‘ಕಿಂಡಿ’ ವ್ಯವಹಾರ; ಇನ್‌ಸ್ಪೆಕ್ಟರ್‌ ಅಮಾನತು

7
ಅಗ್ನಿ ಅವಘಡದಲ್ಲಿ ಐವರು ಮೃತಪಟ್ಟ ಪ್ರಕರಣ * ನಗರ ಪೊಲೀಸ್‌ ಕಮಿಷನರ್‌ ಆದೇಶ

‘ಕಿಂಡಿ’ ವ್ಯವಹಾರ; ಇನ್‌ಸ್ಪೆಕ್ಟರ್‌ ಅಮಾನತು

Published:
Updated:

ಬೆಂಗಳೂರು: ‘ಕೈಲಾಶ್‌ ಬಾರ್‌ ಹಾಗೂ ರೆಸ್ಟೋರಂಟ್‌’ನಲ್ಲಿ ‘ಕಿಂಡಿ’ ಮೂಲಕ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರೂ ಕ್ರಮ ಕೈಗೊಳ್ಳದ ಆರೋಪದಡಿ ಕಲಾಸಿಪಾಳ್ಯ ಠಾಣೆಯ ಇನ್‌ಸ್ಪೆಕ್ಟರ್‌ ಆರ್‌. ಪ್ರಕಾಶ್‌ ಅವರನ್ನು ಅಮಾನತು ಮಾಡಲಾಗಿದೆ.

ಜ. 8ರಂದು ನಸುಕಿನಲ್ಲಿ ಬಾರ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ, ಐವರು ಕೆಲಸಗಾರರು ಮೃತಪಟ್ಟಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಎದುರು ಬಾರ್‌ನ ‘ಕಿಂಡಿ’ ವ್ಯವಹಾರದ ಬಗ್ಗೆ ಸ್ಥಳೀಯರು ದೂರಿದ್ದರು. ಹೀಗಾಗಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವರು, ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್‌ ಅವರಿಗೆ ಸೂಚಿಸಿದ್ದರು.

ಇಲಾಖಾ ವಿಚಾರಣೆ ನಡೆಸಿದ್ದ ಕಮಿಷನರ್‌, ಇನ್‌ಸ್ಪೆಕ್ಟರ್‌ ಅವರನ್ನು ಅಮಾನತು ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ. ‘ಇನ್‌ಸ್ಪೆಕ್ಟರ್‌ ಅವರು ಕರ್ತವ್ಯದಲ್ಲಿ ತೀವ್ರತರವಾದ ನಿರ್ಲಕ್ಷ್ಯತೆ, ಅಶಿಸ್ತು ಮತ್ತು ಘೋರ ಕರ್ತವ್ಯಲೋಪ ಎಸಗಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ’ ಎಂದು ಆದೇಶದಲ್ಲಿ ಬರೆದಿದ್ದಾರೆ.

‘ಹಲವು ವರ್ಷಗಳಿಂದ ಆ ಜಾಗದಲ್ಲಿ ಬಾರ್‌ ಇದೆ. ನಿಯಮದ ಪ್ರಕಾರ ರಾತ್ರಿ 1 ಗಂಟೆಗೆ ವಹಿವಾಟು ಬಂದ್‌ ಮಾಡಬೇಕು. ಆದರೆ, 24 ಗಂಟೆಯೂ ಮದ್ಯ ಮಾರಾಟ ಮಾಡುತ್ತಿದ್ದುದ್ದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಕಮಿಷನರ್‌ ಸುನೀಲ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಗದಿತ ಸಮಯಕ್ಕೆ ಷಟರ್‌ ಸಹ ಬಂ‌‌ದ್‌ ಮಾಡುತ್ತಿದ್ದರು. ಆದರೆ, ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಷಟರ್‌ಗೆ ಕಿಂಡಿ ಕೊರೆದಿದ್ದರು. ಅಲ್ಲಿಯೇ ಕೆಲಸಗಾರನೊಬ್ಬ ಕುಳಿತು ಮದ್ಯ ಮಾರುತ್ತಿದ್ದ. ದೂರದಿಂದ ನೋಡಿದರೆ, ಷಟರ್‌ ಮುಚ್ಚಿದಂತೆ ಕಾಣುತ್ತಿತ್ತು’ ಎಂದರು.

ಹೊರರಾಜ್ಯದಲ್ಲಿ ಇನ್‌ಸ್ಪೆಕ್ಟರ್‌: ಅವಘಡ ಸಂಭವಿಸುವುದಕ್ಕೂ ಮುನ್ನ ಇನ್‌ಸ್ಪೆಕ್ಟರ್‌ ಪ್ರಕಾಶ್‌, ಪ್ರಕರಣವೊಂದರ ತನಿಖೆಗಾಗಿ ಮಹಾರಾಷ್ಟ್ರಕ್ಕೆ ಹೋಗಿದ್ದಾರೆ. ಅಮಾನತು ಬಗ್ಗೆ ಪ್ರತಿಕ್ರಿಯೆ ಪಡೆಯಲು ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಹಾಸಿಗೆಯಲ್ಲಿ ಮಾಲೀಕ: ಬಾರ್‌ ಮಾಲೀಕ ದಯಾಶಂಕರ್, ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ಸದ್ಯ ಹಾಸಿಗೆಯಲ್ಲಿರುವ ಅವರ ಹೇಳಿಕೆ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೆ, ದಯಾಶಂಕರ್ ಮಾತನಾಡುವ ಸ್ಥಿತಿಯಲ್ಲಿಲ್ಲ. ಕೆಲದಿನ ಬಿಟ್ಟು ಹೇಳಿಕೆ ಪಡೆಯಲು ಪೊಲೀಸರು ತೀರ್ಮಾನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry