‘ಮಾನಸಿಕ ಅಂದವೇ ಫಿಟ್‌ನೆಸ್‌’

7

‘ಮಾನಸಿಕ ಅಂದವೇ ಫಿಟ್‌ನೆಸ್‌’

Published:
Updated:
‘ಮಾನಸಿಕ ಅಂದವೇ ಫಿಟ್‌ನೆಸ್‌’

* ಮಿಸ್ಟರ್‌ ಐರನ್‌ಮ್ಯಾನ್‌ ಹೇಗಿದ್ದೀರಿ?

ಚೆನ್ನಾಗಿದ್ದೀನಿ ಬೆಂಗಳೂರು ಲೇಡಿ. ಐರನ್‌ಮ್ಯಾನ್‌ ಅಂತ ಗುರುತಿಸಿದ್ದಕ್ಕೆ ಥ್ಯಾಂಕ್ಸ್‌.

* ನಿಮ್ಮ ಪ್ರಕಾರ ಫಿಟ್‌ನೆಸ್‌ ಅಂದರೇನು?

ಫಿಟ್‌ನೆಸ್‌ ಅಂದರೆ ದೈಹಿಕ ಕ್ಷಮತೆ ಮಾತ್ರ ಅಂತ ಸಾಮಾನ್ಯವಾಗಿ ಎಲ್ಲರೂ ನಂಬುತ್ತಾರೆ. ನಮ್ಮನ್ನು ನಾವು ಅಂದವಾಗಿಟ್ಟುಕೊಳ್ಳಲು ವ್ಯಾಯಾಮ ಮಾಡುತ್ತೇವೆ. ಪ್ರತಿದಿನ ವ್ಯಾಯಾಮ ಮಾಡುತ್ತಿದ್ದರೆ ನಮ್ಮನ್ನು ನಾವು ಅರ್ಥ ಮಾಡಿಕೊಳ್ತಾ ಹೋಗ್ತೇವೆ. ಅಂದರೆ ನಮ್ಮೊಳಗನ್ನು, ನಮ್ಮ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳುವ ಮಾಧ್ಯಮವೇ ವ್ಯಾಯಾಮ. ನಮ್ಮನ್ನು ನಾವು ಅರಿತುಕೊಂಡಷ್ಟು ಮಾನಸಿಕವಾಗಿ ಸದೃಢರಾಗುತ್ತಾ, ಆತ್ಮವಿಶ್ವಾಸ ಹೆಚ್ಚುತ್ತಾ ಹೋಗುತ್ತದೆ.

* ಸೆಲೆಬ್ರಿಟಿಗಳಲ್ಲಿ ಸಾಮಾಜಿಕ ಕಳಕಳಿ ಕಡಿಮೆ ಆಗ್ತಿದೆಯಾ?

ಕೆಲವೊಮ್ಮೆ ಹೌದು ಅನಿಸುತ್ತಿದೆ. ನಮ್ಮನ್ನು ಸೆಲೆಬ್ರಿಟಿಗಳನ್ನಾಗಿ ಬೆಳೆಸಿದ ಈ ಸಮಾಜಕ್ಕೆ ನಾವೇನಾದರೂ ಹಿಂತಿರುಗಿಸಬೇಕು ಎಂದಾದರೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಹತ್ತಾರು ಮಾರ್ಗಗಳಿವೆ. ಆದರೆ ದುಡ್ಡು ಮಾಡೋದಷ್ಟೇ ಉದ್ದೇಶವಾದರೆ ಅಂತಹ ಕಾಳಜಿ ಬರೋದೇ ಇಲ್ಲ. ‘ಕಲರ್ಸ್‌ ಪಿಂಕಥಾನ್‌’ನಂತಹ ಮಹಿಳಾ ಸಬಲೀಕರಣದ ಕಾರ್ಯಕ್ರಮಗಳು ನನಗೆ ಬಹಳ ತೃಪ್ತಿ ಕೊಡುತ್ತವೆ. ಹೌದು, ನಾವು ಸೆಲೆಬ್ರಿಟಿಗಳು ನಮ್ಮ ಕೈಲಾದ ನೆರವನ್ನು ಕೊಟ್ಟು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರ ಬಾಳು ಬೆಳಗಬೇಕು.

* ವಯಸ್ಸು 50 ದಾಟಿದರೂ ದೈಹಿಕ ಕ್ಷಮತೆ ಕಾಪಾಡಿಕೊಂಡಿರೋದು ಹೇಗೆ?

ಉತ್ತಮ ಚಿಂತನೆ, ಉತ್ತಮ ಆಹಾರ, ಉತ್ತಮ ಹವ್ಯಾಸ ಮತ್ತು ಉತ್ತಮ ಜೀವನಶೈಲಿ ರೂಡಿಸಿಕೊಂಡರೆ ಇಳಿವಯಸ್ಸಿನಲ್ಲಿಯೂ ದೈಹಿಕ ಕ್ಷಮತೆ ಕಾಪಾಡಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಾವು ಎಷ್ಟು ಚಟುವಟಿಕೆಯಿಂದ ಕೂಡಿರುತ್ತೇವೆ ಎಂಬುದೂ ದೈಹಿಕ ಕ್ಷಮತೆ, ಆರೋಗ್ಯ ಮತ್ತು ಫಿಟ್‌ನೆಸ್‌ನಲ್ಲಿ ಗಮನಾರ್ಹವಾಗುತ್ತದೆ.

* ಮಹಿಳೆಯರ ಸಬಲೀಕರಣದ ಯೋಜನೆಗಳಲ್ಲಿ ಯಾಕೆ ತೊಡಗಿಸಿಕೊಂಡಿದ್ದೀರಿ?

ಮಹಿಳೆಯರು ಕುಟುಂಬದ ಎಲ್ಲರಿಗೂ ಒಳಿತನ್ನು ಬಯಸುತ್ತಾರೆ. ದಿನವಿಡೀ ಅವರು ಕುಟುಂಬದ ಬಗ್ಗೆಯೇ ಯೋಚಿಸುತ್ತಾರೆ. ಆದರೆ ತಮ್ಮ ದೈಹಿಕ ಮತ್ತು ಬೌದ್ಧಿಕ ಕ್ಷಮತೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆರೋಗ್ಯ ತೀರಾ ಹದಗೆಟ್ಟಾಗಲೇ ಅವರು ಅದರ ಬಗ್ಗೆ ಯೋಚಿಸುತ್ತಾರೆ. ಇದು ಒಂದು ಉದಾಹರಣೆ ಮಾತ್ರ. ಮನೆಯಿಂದಾಚೆ ಅಥವಾ ನೌಕರಿಯಿಂದಾಚೆ ಚಿಂತಿಸಲೂ ಅವಕಾಶ ಸಿಗದ ಹೆಣ್ಣುಮಕ್ಕಳನ್ನು ಮಾನಸಿಕವಾಗಿ ಸದೃಢಗೊಳಿಸುವ ಪ್ರಯತ್ನ ನಡೆಯಬೇಕಿದೆ. ಅದಕ್ಕೆ ‘ಕಲರ್ಸ್‌ ಪಿಂಕಥಾನ್‌’ ಉತ್ತಮ ವೇದಿಕೆ. ಪಿಂಕಥಾನ್‌ನಲ್ಲಿ ಸ್ತನ ಕ್ಯಾನ್ಸರ್‌ ಬಗ್ಗೆಯಷ್ಟೇ ಜಾಗೃತಿ ಮೂಡಿಸುವುದಿಲ್ಲ. ಬದಲಾಗಿ, ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹಲವಾರು ಬಗೆಯ ಕ್ಯಾನ್ಸರ್‌ ಮತ್ತು ಇತರ ಕಾಯಿಲೆಗಳ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತದೆ.

* ಆರನೇ ವರ್ಷದ ಕಲರ್ಸ್‌ ಪಿಂಕಥಾನ್‌ ಬಗ್ಗೆ...

ಮುಂಬೈಯ ನಂತರ ಬೆಂಗಳೂರಿನಲ್ಲೇ ಈ ಬಾರಿಯೂ ಪಿಂಕಥಾನ್‌ ನಡೆಸಲು ನಿರ್ಧರಿಸಿದ್ದೇವೆ. ಇಲ್ಲಿ ದುಡಿಯುವ ಹೆಣ್ಣುಮಕ್ಕಳ ಸಂಖ್ಯೆ ಬಹಳ ದೊಡ್ಡದು. ಅವರಲ್ಲಿ ಆರೋಗ್ಯದ ಜಾಗೃತಿ ಮೂಡಿಸಬೇಕು ಎಂಬುದು ಒಂದು ಉದ್ದೇಶವಾದರೆ, ಬೆಂಗಳೂರಿನಷ್ಟು ಪ್ರಾಯೋಜಕರು ಬೇರೆ ಯಾವ ನಗರದಲ್ಲಿಯೂ ಸಿಗುವುದಿಲ್ಲ. ಅಂದರೆ ಈ ಪ್ರಾಯೋಜಕತ್ವದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣುಮಕ್ಕಳಿಗೆ ಸಹಾಯ ಮಾಡಬಹುದು ಎಂಬುದು ನಮ್ಮ ಉದ್ದೇಶ. ಈ ಬಾರಿ ಫೆಬ್ರುವರಿ 18ರಂದು ನಿಮ್ಮ ನಮ್ಮ ಈ ಬೆಂಗಳೂರಿನಲ್ಲಿ ಮ್ಯಾರಥಾನ್ ನಡೆಯಲಿದೆ. 10 ಸಾವಿರ ಮಹಿಳೆಯರು ದೇಶದ ನಾನಾ ಭಾಗಗಳಿಂದ ಬರಲಿದ್ದಾರೆ.

* ನಿಮ್ಮ ಈಗಿನ ಸಂಗಾತಿ ನಿಮ್ಮ ಮಗಳ ವಯಸ್ಸಿನವರು ಅಲ್ವೇ?

ಓಹೋ... ಈ ಪ್ರಶ್ನೆಯೂ ಇದೆಯಾ? ಇರಲಿ. ಅವಳ ವಯಸ್ಸೆಷ್ಟು ನಿಮಗೆ ಗೊತ್ತಾ? ಕೇವಲ 26. ಹೌದು ನನ್ನ ಮಗಳ ವಯಸ್ಸು ಅನ್ನೋಣ. ಏನೀಗ? ಸಣ್ಣ ವಯಸ್ಸಿನವರು ಸಂಗಾತಿಯಾಗಬಾರದೇ? ನನಗೆ ಹಾಗೇನೂ ಅನಿಸಲೇ ಇಲ್ಲ. ಅದು ನನ್ನ ಖಾಸಗಿ ಬದುಕು. ಅದರಿಂದ ಈ ಸಮಾಜಕ್ಕೆ, ನಾನು ಮಾಡುವ ಸಾಮಾಜಿಕ ಕಾರ್ಯಗಳಿಗೆ ಏನಾದರೂ ಅಡಚಣೆ ಆಗುತ್ತಿಲ್ಲ ತಾನೇ?

* ಅಂದರೆ ಟೀಕೆಗಳಿಂದ ನೀವು ವಿಚಲಿತರಾಗುವುದಿಲ್ಲವೇ?

ನೂರಕ್ಕೆ ನೂರು ನಿಜ. ಟೀಕೆ ಮಾಡುವವರು ಯಾವಾಗಲೂ, ಯಾವುದಕ್ಕಾದರೂ ಟೀಕೆ ಮಾಡುತ್ತಲೇ ಇರುತ್ತಾರೆ. ಅದೊಂದು ಚಟ. ಟೀಕೆಗಳು ಒಳ್ಳೆಯ ಕೆಲಸಕ್ಕೂ ಬರುತ್ತವೆ, ಕೆಟ್ಟ ಕೆಲಸಕ್ಕೂ ಬರುತ್ತವೆ. ಅದು ಅವರವರು ನೋಡುವ, ಚಿಂತಿಸುವ ದೃಷ್ಟಿಕೋನವನ್ನು ಅವಲಂಬಿಸುತ್ತದೆ. ನಾನು ನನ್ನ ಸಂಗಾತಿಯನ್ನು ಆರಿಸಿಕೊಂಡಾಗ ವ್ಯಕ್ತವಾದ ಟೀಕೆಗಳಿಗೆ ಕ್ಯಾರೇ ಅನ್ನಲಿಲ್ಲ. ಟೀಕೆಗಳಿಗೆ ಕಿವುಡಾಗಿರಬೇಕು ಅಷ್ಟೇ.

* ಸೆಲ್ಫಿ ಬೇಕಾ? ಬಸ್ಕಿ ತೆಗೀರಿ!

ಮಿಲಿಂದ್‌ ಸೋಮನ್‌ ಎಲ್ಲೇ ಹೋದರೂ ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳು ಮುತ್ತಿಕೊಳ್ಳುವುದು ಸಾಮಾನ್ಯ. 50 ದಾಟಿದರೂ 30ರ ಕಟ್ಟುಮಸ್ತು. ಮಾತಿನಲ್ಲೇ ಕಟ್ಟಿಹಾಕುವ ಛಾತಿ ಬೇರೆ. ‘ಪಿಂಕಥಾನ್‌’ ಸುದ್ದಿಗೋಷ್ಠಿಯಲ್ಲಿಯೂ ಹೀಗೇ ಆಯಿತು. ಬರುತ್ತಲೇ ಮೈಕ್‌ ಕೈಗೆತ್ತಿಕೊಂಡು ಕಾರ್ಯಕ್ರಮ ನಿರೂಪಕನಾದ ಮಿಲಿಂದ್‌ ಅವರನ್ನು ಒಂದಸ್ಟು ಮಂದಿ ಸೆಲ್ಫಿಗಾಗಿ ಮುಗಿಬಿದ್ದರು. ಆರಂಭದಲ್ಲಿ ಕೆಲವು ಮಾಧ್ಯಮ ಛಾಯಾಗ್ರಾಹಕರು ಹಾಗೂ ಕಾರ್ಯಕ್ರಮ ಸಂಘಟಕರೊಂದಿಗೆ ಸೆಲ್ಫಿಗೆ ಪೋಸ್‌ ಕೊಟ್ಟರು. ಆದರೆ ಸುದ್ದಿಗೋಷ್ಠಿಯ ನಂತರ ಸೆಲ್ಫಿ ಕೇಳಿದವರಿಗೆ ‘ಮೊದಲು 10 ಪುಶ್‌ ಅಪ್‌ ಮಾಡಿ’ ಎಂದು ಖಡಕ್ಕಾಗಿ ಹೇಳಿದರು. ಹಾಗೆ ಪುಶ್‌ ಅಪ್‌ ಮಾಡಿ ಸೆಲ್ಫಿ ಪಡೆದವಳು ಮಾಧ್ಯಮ ಪ್ರತಿನಿಧಿ!

ಎಂಟು ತಿಂಗಳ ಮಗುವಿನ ತಾಯಿಗೆ ಬಸ್ಕಿ ತೆಗೆಸಿದರು! ದೇಹದಂಡಿಸಿ ಸೆಲ್ಫಿಗೆ ನಗುನಗುತ್ತಾ ಪೋಸ್‌ ಕೊಡುವ ಆಟ ಹೀಗೇ ಮುಂದುವರಿದಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry