ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೊಳ್ಳಿಯಲ್ಲಿ ಮೇಳೈಸಿದ ಸಡಗರ

Last Updated 12 ಜನವರಿ 2018, 9:02 IST
ಅಕ್ಷರ ಗಾತ್ರ

ಬೈಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮನ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿರಾಯಣ್ಣನ ದೇಶಪ್ರೇಮ, ತ್ಯಾಗ ಮತ್ತು ಬಲಿದಾನ ಸ್ಮರಣೆಗಾಗಿ ರಾಜ್ಯ ಸರ್ಕಾರ ನಾಲ್ಕು ವರ್ಷಗಳಿಂದ ರಾಯಣ್ಣನ ಉತ್ಸವವನ್ನು ಆಚರಿಸುತ್ತಿದೆ.

ಈ ಬಾರಿಯೂ ಇದೇ 12, 13ರಂದು ತಾಲ್ಲೂಕಿನ ಸಂಗೊಳ್ಳಿ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಉತ್ಸವ ಅದ್ಧೂರಿಯಾಗಿ ನಡೆಯಲಿದೆ. ಗ್ರಾಮದಲ್ಲಿ ಹಬ್ಬದ ಸಡಗರ, ಸಂಭ್ರಮ ಮನೆ ಮಾಡಿದೆ. ರಾಯಣ್ಣನ ಶೌರ್ಯದ ಜಾಗೃತಿ ಕಾರ್ಯವನ್ನು ನಡೆಸಲಾಗುತ್ತಿದೆ.

ಉತ್ಸವಕ್ಕೆ ಬರುವ ಸಾಹಿತಿಗಳು, ವಿದ್ವಾಂಸರು, ಜನಪ್ರತಿನಿಧಿಗಳು, ಗಣ್ಯರಿಗೆ ಸ್ವಾಗತ ಕೋರಿ ರಾಯಣ್ಣನ ಅಭಿಮಾನಿಗಳು ಬ್ಯಾನರ್ ಮತ್ತು ಕಟೌಟ್‌ಗಳನ್ನು ಗ್ರಾಮದೆಲ್ಲೆಡೆ ಅಳವಡಿಸಿದ್ದಾರೆ. ಮನೆಗಳು ಸುಣ್ಣ, ಬಣ್ಣಗಳಿಂದ ಸಿಂಗಾರಗೊಂಡಿವೆ. ಬೀದಿಗಳಲ್ಲಿ ಹಸಿರು ತೋರಣ ಕಂಗೊಳಿಸುತ್ತಿವೆ. ಮನೆಗಳ ಮುಂದೆ ರಂಗೋಲಿಯ ಚಿತ್ತಾರ ಮೂಡಿದೆ.

ಉದ್ಯಾನಕ್ಕೆ ಪುನಶ್ಚೇತನ ಭಾಗ್ಯ: ರಾಯಣ್ಣನ ಉದ್ಯಾನಕ್ಕೆ ಉತ್ಸವದ ನೆಪದಲ್ಲಿ ಪುನಶ್ಚೇತನ ಭಾಗ್ಯ ಸಿಕ್ಕಿದೆ. ಇಡೀ ಉದ್ಯಾನ ವಿದ್ಯುತ್ ದೀಪಾಲಂಕಾರದಿಂದ ಮಿಂಚುತ್ತಿದೆ. ರಾಯಣ್ಣನ ಪ್ರತಿಮೆ ಬಣ್ಣ ಬಳಿದುಕೊಂಡು ಕಂಗೊಳಿಸುತ್ತಿದೆ. ಗ್ರಾಮದ ಹೊರವಲಯದಲ್ಲಿ ಕುಸ್ತಿ ಅಖಾಡ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಭವ್ಯ ವೇದಿಕೆ ಹಾಕಲಾಗಿದೆ. 10ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಮೆರಗು ನೀಡಲು ಜನಪದ ಕಲಾ ತಂಡಗಳು ಗ್ರಾಮಕ್ಕೆ ಬಂದಿವೆ. ಕರಡಿ ಮಜಲು, ಡೊಳ್ಳು ಕುಣಿತ, ಜಾಂಜ್ ಪಥಕ್‌, ಕುದರೆ ಆಟ ಸೇರಿದಂತೆ ವಿವಿಧ ಕಲಾಪ್ರಕಾರಗಳು ಅನಾವರಣಗೊಳ್ಳಲಿವೆ. ರಾಯಣ್ಣನ ಉತ್ಸವಕ್ಕೆ ಬರುವವರಿಗೆ ಸಾರಿಗೆ ಸಂಸ್ಥೆಯು ವಿಶೇಷ ಬಸ್‌ ವ್ಯವಸ್ಥೆ ಮಾಡಿದೆ. ಯಶಸ್ಸಿಯಾಗಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT