ಮುಬಶ್ಶೀರ್ ಕೊಲೆಯ ಯತ್ನ: ಇಬ್ಬರ ಬಂಧನ

7

ಮುಬಶ್ಶೀರ್ ಕೊಲೆಯ ಯತ್ನ: ಇಬ್ಬರ ಬಂಧನ

Published:
Updated:

ಮಂಗಳೂರು: ಕಾಟಿಪಳ್ಳದ ದೀಪಕ್‌ ರಾವ್ ಕೊಲೆಯಾದ ಜನವರಿ 3 ರಂದು ರಾತ್ರಿ ಸುರತ್ಕಲ್‌ ಬಳಿ ಮುಬಶ್ಶೀರ್ ಎಂಬುವವರ ಮೇಲೆ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪಣಂಬೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳ ಗುರುವಾರ ಬಂಧಿಸಿದೆ.

ಸುರತ್ಕಲ್‌ ಇಡ್ಯಾ ಗ್ರಾಮದ ಅಗರಮೇಲು ನಿವಾಸಿ ಯಶೋದರ ಪೂಜಾರಿ ಹಾಗೂ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಮುಟ್ಟಲಗೇರಿ ಗ್ರಾಮದ, ಸದ್ಯಕ್ಕೆ ಬೈಕಂಪಾಡಿಯ ಕೂರಿಕಟ್ಟಾದಲ್ಲಿ ವಾಸಿಸುತ್ತಿರುವ ಪ್ರೀತಂ ಅಲಿಯಾಸ್‌ ಗೌಡಪ್ಪ ಎಂಬುವವರು ಬಂಧಿತ ಆರೋಪಿಗಳು.

ದೀಪಕ್‌ ಕೊಲೆಗೆ ಪ್ರತೀಕಾರವಾಗಿ ನಡೆದಿದ್ದ ಈ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ, ಪಣಂಬೂರು ಠಾಣೆ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.

‘ಸುರತ್ಕಲ್‌ನಲ್ಲಿ ಗುರುವಾರ ಮಧ್ಯಾಹ್ನ ಆರೋಪಿಗಳನ್ನು ವಶಕ್ಕೆ ಪಡೆದ ರೌಡಿ ನಿಗ್ರಹದಳ, ವಿಚಾರಣೆಗಾಗಿ ಸುರತ್ಕಲ್‌ ಠಾಣೆಗೆ ಹಸ್ತಾಂತರಿಸಿದೆ. ಆರೋಪಿಗಳ ವಿಚಾರಣೆ ಮಾಡಲಾಗುತ್ತಿದ್ದು, ಹೆಚ್ಚಿನ ಮಾಹಿತಿ ನಂತರವಷ್ಟೇ ಲಭ್ಯವಾಗಲಿದೆ’ ಎಂದು ಡಿಸಿಪಿ ಹನುಮಂತ್ರಾಯ ತಿಳಿಸಿದ್ದಾರೆ.

ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದರು ಪ್ರದೇಶದ ಮನೆಗೆ ಹಿಂದಿರುಗುತ್ತಿದ್ದ ಮುಬಶ್ಶಿರ್‌ ಮೇಲೆ ದಾಳಿ ನಡೆಸಲಾಗಿತ್ತು. ಹೆಲ್ಮೆಟ್‌ ಧರಿಸಿ, ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು ಹಲ್ಲೆ ನಡೆಸಿದ್ದರು. ತಲೆಗೆ ಪೆಟ್ಟಾಗಿದ್ದ ಮುಬಶ್ಶೀರ್‌ ಸುರತ್ಕಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry