‘ಐಎಸ್‌ಐ ಮುದ್ರೆಯ ಅರ್ಧ ಹೆಲ್ಮೆಟ್‌ಗೆ ದಂಡವಿಲ್ಲ’

7
‘ಆಪರೇಷನ್ ಸೇಫ್‌ ರೈಡ್‌’ ಕಾರ್ಯಾಚರಣೆ ಫೆ. 1ರಿಂದ * ಮುದ್ರೆ ಇಲ್ಲದ ಹೆಲ್ಮೆಟ್‌ ಧರಿಸುವಂತಿಲ್ಲ

‘ಐಎಸ್‌ಐ ಮುದ್ರೆಯ ಅರ್ಧ ಹೆಲ್ಮೆಟ್‌ಗೆ ದಂಡವಿಲ್ಲ’

Published:
Updated:
‘ಐಎಸ್‌ಐ ಮುದ್ರೆಯ ಅರ್ಧ ಹೆಲ್ಮೆಟ್‌ಗೆ ದಂಡವಿಲ್ಲ’

ಬೆಂಗಳೂರು: ‘ಐಎಸ್‌ಐ ಮತ್ತು ಬಿಐಎಸ್‌ ಮುದ್ರೆ ಹೊಂದಿರದ ಹೆಲ್ಮೆಟ್‌ ಧರಿಸಿದವರಿಗೆ ಮಾತ್ರ ದಂಡ ವಿಧಿಸಲಿದ್ದೇವೆ. ಇಲ್ಲಿ ಅರ್ಧ ಹಾಗೂ ಪೂರ್ತಿ ಹೆಲ್ಮೆಟ್‌ ಎಂಬ ಪ್ರಶ್ನೆ ಬರುವುದಿಲ್ಲ. ಮುದ್ರೆ ಹೊಂದಿರದ ಪೂರ್ತಿ ಹೆಲ್ಮೆಟ್‌ ಧರಿಸಿದರೂ ದಂಡ ಹಾಕಬಹುದು’

ನಗರದಲ್ಲಿ ಫೆ. 1ರಿಂದ ಆರಂಭಿಸಲಾಗುತ್ತಿರುವ ‘ಆಪರೇಷನ್ ಸೇಫ್‌ ರೈಡ್‌’ ಕಾರ್ಯಾಚರಣೆಯ ಕುರಿತು ಜನರಲ್ಲಿರುವ ಗೊಂದಲಗಳಿಗೆ ಸಂಚಾರ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ನೀಡಿರುವ ಸ್ಪಷ್ಟನೆ ಇದು.

ಐಎಸ್‌ಐ ಮತ್ತು ಬಿಐಎಸ್‌ ಮುದ್ರೆ ಹೊಂದಿರದ ಹಾಗೂ ಅರ್ಧ ಹೆಲ್ಮೆಟ್ ಧರಿಸುವ ಸವಾರರಿಗೆ ದಂಡ ವಿಧಿಸಲಿದ್ದೇವೆ’ ಎಂದು ಈ ಹಿಂದೆ ಸಂಚಾರ ಪೊಲೀಸರು ಹೇಳಿದ್ದರು.

ಆದರೆ, ಸಾರಿಗೆ ಇಲಾಖೆಯ ಆಯುಕ್ತ ಬಿ. ದಯಾನಂದ್‌, ‘ಅರ್ಧ ಹೆಲ್ಮೆಟ್‌ ನಿಷೇಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ತಿಳಿಸಿದ್ದರು. ಸರ್ಕಾರದ ಎರಡು ಇಲಾಖೆಗಳ ಅಧಿಕಾರಿಗಳು ನೀಡಿದ್ದ ಈ ತದ್ವಿರುದ್ಧ ಹೇಳಿಕೆಗಳು ಜನರಲ್ಲಿ ಗೊಂದಲ ಮೂಡಿಸಿದ್ದವು.

ಈ ಗೊಂದಲದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದಯಾನಂದ್, ‘ಐಎಸ್‌ಐ ಮತ್ತು ಬಿಐಎಸ್‌ ಮುದ್ರೆ ಹೊಂದಿರದ ಹೆಲ್ಮೆಟ್‌ಗೆ ಮಾತ್ರ ಕೇಂದ್ರ ಮೋಟರ್ ವಾಹನಗಳ ಕಾಯ್ದೆಯಡಿ ದಂಡ ವಿಧಿಸಲು ಅವಕಾಶವಿದೆ. ಕಾಯ್ದೆಯಲ್ಲಿ ಅರ್ಧ ಅಥವಾ ಪೂರ್ತಿ ಹೆಲ್ಮೆಟ್‌ ಎಂಬ  ಉಲ್ಲೇಖವಿಲ್ಲ’ ಎಂದರು.

‘ಕೆಲವು ಕಂಪನಿಗಳು ತಯಾರಿಸುವ ಅರ್ಧ ಹೆಲ್ಮೆಟ್‌ಗಳೂ ಐಎಸ್‌ಐ ಮತ್ತು ಬಿಐಎಸ್‌ ಮುದ್ರೆ ಹೊಂದಿವೆ. ಕೆಲವು ಕಂಪನಿಗಳ ಪೂರ್ತಿ ಹೆಲ್ಮೆಟ್‌ಗಳು ಈ ಮುದ್ರೆ ಹೊಂದಿಲ್ಲ. ಹೀಗಾಗಿ ಅರ್ಧ ಹೆಲ್ಮೆಟ್‌ ಧರಿಸಿದರೆ ದಂಡ ವಿಧಿಸಲಾಗುತ್ತದೆ ಎಂಬುದು ತಪ್ಪು ಮಾಹಿತಿ’ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

‘ಕೇಂದ್ರ ಮೋಟರ್ ವಾಹನಗಳ ಕಾಯ್ದೆ ಜಾರಿಗೆ ಬಂದಾಗಿನಿಂದಲೇ ಈ ನಿಯಮವಿದೆ. ಹೀಗಿರುವಾಗ ನಗರದ ಸಂಚಾರ ಪೊಲೀಸರು ಫೆ. 1ರಿಂದ ಹೊಸತಾಗಿ ಈ ನಿಯಮವನ್ನು ಹೇಗೆ ತಾನೇ ಜಾರಿಗೆ ತರಲು ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

‘ಕಾರ್ಯಾಚರಣೆ ಬಗ್ಗೆ ಕೆಲ ಮಾಧ್ಯಮಗಳು ತಪ್ಪು ಮಾಹಿತಿ ನೀಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ತಪ್ಪು ಸಂದೇಶ ರವಾನೆ ಆಗುತ್ತಿದೆ’ ಎಂದರು.

ಅರ್ಧ ಹೆಲ್ಮೆಟ್‌ ಎಂದು ಹೇಳಿಲ್ಲ: ‘ಮೈಸೂರು ಪೊಲೀಸರು ಇತ್ತೀಚೆಗೆ ಆಪರೇಷನ್ ಸೇಫ್‌ ರೈಡ್‌ ಕಾರ್ಯಾಚರಣೆ ನಡೆಸಿದ್ದರು. ಆ ಬಳಿಕ ಗೃಹ ಸಚಿವರು, ಅಂಥ ಕಾರ್ಯಾಚರಣೆಯನ್ನು ನಗರದಲ್ಲೂ ಕೈಗೊಳ್ಳಲು ಸೂಚನೆ ನೀಡಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್.ಹಿತೇಂದ್ರ ತಿಳಿಸಿದರು.

‘ನಾವು ಎಲ್ಲಿಯೂ ಅರ್ಧ ಹೆಲ್ಮೆಟ್‌ಗೆ ದಂಡ ಹಾಕುತ್ತೇವೆ ಎಂದು ಹೇಳಿಲ್ಲ. ಕಾಯ್ದೆ ಅನ್ವಯ ಐಎಸ್‌ಐ ಮತ್ತು ಬಿಐಎಸ್‌ ಮುದ್ರೆ ಹೊಂದಿರದ ಹೆಲ್ಮೆಟ್‌ಗೆ ಮಾತ್ರ ದಂಡ ವಿಧಿಸುತ್ತೇವೆ ಎಂದೇ ಹೇಳಿದ್ದೇವೆ. ಆದರೆ, ಕೆಲವರು ಈ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದರು.

‘ಸವಾರರು ಯಾವುದೇ ಕಂಪನಿಯ ಹೆಲ್ಮೆಟ್‌ ಬೇಕಾದರೂ ಧರಿಸಬಹುದು. ಆದರೆ, ಅದರಲ್ಲಿ ಅಧಿಕೃತ  ಮುದ್ರೆ ಇರಲೇ ಬೇಕು. ಅದಿಲ್ಲದಿದ್ದರೆ ಮಾತ್ರ ದಂಡ ವಿಧಿಸುತ್ತೇವೆ. ಮುದ್ರೆ ಹೊಂದಿರುವ ಹೆಲ್ಮೆಟ್‌ಗೆ ಪೊಲೀಸರು ದಂಡ ವಿಧಿಸಿದರೆ ಮೇಲಧಿಕಾರಿಗೆ ದೂರು ನೀಡಬಹುದು’ ಎಂದು ಹೇಳಿದರು.

ಜನರ ಅನುಕೂಲಕ್ಕಾಗಿ ದಿನ ನಿಗದಿ: ‘ಏಕಾಏಕಿ ಕಾರ್ಯಾಚರಣೆ ಆರಂಭಿಸಿದರೆ, ಜನರಿಗೆ ತೊಂದರೆ ಆಗುತ್ತದೆ. ಅವರ ಅನುಕೂಲಕ್ಕಾಗಿ ಫೆ. 1ರಿಂದ ಕಾರ್ಯಾಚರಣೆ ನಡೆಸುವುದಾಗಿ ಹೇಳಿದ್ದೇವೆ’ ಎಂದು ಹಿತೇಂದ್ರ ತಿಳಿಸಿದರು.

‘ನಮಗೆ ಜನರ ಸುರಕ್ಷತೆ ಮುಖ್ಯ, ಹೊರತು ದಂಡ ವಸೂಲಿ ಅಲ್ಲ. ನಗರದಲ್ಲಿ ದ್ವಿಚಕ್ರ ವಾಹನಗಳ ಸವಾರರ ಸಂಖ್ಯೆ ಹೆಚ್ಚಿದ್ದು, ಹೆಲ್ಮೆಟ್‌ ಖರೀದಿಸಲು ಅವರೆಲ್ಲರಿಗೂ ಸಮಯ ಬೇಕು. ಹೀಗಾಗಿ ಕಾಲಾವಕಾಶ ನೀಡಿದ್ದೇವೆ. ಕೆಲ ಪೊಲೀಸರೂ ಮುದ್ರೆ ಇಲ್ಲದ ಹೆಲ್ಮೆಟ್‌ ಧರಿಸುತ್ತಿದ್ದಾರೆ. ಅವರಿಗೂ ಎಚ್ಚರಿಕೆ ನೀಡಿದ್ದೇನೆ. ಪೊಲೀಸರ ಹೆಲ್ಮೆಟ್‌ ತಪಾಸಣೆ ಮಾಡುವ ಮೂಲಕವೇ ಈ ಕಾರ್ಯಾಚರಣೆ ಆರಂಭಿಸಲಿದ್ದೇವೆ’ ಎಂದರು.

***

ದ್ವಿಚಕ್ರ ವಾಹನದ ಜತೆ ಹೆಲ್ಮೆಟ್‌ ನೀಡುವುದು ಕಡ್ಡಾಯ: ‘ಕೇಂದ್ರ ಮೋಟರ್‌ ವಾಹನಗಳ ಕಾಯ್ದೆಯ ಸೆಕ್ಷನ್‌ 139 (ಎಫ್‌) ಪ್ರಕಾರ, ಹೊಸ ದ್ವಿಚಕ್ರ ವಾಹನಗಳ ಮಾರಾಟದ ವೇಳೆ ಗ್ರಾಹಕರಿಗೆ ಕಡ್ಡಾಯವಾಗಿ ಐಎಸ್‌ಐ ಮತ್ತು ಬಿಐಎಸ್‌ ಮುದ್ರೆ ಹೊಂದಿರುವ ಹೆಲ್ಮೆಟ್‌ ನೀಡಬೇಕು. ಇದು ವಾಹನ ತಯಾರಿಸುವ ಕಂಪನಿಯ ಜವಾಬ್ದಾರಿ’ ಎಂದು ಹಿತೇಂದ್ರ ಟ್ವೀಟ್‌ ಮಾಡಿದ್ದಾರೆ.

***

ನಕಲಿ ಮುದ್ರೆ ಹೆಲ್ಮೆಟ್‌ ಮಾರಾಟ

ನಗರದ ಮಾರುಕಟ್ಟೆಯಲ್ಲಿ ನಾಲ್ಕು ದಿನಗಳಿಂದ ಹೆಲ್ಮೆಟ್‌ ಮಾರಾಟ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ಈ ನಡುವೆ ನಕಲಿ ಮುದ್ರೆ ಹೊಂದಿರುವ ಹೆಲ್ಮೆಟ್‌ಗಳು ಮಾರಾಟವಾಗುತ್ತಿದೆ ಎಂದು ಕೆಲ ವ್ಯಾಪಾರಿಗಳು ದೂರಿದ್ದಾರೆ.

ನಗರ ಹಾಗೂ ಹೊರ ಜಿಲ್ಲೆಗಳಿಗೆ ಹೆಲ್ಮೆಟ್‌ ಪೂರೈಕೆ ಮಾಡುತ್ತೇನೆ.  ಹೆಲ್ಮೆಟ್‌ಗಳಿಗೆ ಈಗ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಹೆಲ್ಮೆಟ್‌ ಸಗಟು ವ್ಯಾಪಾರಿ ಉಮೇಶ್‌ ಬಹೇಟಿ ತಿಳಿಸಿದರು.

‘ನಕಲಿ ಐಎಸ್‌ಐ ಮತ್ತು ಬಿಐಎಸ್‌ ಮುದ್ರೆ ಇರುವ ಹೆಲ್ಮೆಟ್‌ಗಳನ್ನು ಮಾರುಕಟ್ಟೆಯಲ್ಲಿ ಕೆಲವರು ರಾಜಾರೋಷವಾಗಿ ಮಾರುತ್ತಿದ್ದಾರೆ. ಆ ಬಗ್ಗೆ ಕ್ರಮ ಕೈಗೊಳ್ಳುವವರು ಯಾರು. ಪೊಲೀಸರು ಕೇವಲ, ಹೆಲ್ಮೆಟ್‌ ತಪಾಸಣೆ ನಡೆಸುವ ಬದಲು ನಕಲಿ ಹೆಲ್ಮೆಟ್‌ ಮಾರಾಟಗಾರರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry