ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯರ್ಥವಾಗುತಿದೆ ಸಾರ್ವಜನಿಕ ಆಸ್ತಿ

Last Updated 12 ಜನವರಿ 2018, 6:58 IST
ಅಕ್ಷರ ಗಾತ್ರ

ವೈ.ಎನ್.ಹೊಸಕೋಟೆ: ಗ್ರಾಮದಲ್ಲಿರುವ ಹಲವು ಸಾರ್ವಜನಿಕ ಕಟ್ಟಡಗಳು ಉಪಯೋಗಿಸಲ್ಪಡದೆ ವ್ಯರ್ಥವಾಗುತ್ತಿವೆ. ಆ ಮೂಲಕ ಲಕ್ಷಾಂತರ ರೂಪಾಯಿ ಸರ್ಕಾರದ ಹಣ ಮತ್ತು ಶ್ರಮ ವ್ಯರ್ಥವಾಗುತ್ತಿದೆ. ಗ್ರಾಮದಲ್ಲಿರುವ ಹಳೆಯ ಸರ್ಕಾರಿ ಆಸ್ಪತ್ರೆ, ಬೆಸ್ಕಾಂ ವಸತಿಗೃಹ, ನೂತನ ಪೊಲೀಸ್ ವಸತಿಗೃಹ, ಗಡಿನಾಡು ಸಾಂಸ್ಕೃತಿಕ ಭವನ ಮತ್ತು ನವೀಕರಣಗೊಂಡಿರುವ ಕಂದಾಯ ಇಲಾಖೆ ಆಡಳಿತ ಕಟ್ಟಡಗಳು ಜನರ ಉಪಯೋಗಕ್ಕೆ ಸಿಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪಂಚಾಯಿತಿಗೆ ಹೊಂದಿಕೊಂಡಿರುವ ಹಳೆಯ ಸರ್ಕಾರಿ ಆಸ್ಪತ್ರೆಯ ಕಟ್ಟಡವನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿತ್ತು. 2004 ರಲ್ಲಿ ಲೋಕಾರ್ಪಣೆಗೊಂಡು ಆಧುನಿಕ ಯಂತ್ರೋಪಕರಣ ನಿರೀಕ್ಷೆಯಲ್ಲೇ ಸರ್ಕಾರಿ ಆಸ್ಪತ್ರೆ ಕಾರ್ಯೋನ್ಮುಖವಾಗಿತ್ತು. ಆದರೆ 2016 ಗ್ರಾಮದ ಹೊರವಲಯದ ಮುಖ್ಯ ರಸ್ತೆಯಲ್ಲಿ ಮತ್ತೊಂದು ವ್ಯವಸ್ಥಿತವಾದ ವಿಶಾಲ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಸ್ಥಾಪನೆಗೊಂಡಿತು. ಹಾಗಾಗಿ 2016ನೇ ಏಪ್ರಿಲ್‌ನಲ್ಲಿ ಹಳೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯ ಚಟುವಟಿಕೆಗಳು ಸ್ಥಳಾಂತರಗೊಂಡಿವೆ. ಅಂದಿನಿಂದ ಗ್ರಾಮದಲ್ಲಿನ ಈ ಸಾರ್ವಜನಿಕ ಕಟ್ಟಡ ವ್ಯರ್ಥವಾಗುತ್ತಿದೆ ಎಂದು ಗ್ರಾಮದ ಭಗತ್ ಫೌಂಡೇಷನ್‌ನ ಅಧ್ಯಕ್ಷ ಎಸ್.ನೂರುದ್ದೀನ್ ಆರೋಪಿಸಿದ್ದಾರೆ.

ಗ್ರಾಮದ ಪಶ್ಚಿಮ ಹೊರವಲಯದಲ್ಲಿ ನಿರ್ಮಾಣವಾಗಿರುವ ನೂತನ ಪೊಲೀಸ್ ವಸತಿಗೃಹದಲ್ಲಿ ಕೆಲವು ದಿನಗಳು ಸಿಬ್ಬಂದಿ ವಾಸವಾಗಿದ್ದರು. ಆದರೆ ನೀರಿನ ಸೌಲಭ್ಯದ ನೆಪಮಾಡಿ ಅಲ್ಲಿಂದ ಪ್ರಸ್ತುತ ಖಾಲಿಯಾಗಿದ್ದಾರೆ. ಇದರಿಂದ ವ್ಯವಸ್ಥಿತ ಕಟ್ಟಡ ಅನಾಥವಾಗಿದ್ದು, ಹಲವು ಅನೈತಿಕ ಚಟುವಟಿಕೆಗಳಿಗೆ ತಾಣವಾಗಿದೆ ಎಂದು ಕೆ.ರಾಮಚಂದ್ರ ಆರೋಪಿಸಿದರು.

ಬೆಸ್ಕಾಂ ಕಚೇರಿಯ ಆವರಣದಲ್ಲಿ ದಶಕಗಳ ಹಿಂದೆಯೇ ಸಿಬ್ಬಂದಿಗಾಗಿ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಅಧಿಕಾರಿಗಳೂ ಸೇರಿದಂತೆ ಸಿಬ್ಬಂದಿ ಇತ್ತೀಚಿನ ದಿನಗಳವರೆಗೆ ವಾಸವಾಗಿದ್ದರು. ಹಳೇ ಕಟ್ಟಡ ಮತ್ತು ಭದ್ರತೆ ಸಮಸ್ಯೆಯಿಂದ ಇಂದು ಎಲ್ಲ ವಸತಿಗೃಹಗಳು ಖಾಲಿಯಾಗಿ ಹಾಳು ಬಿದ್ದಿರುವ ಸ್ಥಿತಿಯಲ್ಲಿವೆ. ಕೆಲವು ವಸತಿಗೃಹಗಳ ಬಾಗಿಲುಗಳೇ ಇಲ್ಲ. ಒಳಗೆ ಕಸ–ಕಡ್ಡಿ ತುಂಬಿಕೊಂಡು ಹುಳು–ಹುಪ್ಪಡೆ ಸೇರಿರುವ ಸಾಧ್ಯತೆ ಇದೆ.

ಮಹಾತ್ಮಗಾಂಧಿ ರಸ್ತೆಯಲ್ಲಿರುವ ಕಂದಾಯ ಇಲಾಖೆಯ ಹಳೆಯ ಕಟ್ಟಡ ನವೀಕರಣಗೊಂಡಿದೆ. ದುರಸ್ತಿ ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಕಳೆದಿವೆ. ಸಂಬಂಧಿಸಿದವರು ಸಾರ್ವಜನಿಕ ಉಪಯೋಗಕ್ಕೆ ಬಳಸಲು ಮೀನಾಮೇಷ ಎಣಿಸುತ್ತಿದ್ದಾರೆ. ಪರಿಣಾಮವಾಗಿ ಕಟ್ಟಡ ನವೀಕರಣಗೊಂಡರೂ ಉದ್ಘಾಟನೆ ಕಂಡಿಲ್ಲ.

ಗ್ರಾಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ನಿರ್ಮಾಣವಾಗಿರುವ ಗಡಿನಾಡು ಸಾಂಸ್ಕೃತಿಕ ಭವನ ಉಪಯೋಗಕ್ಕೆ ಸಿಗುತ್ತಿಲ್ಲ. ಸುತ್ತಲೂ ಮಲಿನ ವಾತಾವರಣವಿದೆ. ಸೂಕ್ತ ನಿರ್ವಹಣೆ ಕೊರತೆ ಇದೆ. ಹಾಗಾಗಿ ಸಾರ್ವಜನಿಕರ ಬಳಕೆಯಿಂದ ದೂರ ಉಳಿಸಿರುವ ಸ್ಥಿತಿಯಲ್ಲಿದೆ. ಒಟ್ಟಾರೆ ಗ್ರಾಮದಲ್ಲಿ ಲಕ್ಷಾಂತರ ರೂಪಯಿಗಳ ಸಾರ್ವಜನಿಕ ಆಸ್ತಿ ಹಾಳಾಗುವ ಮುನ್ನ ಸಂಬಂಧಿಸಿದವರು ಗಮನಹರಿಸಿ ಕಟ್ಟಡಗಳ ಬಳಕೆಗೆ ಕ್ರಮ ಕೈಗೊಳ್ಳಬೇಕು ಎಂದು ಬಿ.ಹೊಸಹಳ್ಳಿ ನಾಗರಾಜು ಆಗ್ರಹಿಸಿದ್ದರೆ.

-ನಾಗರಾಜಪ್ಪ, ವೈ.ಎನ್.ಹೊಸಕೋಟೆ

* * 

ವಸತಿಗೃಹಗಳು ಹಳೆಯವಾಗಿದ್ದು, ವಾಸಕ್ಕೆ ಯೋಗ್ಯವಾಗಿಲ್ಲ. ಈ ವಿಷಯ ಮೇಲಧಿಕಾರಿಗಳಿಗೆ ಗೊತ್ತಿದೆ. ಪ್ರಸ್ತುತ ಕಚೇರಿ ಕಟ್ಟಡವೊಂದು ಮಾತ್ರ ಉತ್ತಮ ಸ್ಥಿತಿಯಲ್ಲಿದೆ.
- ರಾಮಲಿಂಗಪ್ಪ, ಸಹಾಯಕ ಎಂಜಿನಿಯರ್‌, ಬೆಸ್ಕಾಂ, ವೈ.ಎನ್.ಹೊಸಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT