ದೇವಮಂದಿರಗಳಲ್ಲಿ ಸಂಕ್ರಾಂತಿ...

7

ದೇವಮಂದಿರಗಳಲ್ಲಿ ಸಂಕ್ರಾಂತಿ...

Published:
Updated:
ದೇವಮಂದಿರಗಳಲ್ಲಿ ಸಂಕ್ರಾಂತಿ...

ಸಂಕ್ರಾಂತಿಯ ಸಂಭ್ರಮಕ್ಕೆ ನಗರದಲ್ಲಿ ಸಿದ್ಧತೆ ಭರದಿಂದ ಸಾಗಿದೆ. ‘ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ’ ಎಂದು ಎಲ್ಲರ ಮೊಗದಲ್ಲಿ ನಗು ಅರಳುವ ಕಾಲವಿದು. ವಿಭಿನ್ನ ಆಚಾರ ಸಂಸ್ಕೃತಿಯುಳ್ಳ ಬೆಂಗಳೂರಿನಲ್ಲಿ ಹಬ್ಬದ ಆಚರಣೆ ಜೋರಾಗಿಯೇ ಇದೆ. ಸಂಕ್ರಾಂತಿ ಹಬ್ಬಕ್ಕೆ ಅಧಿಪತಿ ಸೂರ್ಯ. ಪ್ರಪಂಚಕ್ಕೆ ಬೆಳಕಿನ ಮೂಲಕ ಜೀವದಾನ ಮಾಡುವ ಆತ ದಕ್ಷಿಣಾಯನದಿಂದ ಉತ್ತರಾಯಣದತ್ತ ಹೊರಳುವ ಕಾಲವಿದು. ಉತ್ತರಾಯಣ ಎಂದರೆ ದೇವತೆಗಳಿಗೆ ಹಗಲು. ಸ್ವರ್ಗದ ಬಾಗಿಲು ತೆರೆಯುವ ಕಾಲ ಎನ್ನುವ ನಂಬಿಕೆಯೂ ಅನೇಕರಲ್ಲಿದೆ.

ಸಂಕ್ರಾಂತಿ ಹಬ್ಬವನ್ನು ಬೆಂಗಳೂರಿನಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಎಳ್ಳು ಬೆಲ್ಲ ಹಂಚಿ ಸಂಭ್ರಮಿಸಲಾಗುತ್ತದೆ. ಬೆಂಗಳೂರಿಗರಿಗೆ ಸಂಕ್ರಾಂತಿ ಹಬ್ಬ ವಿಶೇಷ ಎನಿಸಲು ಕಾರಣ ಇಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನ. ಸಂಕ್ರಾಂತಿಯ ದಿನದಂದು ದೇವಸ್ಥಾನದ ಈಶ್ವರ ಲಿಂಗ ಹಾಗೂ ಸೂರ್ಯನ ಸಮ್ಮಿಲನವಾಗುತ್ತದೆ. ಸೂರ್ಯನ ನೇರ ರಶ್ಮಿ ಈಶ್ವರ ಲಿಂಗದ ಮೇಲೆ ಬೀಳುತ್ತದೆ. ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುವುದಕ್ಕೂ ಮೊದಲು ಮಹಾದೇವನ ಆಶೀರ್ವಾದ ಪಡೆಯುತ್ತಾನೆ ಎಂಬುದು ಆಸ್ತಿಕರ ನಂಬಿಕೆ.

ಸೂರ್ಯನ ನೇರ ರಶ್ಮಿ ಈಶ್ವರ ಲಿಂಗವನ್ನು ಚುಂಬಿಸುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷವೂ ಭಕ್ತ ಸಮೂಹ ಕಾಯುತ್ತಿರುತ್ತದೆ. ಟೀವಿ ಪರದೆಗಳ ಮೇಲೆಯೂ ನೇರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ವರ್ಷ ಸಂಕ್ರಾಂತಿ ಜ.15ರಂದು ಇದೆ. ಆದರೆ ಸೂರ್ಯರಶ್ಮಿ ಪ್ರತಿವರ್ಷದಂತೆ ಜ.14ರಂದೇ ಸೂರ್ಯನ ಮೇಲೆ ಬೀಳಲಿದೆ. ಸೂರ್ಯನ ಕಿರಣಗಳು ದೇವಸ್ಥಾನದ ದಕ್ಷಿಣದ ಕಿಟಕಿಯ ಮೂಲಕ ಹಾದು ನಂದಿಯ ಕೋಡುಗಳ ಮಧ್ಯದಿಂದ ಶಿವನನ್ನು ಸ್ಪರ್ಶಿಸುತ್ತವೆ.

‘ಈ ಸಮಯವನ್ನು ಉತ್ತರಾಯಣ ಪುಣ್ಯಕಾಲ ಎಂದು ಕರೆಯಲಾಗುತ್ತದೆ. ಅಂದು ಸಂಜೆ 5.20ರಿಂದ ಸಂಜೆ 5.32ರವರೆಗೆಗ ಸೂರ್ಯರಶ್ಮಿ ಶಿವಲಿಂಗದಲ್ಲಿ ಐಕ್ಯವಾಗುವುದನ್ನು ಕಾಣಬಹುದು. ಕ್ಷೀರಾಭಿಷೇಕ ಹಾಗೂ ಎಳನೀರು ಅಭಿಷೇಕ ಮಾಡಿ ತೀರ್ಥವನ್ನು ಭಕ್ತಾದಿಗಳಿಗೆ ವಿತರಿಸುತ್ತೇವೆ’ ಎಂದು ಮಾಹಿತಿ ನೀಡುತ್ತಾರೆ ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತರು.

ಕೋಟೆ ದೇವಸ್ಥಾನದಲ್ಲಿಯೂ ಸಂಕ್ರಾಂತಿ ಹಬ್ಬದಂದು ವಿಶೇಷ ಆಚರಣೆ ಇರುತ್ತದೆ.

‘ಸೋಮವಾರ ಬೆಳಿಗ್ಗೆ 8 ಗಂಟೆಗೆ ಅಭಿಷೇಕ, ವಿಶೇಷ ಅಲಂಕಾರವಿರುತ್ತದೆ. ಉತ್ತರ ಬಾಗಿಲು ಉತ್ಸವ ಅಂದು ನಡೆಯುತ್ತದೆ. ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯುತ್ತದೆ. ಜ್ಯೋತಿಷ್ಯದ ಪ್ರಕಾರ ಆರು ತಿಂಗಳು ಉತ್ತರಾಯಣ, ಆರು ತಿಂಗಳು ದಕ್ಷಿಣಾಯನ. ಉತ್ತರಾಯಣ ಎಂದರೆ ದೇವತೆಗಳಿಗೆ ಹಗಲು. ನಾವು ಬೆಳಿಗ್ಗೆ ಎದ್ದು ಬಾಗಿಲು ತೆರೆಯುತ್ತೇವಲ್ಲ, ಅಂತೆಯೇ ಹಗಲಾದ್ದರಿಂದ ದೇವತೆಗಳು ಬಾಗಿಲು ತೆರೆಯುತ್ತಾರೆ. ಸಂಕ್ರಾಂತಿ ಸಂದರ್ಭದಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 1 ಹಾಗೂ ಸಾಯಂಕಾಲ 6ರಿಂದ 10 ಗಂಟೆಯವರೆಗೆ ದೇವರನ್ನು ನೋಡಬಹುದು. ಇದನ್ನು ವೈಕುಂಠದ ಬಾಗಿಲು ತೆರೆಯುವುದು ಎನ್ನುತ್ತೇವೆ. ಈ ಸಂದರ್ಭದಲ್ಲಿ ದೇವರ ದರ್ಶನ ಪಡೆದರೆ ಶ್ರೇಷ್ಠ ಎನ್ನುವ ನಂಬಿಕೆ ಜನರಲ್ಲಿದೆ. ಸಹಸ್ರಾರು ಜನ ಪಾಲ್ಗೊಳ್ಳುತ್ತಾರೆ’ ಎಂದು ಮಾಹಿತಿ ನೀಡುತ್ತಾರೆ ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಎಸ್‌.ಆರ್‌.ಶೇಷಾದ್ರಿ ಭಟ್ಟರ್‌.

ಏರ್‌ಪೋರ್ಟ್‌ ರಸ್ತೆಯ ದೊಮ್ಮಲೂರು ಬಡಾವಣೆಯಲ್ಲಿ ಸೂರ್ಯನಾರಾಯಣ ದೇವಸ್ಥಾನವಿದೆ. ಸಂಕ್ರಾಂತಿಯ ಅಧಿಪತಿ ಸೂರ್ಯನೇ. ಹೀಗಾಗಿ ಈ ದೇವಸ್ಥಾನದ ಸಂಕ್ರಾಂತಿ ಸಂದರ್ಭದ ವಿಶೇಷ ಆಕರ್ಷಣೆ. ದೇವಸ್ಥಾನದ ತುಂಬೆಲ್ಲಾ ಸೂರ್ಯನ ನೈಜ ಬೆಳಕಿನ ಲಾಸ್ಯ ಇರುವುದು ದೇವಸ್ಥಾನಕ್ಕೆ ವಿಶೇಷ ಕಳೆ ಕಟ್ಟಿಕೊಟ್ಟಿದೆ. ಬದರಿಯಿಂದ ತಂದಿರುವ 3.25 ಅಡಿ ಎತ್ತರದ ಶಿವಮೂರ್ತಿ ಇಲ್ಲಿದೆ.

‘ಈ ವರ್ಷ ಸಂಕ್ರಾಂತಿ 15ರಂದು. ಆ ದಿನ ಮುಂಜಾನೆ 5.30ಕ್ಕೆ ವಿಶೇಷ ಅಭಿಷೇಕ ಇರುತ್ತದೆ. ವಿಶೇಷ ಅಲಂಕಾರ ಮಾಡಲಾಗುತ್ತದೆ. 8.30ಕ್ಕೆ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಾಡುತ್ತೇವೆ’ ಎಂದು ಮಾಹಿತಿ ನೀಡಿದರು ದೇವಸ್ಥಾನದ ಪ್ರಕಾಶ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry