ಅಭಿವೃದ್ಧಿಯ ನಿರೀಕ್ಷೆಯಲ್ಲಿ ವಸ್ತುಸಂಗ್ರಹಾಲಯ

7
ವಸ್ತು ಸಂಗ್ರಹಾಲಯದ ಅಂದ ಕೆಡಿಸಿದ ಕಲ್ಲು ರಾಶಿ

ಅಭಿವೃದ್ಧಿಯ ನಿರೀಕ್ಷೆಯಲ್ಲಿ ವಸ್ತುಸಂಗ್ರಹಾಲಯ

Published:
Updated:
ಅಭಿವೃದ್ಧಿಯ ನಿರೀಕ್ಷೆಯಲ್ಲಿ ವಸ್ತುಸಂಗ್ರಹಾಲಯ

ಯಳಂದೂರು: ಅದು ಶತಮಾನ ಪೂರೈಸಿದ ಅಪೂರ್ವ ಕಟ್ಟಡ. ಅದರ ಕಂಬ, ಗೋಡೆ, ಸೂರು... ಹೀಗೆ ಎಲ್ಲದರಲ್ಲೂ ಐತಿಹ್ಯದ ಸ್ಪರ್ಶ ಇದೆ.

ಮೈಸೂರು ಒಡೆಯರ, ದಿವಾನರ ಕಾಲದ ಚರಿತ್ರೆಯನ್ನು ಸಾರಿ ಹೇಳುವ ಈ ಕಟ್ಟಡ ನಿರ್ವಹಣೆಯ ಕೊರತೆಯಿಂದ ಅಂದಗೆಡುತ್ತಿದೆ.

ಈ ಕಟ್ಟಡ ಬೇರಾವುದೂ ಅಲ್ಲ; ಯಳಂದೂರು ಪಟ್ಟಣದಲ್ಲಿರುವ, ಜಿಲ್ಲೆಯ ಮೊದಲ ವಸ್ತುಸಂಗ್ರಹಾಲಯ ಎಂಬ ಪ್ರಸಿದ್ಧಿಯನ್ನು ಗಳಿಸಿದ ಪೂರ್ಣಯ್ಯ ಬಂಗಲೆ. ಶತಮಾನ ಪೂರೈಸಿ ರುವ ಕಟ್ಟಡ ನಿರ್ವಹಣೆ ಕೊರತೆಯಿಂದ ಆಕರ್ಷಣೆ ಕಳೆದುಕೊಂಡಿತ್ತು. ಬಳಿಕ ಕಾಯಕಲ್ಪವನ್ನೂ ಪಡೆದುಕೊಂಡಿತ್ತು. ಹಲವು ಬಗೆಯಲ್ಲಿ ಸಿಂಗರಿಸಿಕೊಂಡ ಈ ವಸ್ತುಸಂಗ್ರಹಾಲಯ ಮತ್ತೆ ನಿರ್ವಹಣೆ ಕೊರತೆಯಿಂದ ಕಳೆಗುಂದಿದೆ.

ಕಟ್ಟಡದ ಪೂರ್ವ ಭಾಗದಲ್ಲಿ ಇರುವ ಮೆಟ್ಟಿಲ ಬಳಿ ಕಲ್ಲು ಮತ್ತು ಮಣ್ಣು ಸುರಿಯಲಾಗಿದೆ. ಪ್ರವಾಸಿಗರು ಮತ್ತು ಸಾರ್ವಜನಿಕರು ವಸ್ತುಸಂಗ್ರಹಾಲಯಕ್ಕೆ ತೆರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಮ್ಯೂಸಿಯಂ ಸಮೀಪ ಜನಜಂಗುಳಿ ಹೆಚ್ಚಾಗಿರುತ್ತದೆ.

ಬಹುತೇಕ ಮಂದಿ ಕಟ್ಟಡದ ಬಳಿ ಕುಳಿತಿರುತ್ತಾರೆ. ಇದರಿಂದಾಗಿ ಐತಿಹಾಸಿಕ ಮಹತ್ವದ ಸ್ಥಳವನ್ನು ಪ್ರವಾಸಿಗರು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಪಟ್ಟಣದ ಸೌರಭ್‌ ಮತ್ತು ನಿಶಾಂತ್.

ಬಂಗಲೆಯ ಮುಂಭಾಗದ ಕಂಬದ ತಳಭಾಗದ ಗಾರೆ ಉದುರುತ್ತಿದೆ. ಕಟ್ಟಡದ ಅಂದ ಹೆಚ್ಚಿಸುವ ಕಾಮಗಾರಿ ಕೈಗೊಂಡ ನಂತರ ನಿರ್ವಹಣೆ ಮಾಡಿಲ್ಲ. ಸುತ್ತುಗೋಡೆ ಮತ್ತು ಉದ್ಯಾನ ನಿರ್ಮಾಣ ಸಾಧ್ಯವಾಗಿಲ್ಲ. ರಸ್ತೆ ವಿಸ್ತರಣೆ ಬಳಿಕ ಸುರಿದ ಕಲ್ಲಿನ ರಾಶಿ ಕಟ್ಟಡದ ಅಂದಕ್ಕೆ ತೊಡಕಾಗಿದೆ ಎನ್ನುತ್ತಾರೆ ದೇವ್ ಮತ್ತು ಸ್ವಾಮಿ.

‘ಮ್ಯೂಸಿಯಂ ಸುತ್ತಲ ಜಾಗ ನ್ಯಾಯಾಲಯದಲ್ಲಿದೆ. ಕಟ್ಟಡದ ಎಡಗಡೆಯ ಸ್ಥಳಕ್ಕೆ ಸಂಬಂಧಿಸಿದಂತೆ ಸ್ಥಳೀಯರು ದೂರು ದಾಖಲಿಸಿದ್ದಾರೆ. ವಿಚಾರಣೆ ಮುಗಿಯುವ ಹಂತದಲ್ಲಿದೆ. ಈಗಾಗಲೇ ಗಾರೆ ಕಿತ್ತಿರುವ ಕಂಬಗಳ ಪರಿಶೀಲನೆಗಾಗಿ ಸಂಬಂಧಿಸಿದ ಎಂಜಿನಿಯರ್‌ಗೆ ವರದಿ ನೀಡಲಾಗಿದೆ. ನಂತರ ಉದ್ಯಾನ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ಒತ್ತು ನೀಡಲಾಗುವುದು’ ಎಂದು ಮೈಸೂರು ವಸ್ತು ಸಂಗ್ರಹಾಲಯದ ಅಧಿಕಾರಿ ಎಂ. ಸುನಿಲ್‌ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪರಿಶೀಲನೆ: ಈಗಾಗಲೇ ವಿಶೇಷ ಅನುದಾನದಡಿ ಪ್ರಾಚ್ಯವಸ್ತು ಇಲಾಖೆಯ ಸಹಕಾರದೊಂದಿಗೆ ಹೊಸದಾಗಿ ಕಟ್ಟಡ ಮರು ವಿನ್ಯಾಸಗೊಳಿಸಲಾಗಿದೆ. ಇದರ ನಿರ್ವಹಣೆಗಾಗಿ ತಜ್ಞರ ವಿಭಾಗ ಭೇಟಿ ನೀಡಿ ಪರಿಶೀಲಿಸುತ್ತಿದೆ. ಗಾರೆ ಕಿತ್ತು ಬಂದರೆ, ಶೀಘ್ರ ದುರಸ್ತಿ ಮಾಡಲಾಗುವುದು ಎಂದು ಸಂಸದ ಆರ್. ಧ್ರುವನಾರಾಯಣ ತಿಳಿಸಿದ್ದಾರೆ.

ಪ್ರಾಚೀನ ವಸ್ತುಗಳನ್ನು ನೀಡಿ: ದಿವಾನ್‌ ಪೂರ್ಣಯ್ಯ ಮತ್ತು ದಿವಾನ್ ಕೃಷ್ಣಮೂರ್ತಿ ಕಾಲದಲ್ಲಿ ಕೈಗೊಂಡ ಅಭಿವೃದ್ಧಿಯ, ಕೆರೆ ಕಟ್ಟೆಗಳ ದಾಖಲೆ, ದಫ್ತರ್, ತಾಮ್ರ ಶಾಸನಗಳು, ಚಿತ್ರಕಲೆ, ಮೋಡಿ ಅಕ್ಷರ ಲಿಪಿ ಮೊದಲಾದ ಅಮೂಲ್ಯ ವಸ್ತುಗಳು ಇದ್ದರೆ ಸಾರ್ವಜನಿಕರು ಮ್ಯೂಸಿಯಂಗೆ ನೀಡಬೇಕು.

ಮಾಹಿತಿಗೆ ದೂ: 0821–2424673, ಮೊ: 7829404796 ಸಂಪರ್ಕಿಸಿ ಎಂದು ಸುನಿಲ್‌ಕುಮಾರ್ ಮನವಿ ಮಾಡಿದ್ದಾರೆ.

*–ದಿವಾನ್ ಕೃಷ್ಣಮೂರ್ತಿ ಕಾಲದಲ್ಲಿ ನಿರ್ಮಿಸಲಾದ ಕಟ್ಟಡದ ಕಂಬಗಳಲ್ಲಿ ಜೀರ್ಣೋದ್ಧಾರದ ನಂತರ ಗಾರೆ ಕಿತ್ತು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry