಾಗ ಬರುತ್ತೆ ಅಂತ ಕೇಳುತ್ತಿದ್ದೀರಲ್ಲವೇ ? ಈ ಚುನಾವಣೆಯಲ್ಲಿ ಜನ ನಿಮ್ಮನ್ನು ಮನೆಗೆ ಕಳಿಸುತ್ತಾರಲ್ಲಾ, ಆಗ ಅಚ್ಛೇದಿನ್ ಬರುತ್ತದೆ’

- ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry