ಮರಣಪತ್ರ ಬರೆದಿಟ್ಟು ಯುವಕ ಆತ್ಮಹತ್ಯೆ

7

ಮರಣಪತ್ರ ಬರೆದಿಟ್ಟು ಯುವಕ ಆತ್ಮಹತ್ಯೆ

Published:
Updated:

ಬೆಂಗಳೂರು: ಹುಳಿಮಾವು ಸಮೀಪದ ಬಸವನಪುರದಲ್ಲಿ ಗುರುವಾರ ರಾತ್ರಿ ಸಂತೋಷ್ ಕುಮಾರ್ (28) ಎಂಬುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುನೀಲ್ ಎಂಬಾತನಿಂದ ಸಾಲ ಪಡೆದಿದ್ದ ಸಂತೋಷ್, ಸಕಾಲಕ್ಕೆ ಹಣ ಹಿಂದಿರುಗಿಸಿರಲಿಲ್ಲ. ಹೀಗಾಗಿ, ಅವರಿಂದ ಬೈಕ್ ಹಾಗೂ ಮೊಬೈಲ್ ಕಿತ್ತುಕೊಂಡಿದ್ದ ಸುನೀಲ್, ಸಾಲ ತೀರಿಸಿ ಬಿಡಿಸಿಕೊಂಡು ಹೋಗುವಂತೆ ಹೇಳಿದ್ದ. ಇದರಿಂದ ಖಿನ್ನತೆಗೆ ಒಳಗಾಗಿದ್ದ ಅವರು, ಪತ್ರ ಬರೆದಿಟ್ಟು ರಾತ್ರಿ ನೇಣು ಹಾಕಿಕೊಂಡಿದ್ದಾರೆ. ಪೋಷಕರು ಬೆಳಿಗ್ಗೆ ಎಚ್ಚರಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಹೀಗಿದೆ ಮರಣಪತ್ರ: ‘ಅಪ್ಪ–ಅಮ್ಮ ನನ್ನನ್ನು ಕ್ಷಮಿಸಿ. ಈ ಕಷ್ಟ ಅನುಭವಿಸಲು ನನ್ನ ಕೈಲಿ ಆಗುತ್ತಿಲ್ಲ. ನನ್ನ ಜತೆ ಯಾರೂ ಇಲ್ಲ ಎನಿಸುತ್ತಿದೆ. ಅಣ್ಣ ದಯವಿಟ್ಟು ಅಪ್ಪ–ಅಮ್ಮನನ್ನು ಚೆನ್ನಾಗಿ ನೋಡಿಕೊ. ‘ಅವರಿವರ ಜತೆ ಸೇರಬೇಡ’ ಎಂದು ಅಪ್ಪ ಯಾವಾಗಲೂ ಹೇಳುತ್ತಿದ್ದರು. ಅವರ ಮಾತನ್ನು ನಾನು ಕೇಳಲಿಲ್ಲ.’

‘ಈ ಪತ್ರ ಓದೋ ಎಲ್ಲರಿಗೂ ನಾನು ಹೇಳೋದು ಒಂದೇ ಮಾತು. ಸಾಲ ಕೊಡಿ. ಆದರೆ, ಪ್ರಾಣ ಕೇಳಬೇಡಿ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ದಡ್ಡತನದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅಪ್ಪ, ನನ್ನ ಶವವನ್ನು ಈ ಊರಿನಲ್ಲಿ ಮಣ್ಣು ಮಾಡಬೇಡಿ. ದೇಹವನ್ನು ಸುಟ್ಟು ಬೂದಿಯನ್ನು ಯಾವುದಾದರೂ ನದಿಗೆ ಹಾಕಿಬಿಡಿ’ ಎಂದು‌ ಸಂತೋಷ್ ಪತ್ರದಲ್ಲಿ ಬರೆದಿದ್ದಾರೆ.

ವಿದ್ಯಾರ್ಥಿನಿ ಆತ್ಮಹತ್ಯೆ: ‘ಅಡುಗೆ ಮಾಡುವುದನ್ನು ಕಲಿತಿಲ್ಲ’ ಎಂದು ತಾಯಿ ಬೈದಿದ್ದಕ್ಕೆ ಪಿಯುಸಿ ವಿದ್ಯಾರ್ಥಿನಿ ವರಲಕ್ಷ್ಮಿ (17) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಯಲಹಂಕ ಉಪನಗರ ಸಮೀಪದ ಕನಕನಗರ ನಿವಾಸಿಯಾದ ವರಲಕ್ಷ್ಮಿ, ಶುಕ್ರವಾರ ಮಧ್ಯಾಹ್ನ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾಳೆ. ಕೂಲಿ ಕೆಲಸಕ್ಕೆ ಹೋಗಿದ್ದ ತಾಯಿ ಗಂಗಮ್ಮ, ಸಂಜೆ 4.30ರ ಸುಮಾರಿಗೆ ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.

‘ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಿದ್ದ ನಾನು, ಇನ್ನೂ ಅಡುಗೆ ಮಾಡುವುದನ್ನು ಕಲಿತಿಲ್ಲ ಎಂದು ಮಗಳಿಗೆ ಬೈದಿದ್ದೆ. ಅದೇ ಬೇಸರದಲ್ಲಿ ಈ ರೀತಿ ಮಾಡಿಕೊಂಡಿದ್ದಾಳೆ’ ಎಂದು ಗಂಗಮ್ಮ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry