ಫ್ಲ್ಯಾಟ್‌ಗಳ ಮಾರಾಟಕ್ಕೆ ಎನ್‌ಜಿಟಿ ತಡೆಯಾಜ್ಞೆ

7
ಕೈಕೊಂಡರಹಳ್ಳಿ ಕೆರೆ ಬಫರ್‌ ವಲಯ ನಿಯಮ ಉಲ್ಲಂಘನೆ

ಫ್ಲ್ಯಾಟ್‌ಗಳ ಮಾರಾಟಕ್ಕೆ ಎನ್‌ಜಿಟಿ ತಡೆಯಾಜ್ಞೆ

Published:
Updated:

ನವದೆಹಲಿ: ಬೆಂಗಳೂರಿನ ಸರ್ಜಾಪುರ ಮುಖ್ಯ ರಸ್ತೆಯಲ್ಲಿರುವ ಕೈಕೊಂಡರಹಳ್ಳಿ ಕೆರೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಎಸ್‌ಜೆಆರ್‌ ಪ್ರೈಂ ಕಾರ್ಪೊರೇಷನ್‌ನ ವಸತಿ ಸಮುಚ್ಚಯದ ಫ್ಲ್ಯಾಟ್‌ಗಳ ಮಾರಾಟ ಹಾಗೂ ಬಾಡಿಗೆಗೆ ನೀಡುವುದಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಬುಧವಾರ ತಡೆಯಾಜ್ಞೆ ನೀಡಿದೆ.

ಕೆರೆಯ ಬಫರ್‌ ವಲಯದ ನಿಯಮ ಉಲ್ಲಂಘಿಸಲಾಗಿದೆ ಎಂದು ದೂರಿ ವಕೀಲ ಕೆ.ಎಸ್‌. ರವಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯು.ಡಿ. ಸಾಳ್ವಿ ನೇತೃತ್ವದ ಪೀಠವು ‘ಬಫರ್‌ ವಲಯ’ದ ನಿಯಮ ಉಲ್ಲಂಘಿಸಿರುವ ಕಾರಣ ನೀಡಿ, ಫ್ಲ್ಯಾಟ್‌ಗಳ ಮೇಲೆ ಮೂರನೇ ವ್ಯಕ್ತಿ ಹಕ್ಕು ಸ್ಥಾಪಿಸುವುದಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಿತು.

ಮುಂದಿನ ವಿಚಾರಣೆಯ ದಿನವಾದ ಫೆಬ್ರುವರಿ 7ರೊಳಗೆ ಈ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಎಸ್‌ಜೆಆರ್‌ ಪ್ರೈಂ ಕಾರ್ಪೊರೇಷನ್‌ಗೆ ಹಸಿರು ಪೀಠ ಸೂಚಿಸಿತು.

ಈ ವಸತಿ ಸಮುಚ್ಚಯಕ್ಕೆ ನೀಡಲಾದ ವಸತಿ ಪ್ರಮಾಣಪತ್ರ ಹಾಗೂ ನೀಲನಕ್ಷೆಯನ್ನು ರದ್ದುಪಡಿಸಿದ್ದಾಗಿ, ಸರ್ಜಾಪುರ ಮುಖ್ಯರಸ್ತೆಯಲ್ಲಿನ ರಾಜಕಾಲುವೆ ಬಳಿಯ 10 ಗುಂಟೆ ಜಾಗದಲ್ಲಿ ಎಸ್‌.ಕೆ. ಮೋಹನ್‌ ಎಂಬುವವರು ನಿರ್ಮಿಸುತ್ತಿರುವ ವಾಣಿಜ್ಯ ಸಂಕೀರ್ಣಕ್ಕೂ ಅಕ್ರಮವಾಗಿ ನೀಡಲಾಗಿರುವ ಅನುಮತಿಯನ್ನು ಹಿಂದಕ್ಕೆ ಪಡೆದಿರುವ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಜನರಿಗೆ ಮಾಹಿತಿ ನೀಡುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರಿಗೆ ಪೀಠ ನಿರ್ದೇಶನ ನೀಡಿತು.

‘ಅಕ್ರಮವಾಗಿ ನಿರ್ಮಿಸಿರುವ ವಸತಿ ಸಮುಚ್ಚಯಕ್ಕೆ ಬೀಗ ಜಡಿಯಬೇಕು’ ಎಂದು ಅರ್ಜಿದಾರರ ಪರ ವಕೀಲ ಪಿ.ರಾಮಪ್ರಸಾದ್‌ ಕೋರಿದರಾದರೂ, ಈ ಕುರಿತು ಪ್ರತಿಕ್ರಿಯೆ ನೀಡುವಂತೆಯೂ ನ್ಯಾಯಪೀಠ ಪ್ರತಿವಾದಿಗಳಿಗೆ ತಿಳಿಸಿತು.

ವಸತಿ ಸಮುಚ್ಚಯದಲ್ಲಿನ ಒಟ್ಟು 529 ಫ್ಲ್ಯಾಟ್‌ಗಳ ಪೈಕಿ 440 ಫ್ಲ್ಯಾಟ್‌ಗಳನ್ನು ಈಗಾಗಲೇ ಮಾರಾಟ ಮಾಡಲಾಗಿದ್ದು, ಜನರು ಅಲ್ಲಿ ವಾಸವಿದ್ದಾರೆ. ಇನ್ನೂ 40 ಫ್ಲ್ಯಾಟ್‌ಗಳ ಮಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಎಸ್‌ಜೆಆರ್‌ ಪ್ರೈಂ ಕಾರ್ಪೋರೇಷನ್‌ ಪರ ವಕೀಲರು ತಿಳಿಸಿದರು.

ಈ ಹೇಳಿಕೆ ದಾಖಲಿಸಿಕೊಂಡು, ಇನ್ನು ಮುಂದೆ ಯಾರಿಗೂ ಫ್ಲ್ಯಾಟ್‌ ಮಾರಾಟ ಮಾಡಕೂಡದು ಎಂದು ಸೂಚಿಸಿದ ಪೀಠವು, ಫ್ಲ್ಯಾಟ್‌ಗಳಲ್ಲಿ ವಾಸ ಇರುವವರ ವಿವರ, ಒಪ್ಪಂದ ಮಾಡಿಕೊಂಡವರ ವಿವರವನ್ನು ಒಳಗೊಂಡ ಪಟ್ಟಿಯನ್ನು ಸಲ್ಲಿಸುವಂತೆಯೂ ಹೇಳಿತು.

ಕೆರೆಯ ಬಫರ್‌ ವಲಯದ ನಿಯಮ ಉಲ್ಲಂಘಿಸಿ ಈಗಾಗಲೇ ಸಾಕಷ್ಟು ಸಮಸ್ಯೆ ಸೃಷ್ಟಿಸಲಾಗಿದೆ. ಇನ್ನು ಮುಂದೆ ಯಾವುದೇ ರೀತಿಯ ಸಮಸ್ಯೆ ಉದ್ಭವಿಸಲು ಅವಕಾಶ ನೀಡಲಾಗದು ಎಂದು ನ್ಯಾಯಮೂರ್ತಿ ಸಾಳ್ವಿ ಕಟುವಾಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry