ದೂಳು, ಬಿಸಿಲಿನಲ್ಲಿ ಬಿಸಿಯೂಟ ಸೇವನೆ

7
ಚಿಕ್ಕಬಾಣಾವರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ದೂಳು, ಬಿಸಿಲಿನಲ್ಲಿ ಬಿಸಿಯೂಟ ಸೇವನೆ

Published:
Updated:
ದೂಳು, ಬಿಸಿಲಿನಲ್ಲಿ ಬಿಸಿಯೂಟ ಸೇವನೆ

ಬೆಂಗಳೂರು: ‘ಅವ್ವ ಗಾರೆ ಕೆಲ್ಸಕ್ಕೆ ಹೋಗೊ ಮುನ್ನ ರಾಗಿ ಗಂಜಿ ಮಾಡಿಕೊಡ್ತಾಳೆ. ಮಧ್ಯಾಹ್ನಕ್ಕೆ ಅದು ಕರಗಿ, ಹೊಟ್ಟೆ ಚುರುಗುಟ್ಟುತ್ತಿರುತ್ತದೆ. ಬಿಸಿಯೂಟ ಸಿಕ್ಕರೆ ಸಾಕು ಅಂತ ಮನಸ್ಸು ಒದ್ದಾಡುತ್ತಿರುತ್ತದೆ. ಆ ಹಸಿವಿನಲ್ಲಿ ಏನು ತಿನ್ನುತ್ತಿದ್ದೇವೆ ಎನ್ನುವ ಪರಿವೇ ಇರುವುದಿಲ್ಲ'.

–ಇದು ಚಿಕ್ಕಬಾಣಾವರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ವಿದ್ಯಾರ್ಥಿ ನಾಗರಾಜನ ನುಡಿಗಳು.

ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಸುಮಾರು 700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೆಸರಘಟ್ಟ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಈ ಶಾಲೆ ಇದೆ. ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಕುಳಿತು ದೂಳಿನ ನಡುವೆಯೇ ಊಟ ಮಾಡುವುದು ಸಾಮಾನ್ಯ ಎನ್ನುವಂತಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲಿಲ್ಲ.

‘ಮಕ್ಕಳು ಊಟ ಮಾಡಲು ಒಂದು ಕೊಠಡಿ ಕಟ್ಟಿಸಿ ಕೊಡಿ ಎಂದು ಅನೇಕ ಬಾರಿ ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ದೂಳು, ಕಸ ಕಡ್ಡಿಗಳನ್ನು ಲೆಕ್ಕಸದೇ ಮಕ್ಕಳು ಊಟ ಮಾಡುತ್ತಾರೆ’ ಎಂದು ಗ್ರಾಮದ ನಿವಾಸಿ ಬಿ.ಸಿ.ಗೋವಿಂದರಾಜು ಹೇಳಿದರು.

‘ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಶಾಲೆ ಎದುರೇ ಪ್ರತಿ ದಿನ ಓಡಾಡುತ್ತಾರೆ. ಆದರೆ, ಶಾಲೆ ಸ್ಥಿತಿಗತಿ ಬಗ್ಗೆ ಈವರೆಗೂ ವಿಚಾರಿಸಿಲ್ಲ. ಶತಮಾನ ಕಂಡಿರುವ ಈ ಶಾಲೆಗೆ ಮೂಲಸೌಕರ್ಯವನ್ನೂ ಒದಗಿಸಿಲ್ಲ’ ಎಂದು ದೂರಿದರು.

’ಈ ಶಾಲೆಯಲ್ಲಿಯೇ ಕಲಿತು ಈಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಚನ್ನಕೇಶವ ಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಪ್ರಕಾಶ್, ಬಿ.ವಿ.ಪ್ರಕಾಶ್, ಮಲ್ಲೇಶ್, ಸುರೇಶ್, ಗಿರೀಶ್ ಅವರು ಓದಿದ ಶಾಲೆ ಬಗ್ಗೆ ಕನಿಷ್ಠ ಕಾಳಜಿಯನ್ನು ತೋರದಿರುವುದು ನೋವಿನ ಸಂಗತಿ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಯಲಹಂಕ ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ್‌ ಅವರನ್ನು ಸಂಪರ್ಕಿಸಿದಾಗ ‘ಈ ಬಗ್ಗೆ ಕ್ರಮಕೈಗೊಳ್ಳುತ್ತೇವೆ’ ಎಂದಷ್ಟೇ ಪ್ರತಿಕ್ರಿಯಿಸಿದರು.

700 ಮಕ್ಕಳಿಗೆ ಒಬ್ಬರೇ ದೈಹಿಕ ಶಿಕ್ಷಣ ಶಿಕ್ಷಕರು

ಈ ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕಿಯೊಬ್ಬರನ್ನು ನೇಮಕ ಮಾಡಿ ಆರು ತಿಂಗಳಾಗಿದೆ. ಈವರೆಗೂ ಅವರು ಶಾಲೆಗೆ ಬಂದಿಲ್ಲ. ಈ ಶಾಲೆಗೆ ಇಬ್ಬರು ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋಜಿಸಲಾಗಿದೆ. ಚಿಕ್ಕಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಂಜುಳ ಎಸ್. ವಡ್ಡರ್ ಅವರನ್ನು ವಾರದಲ್ಲಿ ಮೂರು ದಿನ ಇಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಆದರೆ, ಅವರು ಒಮ್ಮೆಯೂ ಈ ಶಾಲೆಗೆ ಬಂದಿಲ್ಲ.

‘ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ತಿಳಿಸಿದ್ದರೂ ಬೇರೆಯವರನ್ನು ನೇಮಿಸಿಲ್ಲ. ಬಾಗಲಗುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿವಣ್ಣ ಅವರು ವಾರದಲ್ಲಿ ಮೂರು ದಿನ ಪಾಠ ಹೇಳಿಕೊಡುತ್ತಿದ್ದಾರೆ’ ಎಂದು ಶಾಲಾ ಶಿಕ್ಷಕರೊಬ್ಬರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry