ವಕೀಲರ ವಿರುದ್ಧ ಕ್ರಮಕ್ಕೆ ನಿರ್ದೇಶನ

7
ವಿಚಾರಣೆಗೆ ಗೈರು ಹಾಜರಿ: ಹೈಕೋರ್ಟ್ ಅಸಮಾಧಾನ

ವಕೀಲರ ವಿರುದ್ಧ ಕ್ರಮಕ್ಕೆ ನಿರ್ದೇಶನ

Published:
Updated:

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದುಪಡಿಸುವಂತೆ ಕೋರಿ ಆರೋಪಿಯೊಬ್ಬ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಗೆ ಸತತ ಗೈರು ಹಾಜರಾದ ವಕೀಲರೊಬ್ಬರ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ವಕೀಲರ ಪರಿಷತ್‌ಗೆ ಹೈಕೋರ್ಟ್ ನಿರ್ದೇಶಿಸಿದೆ.

ಕೊಲೆ ಪ್ರಕರಣದಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತ್ವರಿತ ಗತಿ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿ ಕುಮಾರ ಎಂಬುವರು ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಆರೋಪಿ ಪರ ವಕೀಲ ಮುಜಾಫರ್ ಅಹ್ಮದ್ ಎಂಬುವವರು ವಕಾಲತು ವಹಿಸಿದ್ದರು. ಆದರೆ, ಪ್ರಕರಣ ವಿಚಾರಣೆಗೆ ಬಂದಾಗಲೆಲ್ಲಾ ಗೈರು ಹಾಜರಾಗುತ್ತಿದ್ದರು.

ಬುಧವಾರವೂ ಮುಜಾಫರ್ ಅಹ್ಮದ್ ವಿಚಾರಣೆಗೆ ಹಾಜರಾಗಿರಲಿಲ್ಲ. ಇದಕ್ಕೆ ಬೇಸರ ವ್ಯಕ್ತಪಡಿಸಿದ ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಎಚ್.ಬಿ. ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ಪೀಠ, ‘ವಕೀಲ ಮುಜಾಫರ್ ಅಹ್ಮದ್ ಅವರ ಗೈರು ಹಾಜರಿ ಅಶಿಸ್ತಿನ ವರ್ತನೆ ಆಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

‘ಈ ವರ್ತನೆಯಿಂದ ಕಕ್ಷಿದಾರನ ಹಕ್ಕಿನ ಉಲ್ಲಂಘನೆ, ನ್ಯಾಯಾಂಗದ ವಿಫಲತೆಗೆ ದಾರಿ ಮಾಡಿಕೊಡಲಿದೆ. ಅದರಲ್ಲೂ ಜೈಲಿನಲ್ಲಿರುವ ಕಕ್ಷಿದಾರನ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕೋರ್ಟ್ ಬಯಸುತ್ತದೆ. ವಕೀಲರೇ ಹಾಜರಾಗದಿದ್ದರೆ, ತ್ವರಿತ ವಿಚಾರಣೆ ಕಷ್ಟಸಾಧ್ಯ’ ಎಂದು ಹೇಳಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry