30ರೊಳಗೆ ಇನ್ನೂ 4 ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತ

7
ಹಿಂದುಳಿದ ಜಿಲ್ಲೆಗಳ ಅಧಿಕಾರಿಗಳಿಗೆ ಎಚ್ಚರಿಕೆ: ಸಚಿವ ಎಚ್‌.ಕೆ. ಪಾಟೀಲ

30ರೊಳಗೆ ಇನ್ನೂ 4 ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತ

Published:
Updated:

ಬೆಂಗಳೂರು: ರಾಜ್ಯದ ಇನ್ನೂ ನಾಲ್ಕು ಜಿಲ್ಲೆಗಳು ಇದೇ 30ರೊಳಗೆ ಬಯಲು ಬಹಿರ್ದೆಸೆ ಮುಕ್ತ ಆಗಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ ಗುರುವಾರ ತಿಳಿಸಿದರು.

‘ಈವರೆಗೆ 16 ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಈ ತಿಂಗಳ ಅಂತ್ಯಕ್ಕೆ ಚಿಕ್ಕಬಳ್ಳಾಪುರ, ಮೈಸೂರು, ಕೊಪ್ಪಳ ಮತ್ತು ಚಾಮರಾಜನಗರ ಜಿಲ್ಲೆಗಳೂ ಬಹಿರ್ದೆಸೆ ಮುಕ್ತ ಆಗಲಿವೆ’ ಎಂದರು.

ಶೌಚಾಲಯ ನಿರ್ಮಾಣದಲ್ಲಿ ವಿಜಯಪುರ, ರಾಯಚೂರು, ಬೀದರ್‌, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಗಳು ಹಿಂದುಳಿದಿವೆ. ಈ ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ತೀವ್ರಗೊಳಿಸುವಂತೆ ಜಿಲ್ಲಾ ಪಂಚಾಯ್ತಿ ಸಿಇಒ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಮೊದಲು ಶೌಚಾಲಯಗಳ ನಿರ್ಮಾಣ ಪ್ರಗತಿ ಶೇ 32ರಷ್ಟು ಮಾತ್ರ ಆಗಿತ್ತು. ನಾಲ್ಕೂವರೆ ವರ್ಷಗಳಲ್ಲಿ ಶೇ 54ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟು ಸಾಧನೆ ಶೇ 86.18ರಷ್ಟು ಆಗಿದೆ. ಈವರೆಗೆ 37 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಇನ್ನೂ 18 ಲಕ್ಷ ನಿರ್ಮಿಸಬೇಕಿದೆ ಎಂದೂ ಮಾಹಿತಿ ನೀಡಿದರು.

‘ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ ಶೌಚಾಲಯ ನಿರ್ಮಾಣದಲ್ಲಿ ಒಡಿಶಾ ಶೇ 45.22, ಉತ್ತರ ಪ್ರದೇಶ ಶೇ 56.4ರಷ್ಟು ಗುರಿ ಸಾಧಿಸಿವೆ’ ಎಂದರು.

ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ಮೂರು ದಿನಗಳಲ್ಲಿ 75 ಸಾವಿರ ವೈಯಕ್ತಿಕ (ಗೃಹ) ಶೌಚಾಲಯಗಳನ್ನು ನಿರ್ಮಿಸುವ ಮೂಲಕ 1,107 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಲಾಗಿದೆ. ಶೌಚಾಲಯ ನಿರ್ಮಾಣ ಸಾಧನೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ದರ್ಪಣ ಪ್ರಶಸ್ತಿ ಸಿಕ್ಕಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry