‘ಅನಾಹುತ ತಡೆಗೆ ಸುರಕ್ಷತಾ ಕ್ರಮ ಮುಖ್ಯ’

7

‘ಅನಾಹುತ ತಡೆಗೆ ಸುರಕ್ಷತಾ ಕ್ರಮ ಮುಖ್ಯ’

Published:
Updated:

ಶಕ್ತಿನಗರ: ‘ವಿದ್ಯುತ್‌ ಸ್ಥಾವರಗಳಲ್ಲಿ ಹೆಚ್ಚು ಅನಾಹುತ ಉಂಟಾಗುವ ಕಡೆ ಸೂಕ್ತ ಸುರಕ್ಷತೆಯ ಕ್ರಮ ಕೈಗೊಳ್ಳಬೇಕು’ ಎಂದು ಕಲಬುರ್ಗಿ ವಿಭಾಗದ ಕೈಗಾರಿಕಾ ಉಪನಿರ್ದೇಶಕ ಆರ್‌.ಕೆ.ಪಾರ್ಥಸಾರಥಿ ತಿಳಿಸಿದರು.

ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿಎಲ್‌) ನಿಯಮಿತ ,ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ (ಆರ್‌ಟಿಪಿಎಸ್‌) ಸುರಕ್ಷತಾ ಸಮಿತಿ ಸಹಯೋಗದಲ್ಲಿ ಇಲ್ಲಿನ ಒಂದನೇ ಘಟಕದ ಆವರಣದಲ್ಲಿ ಈಚೆಗೆ ಏರ್ಪಡಿಸಿದ್ದ ರಾಸಾಯನಿಕ ದುರಂತಗಳ ನಿವಾರಣಾ ದಿನ ಹಾಗೂ ಅಣುಕು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಸಾಯನಿಕ ವಿಪತ್ತು ಆತಂಕ ಎದುರಿಸುತ್ತಿರುವ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಅನಿಲ ಸೋರಿಕೆ ತಡೆ ಸೇರಿದಂತೆ ಸಾರ್ವಜನಿಕರಿಗೆ ಪ್ರತ್ಯೇಕವಾಗಿ ತುರ್ತು ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಆರ್‌ಟಿಪಿಎಸ್‌ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಸಿ.ವೇಣುಗೋಪಾಲ ಮಾತನಾಡಿ, ‘ಅಪಘಾತಗಳು ಆಕಸ್ಮಿಕವಾಗಿ ಸಂಭವಿಸುತ್ತವೆ. ಆದರೆ ಅದನ್ನು ನಿಯಂತ್ರಿಸಲು ಮತ್ತು ಅಪಾಯಗಳನ್ನು ಶಮನಗೊಳಿಸಲು ಸನ್ನದ್ಧರಾಗಿರಬೇಕು’ ಎಂದರು.

ವೇದಿಕೆಯಲ್ಲಿ ಕಲಬುರ್ಗಿ ವಿಭಾಗದ ಕಾರ್ಖಾನೆಗಳ ಸಹಾಯಕ ನಿರ್ದೇಶಕ ಸುಖದೇವ, ರಾಯಚೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರವೀಂದ್ರ ಘಾಟ್ಗೆ, ಆರ್‌ಟಿಪಿಎಸ್‌ ಚಾಲನೆ ಮತ್ತು ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್‌ ಜಿ.ಹನುಮಂತಪ್ಪ, ಮಾನವ ಸಂಪನ್ಮೂಲ ವಿಭಾಗದ ಉಪ ವ್ಯವಸ್ಥಾಪಕ ಜಿ.ಶಿವಶರಣ, ಪ್ರಕಾಶಬಂಗೇರಾ, ಸುರಕ್ಷತಾ ಸಮಿತಿಯ ಅಧಿಕಾರಿ ಯಲ್ಲಪ್ಪಶೆಟ್ಟಿ, ವೈದ್ಯಕೀಯ ಅಧೀಕ್ಷಕ ಡಾ.ಶಂಕರ ಯಾದವಾಡ, ಆರ್‌ಟಿಪಿಎಸ್‌ ವಿವಿಧ ನೌಕರರ ಸಂಘದ ಪದಾಧಿಕಾರಿಗಳು, ಕೇಂದ್ರ ಭದ್ರತಾ ಪಡೆಯ (ಸಿಎಸ್‌ಎಫ್‌) ಅಧಿಕಾರಿಗಳು ಹಾಜರಿದ್ದರು.

ವೆಂಕಟೇಶ ಸ್ವಾಗತಿಸಿದರು. ಭೀಮಯ್ಯ ನಾಯಕ ವಂದಿಸಿದರು. ಇದೇ ವೇಳೆ ಒಂದನೇ ಘಟಕದ ಆವರಣದಲ್ಲಿರುವ ವಿಪತ್ತು ನಿರ್ವಹಣೆ ಕ್ರಮಗಳ ಬಗ್ಗೆ ಅಣುಕು ಪ್ರದರ್ಶನ ನಡೆಸಲಾಯಿತು. ಭೋಪಾಲ್‌ ವಿಷಾನಿಲ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥವಾಗಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry