ದೇವನಹಳ್ಳಿ ಟಿಕೆಟ್‌ ಕೋರಿ ಮನವಿ

6

ದೇವನಹಳ್ಳಿ ಟಿಕೆಟ್‌ ಕೋರಿ ಮನವಿ

Published:
Updated:

ವಿಜಯಪುರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿ ವರಿಷ್ಠರಿಗೆ ಮನವಿ ಪತ್ರ ಸಲ್ಲಿಸಿದ್ದೇನೆ ಎಂದು ಕೆ.ಪಿ.ಸಿ.ಸಿ.ವಕ್ತಾರ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಬೀಡಿಗಾನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಗ್ರಾಮ ವಾಸ್ತವ್ಯ ಮಾಡಿ ಅವರು ಮಾತನಾಡಿದರು. ನಾನು ಬೆಂಗಳೂರಿನಿಂದ ವಲಸೆ ಬಂದು ದೇವನಹಳ್ಳಿಯಲ್ಲಿ ಟಿಕೆಟ್ ಕೇಳುತ್ತಿದ್ದೇನೆ ಎಂಬ ತಪ್ಪು ಅಭಿಪ್ರಾಯಗಳು ಕೇಳಿ ಬರುತ್ತಿದೆ. ‘ನಮ್ಮ ಪೂರ್ವಿಕರು ದೇವನಹಳ್ಳಿ ತಾಲ್ಲೂಕಿನ ಬೀಡಿಗಾನಹಳ್ಳಿ ಗ್ರಾಮದವರು, ನಾನು ದೇವನಹಳ್ಳಿಯಲ್ಲೇ ವ್ಯಾಸಂಗ ಮಾಡಿದ್ದೇನೆ’ ಎಂದರು.

‘ನಾನು ಇಲ್ಲೇ ಬೆಳೆದಿದ್ದೇನೆ. 40 ವರ್ಷ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ’ ಎಂದರು. ‘ಈವರೆಗೂ ನನಗೆ ಅವಕಾಶ ನೀಡಿಲ್ಲ. ಈ ಚುನಾವಣೆಯಲ್ಲಿ ಬಹಳಷ್ಟು ಮಂದಿ ಆಕಾಂಕ್ಷಿಗಳಿದ್ದಾರೆ‘ ಎಂದು ಅಭಿಪ್ರಾಯಪಟ್ಟರು.

ಈ ಬಾರಿ ಅವಕಾಶ ನೀಡಿದರೆ, ಮಾದರಿ ಕ್ಷೇತ್ರವಾಗಿ ಮಾಡುವ ಕನಸು ಇದೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಕೆಲಸ ಮಾಡುತ್ತೇನೆ ಎಂದರು. ತಾಲ್ಲೂಕು ಪಂಚಾಯಿತಿ ಸದಸ್ಯ ದಿನ್ನೂರು ವೆಂಕಟೇಶ್ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಶಾಸಕರಿದ್ದಾರೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಪ್ರಾಬಲ್ಯ ಕುಗ್ಗಿಲ್ಲ, ಪಕ್ಷದ ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡಬೇಕು ಎಂದರು.

ಕಾಂಗ್ರೆಸ್ ಮುಖಂಡ ಭುವನಹಳ್ಳಿ ಮುನಿರಾಜು ಮಾತನಾಡಿ, ಪ್ರಾಮಾಣಿಕ ಮುಖಂಡರು ಅವಕಾಶ ವಂಚಿತರಾಗಬಾರದು. ಉತ್ತಮ ಕೆಲಸ ಮಾಡುವವರಿಗೆ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಸ್ಥಳೀಯ ಮುಖಂಡರಾದ ಶಾಮಣ್ಣ, ಕೃಷ್ಣಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್.ಸಿ.ಘಟಕದ ಅಧ್ಯಕ್ಷ ಲೋಕೇಶ್, ವಿಜಯಪುರ ಬ್ಲಾಕ್ ಎಸ್.ಸಿ.ಘಟಕದ ಅಧ್ಯಕ್ಷ ಡೇವಿಡ್ ನಾರಾಯಣಸ್ವಾಮಿ, ಸಿ.ಕೆ.ರಾಮಚಂದ್ರಪ್ಪ, ಲಕ್ಷ್ಮೀನರಸಿಂಹಸ್ವಾಮಿ, ನರಸಿಂಹನಾಯಕ್, ಅಶ್ವಥನಾರಾಯಣಪ್ಪ, ಪುರುಷೋತ್ತಮ, ಕುಮಾರ್, ಸೋಮಶೇಖರ್, ಮುನಿಶಾಮಪ್ಪ, ಪಿಳ್ಳಕೃಷ್ಣಪ್ಪ, ಮುರಳಿ, ವೆಂಕಟರಾಯಪ್ಪ, ನಂಜಪ್ಪ, ರಾಜಣ್ಣ, ಮುಕುಂದ್, ನಾರಾಯಣಸ್ವಾಮಿ, ಮುನಿರೆಡ್ಡಿ, ರಮೇಶ್ ಇದ್ದರು.

ಮೋದಿ, ಷಾರಿಂದ ಪಕ್ಷಕ್ಕೆ ಹಿನ್ನಡೆಯಾಗದು

ರಾಜ್ಯಕ್ಕೆ ಬಂದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುವುದಿಲ್ಲ. ಸುಳ್ಳು ಹೇಳಿಕೊಂಡು ಅಧಿಕಾರ ನಡೆಸುತ್ತಿರುವ ಮೋದಿ ಅವರನ್ನು ರಾಜ್ಯದ ಜನರು ತಿರಸ್ಕರಿಸಲಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಅಮಿತ್ ಷಾ ಅವರು ಶಾಸಕರ ವ್ಯಾಪಾರ ಮಾಡಿಕೊಂಡು ಆಡಳಿತ ನಡೆಸುವ ಮುನ್ಸೂಚನೆ ನೀಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಚಾರವಾಗಲಿದೆ. ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ನಡೆಸಲಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry