ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯಕ್ಕೆ ಸಾಮಾಜಿಕ ಜವಾಬ್ದಾರಿ ಅಗತ್ಯ

Last Updated 13 ಜನವರಿ 2018, 8:14 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ‘ಸಾಹಿತ್ಯಕ್ಕೆ ಸಾಮಾಜಿಕ ಜವಾಬ್ದಾರಿಯೂ ಇರಬೇಕು. ಆದರೆ, ಸಾಮಾಜಿಕ ಜವಾಬ್ದಾರಿ ಇಲ್ಲದ ಸಾಹಿತ್ಯ ಶ್ರೇಷ್ಠವಲ್ಲ ಎಂಬ ವಾದ ಸರಿಯಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಎಂ.ಸಿ. ಮೋಹನಕುಮಾರಿ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಹಿತ್ಯದ ಮೂಲ ಉದ್ದೇಶ ಸೃಜನಶೀಲ ಮನಸನ್ನು ಸ್ವತಂತ್ರವಾಗಿ ಅಭಿವ್ಯಕ್ತಗೊಳಿಸುವುದು. ಅದು ಸಾಮಾಜಿಕ ಬದಲಾವಣೆಗೆ ಪ್ರೇರಕ ಶಕ್ತಿಯೂ ಹೌದು. ಒಂದು ಕಾಲದ ಸಾಹಿತ್ಯ ಆ ಕಾಲಘಟ್ಟದ ಜನಜೀವನ, ಆಚಾರ ವಿಚಾರ, ಸಂಸ್ಕೃತಿಯ ಅಧ್ಯಯನಕ್ಕೆ ಸಹ ಆಧಾರವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಜಗತ್ತಿನ ಇತಿಹಾಸ ನೋಡಿದಾಗ ಎಲ್ಲ ಕಾಲದಲ್ಲಿ, ಎಲ್ಲ ದೇಶದಲ್ಲಿಯೂ ನಡೆದ ಸಾಮಾಜಿಕ ಚಳವಳಿಗಳಿಗೆ ಸಾಹಿತ್ಯದ ಮೂಲಕವೇ ಪ್ರೇರಣೆ ಸಿಕ್ಕಿರುವುದನ್ನು ಕಾಣುತ್ತೇವೆ. ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕತೆಯ ಒಟ್ಟಾರೆ ಪರಿಣಾಮಗಳ ಒತ್ತಡದಿಂದ ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದರು.

ಪ್ರತಿ ಸಾಹಿತ್ಯವೂ ಆಯಾ ದೇಶ ಮತ್ತು ಕಾಲಘಟ್ಟದ ಮುಖಾಮುಖಿಯೊಂದಿಗೆ ರೂಪುಗೊಳ್ಳುತ್ತದೆ. ಸಮಾಜದ ಒಟ್ಟಾರೆ ಪರಿಸ್ಥಿತಿಯ ಪ್ರಭಾವಕ್ಕೆ ಒಳಗಾಗಿ ಅಥವಾ ಸಾಮಾಜಿಕ ಮನಸ್ಥಿತಿಯನ್ನು ವಿರೋಧಿಸುವ ಹೋರಾಟದ ಫಲವಾಗಿ ಹುಟ್ಟಿಕೊಳ್ಳುತ್ತದೆ. ಆದರೆ, ಸೃಜನಶೀಲ ಸಾಹಿತ್ಯವು ಈ ಎರಡೂ ರೀತಿಯ ಒತ್ತಡಗಳನ್ನು ಮೀರಿ ಅದರಾಚೆಗೆ ಸ್ವತಂತ್ರ ಅಭಿವ್ಯಕ್ತಿ ಪಡೆದುಕೊಳ್ಳುತ್ತದೆ ಎಂದು ವಿಶ್ಲೇಷಿಸಿದರು.

ಪ್ರತಿ ಕಾಲಮಾನದಲ್ಲಿಯೂ ಸಾಹಿತ್ಯ ತನ್ನನ್ನು ಬದಲಾವಣೆಗೆ ಒಡ್ಡಿಕೊಳ್ಳುತ್ತದೆ. ಹೊಸತನ್ನು ಸೇರಿಸಿ ಕೊಂಡು ಹಳೆಯ ದನ್ನು ತೆರೆದು ಹೊಸ ರೂಪಗಳನ್ನು ಹುಟ್ಟುಹಾಕುತ್ತದೆ ಎಂದರು. ಎಲ್ಲ ಕಾವ್ಯ ಮತ್ತು ಕಲೆಯ ಮೂಲಸೆಲೆ ಧರ್ಮ. ಪ್ರತಿ ಮತಧರ್ಮಗಳು ಪ್ರವರ್ಧಮಾನ ಕಾಲದಲ್ಲಿದ್ದಾಗ ಆ ಧರ್ಮಗಳ ಸಾಹಿತ್ಯ ಉತ್ಕೃಷ್ಟ ಸ್ಥಿತಿಯಲ್ಲಿ ಇದ್ದವು. ಇದಕ್ಕೆ ಬಹುಮುಖ್ಯ ಕಾರಣ, ಕಾವ್ಯ ಮತ್ತು ಧರ್ಮದ ಉದ್ದೇಶ ಒಂದೇ ಆಗಿದ್ದು. ಸಾಹಿತ್ಯ ಧರ್ಮದ ಪ್ರಸಾರ ಮತ್ತು ಪ್ರಚಾರದ ಮಾಧ್ಯಮವಾಗಿ ಬಳಕೆಯಲ್ಲಿತ್ತು ಎಂದು ಹೇಳಿದರು.

ಸಂಸದ ಆರ್‌. ಧ್ರುವನಾರಾಯಣ ಮಾತನಾಡಿ, ನಾಡಿನ ವಿವಿಧ ಸಮಸ್ಯೆಗಳ ವಿಚಾರದಲ್ಲಿ ಜನಪ್ರತಿನಿಧಿಗಳನ್ನು ಎಚ್ಚರಿಸುವಲ್ಲಿ ಸಾಹಿತಿಗಳ ಪಾತ್ರ ಹಿರಿದು ಎಂದು ಹೇಳಿದರು. ಜಿಲ್ಲೆಯು ಸಾಹಿತ್ಯ, ಧಾರ್ಮಿಕ, ಅರಣ್ಯ ಪ್ರದೇಶ ಮತ್ತು ಸಾಂಸ್ಕೃತಿಕ ವೈವಿಧ್ಯಗಳಿಂದ ಪವಿತ್ರವಾಗಿದೆ. ಆದರೆ, ಅಷ್ಟೇ ಸಮಸ್ಯೆಗಳೂ ಇವೆ. ಸಾಕ್ಷರತೆಯ ಪ್ರಮಾಣದಲ್ಲಿ ಬಹಳ ಹಿಂದುಳಿದಿದ್ದೇವೆ. ಬಾಲ್ಯವಿವಾಹ, ಮೌಢ್ಯತೆಯ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ ಎಂದು ವಿಷಾದಿಸಿದರು.

ಈ ವೇಳೆ ಸಾಹಿತಿ ಶೀಲಾ ಸತ್ಯೇಂದ್ರಸ್ವಾಮಿ ಅವರಿಗೆ ದಿ. ಮುದ್ದುಮಾದಪ್ಪ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ನವಮಿ ಬಂಡಿಗೆರೆ ಅವರ ‘ಮಾತು–ಮಾನವತೆ’, ಡಾ. ಪಳನಿಸ್ವಾಮಿ ಮೂಡುಗೂರು ಅವರ ‘ಜಗದ ಬೆಳಕು–ಗುರು’, ಬಾಹುಬಲಿ ಜಯರಾಜ್‌ ಅವರ ‘ಗುಂಡ್ಲುಪೇಟೆ–ಪುರಕಥನ’ ಮತ್ತು ರಾ.ನಂ. ಚಂದ್ರಶೇಖರ್ ಅವರ ‘ಕನ್ನಡದ ವೀರ ಸೇನಾನಿ ಮ. ರಾಮಮೂರ್ತಿ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಎಚ್‌.ಎಸ್‌. ನಂಜಪ್ಪ, ಸಾಹಿತಿಗಳಾದ ಸೋಮಶೇಖರ ಬಿಸಲ್ವಾಡಿ, ಎ.ಎಂ. ನಾಗಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಎಸ್‌. ಮಹೇಶ್‌, ಚನ್ನಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ಎನ್. ನಟೇಶ್‌, ಮಂಗಳಾ ಮುದ್ದುಮಾದಪ್ಪ, ಶಾರದಮ್ಮ, ರೈತ ಮುಖಂಡ ಮಹೇಶ್‌ಬಾಬು ಇದ್ದರು.

* * 

‘ಇಂಗ್ಲಿಷ್‌ನಲ್ಲಿ ಹೆಚ್ಚು ಬರೆದಿದ್ದೇನೆಂಬ ಕಾರಣಕ್ಕೆ ಆಂಗ್ಲಭಾಷಾ ಲೇಖಕಿ ಎಂದು ಗುರುತಿಸುತ್ತಾರೆ. ಕನ್ನಡ ಭಾಷೆ ಮೇಲೂ ಹಿಡಿತ ಚೆನ್ನಾಗಿದೆ. ಕನ್ನಡ ಬರಹಗಾರ್ತಿ ಎಂದೇ ಕರೆಸಿಕೊಳ್ಳಲು ಇಷ್ಟಪಡುತ್ತೇನೆ’
ಡಾ. ಎಂ.ಸಿ. ಮೋಹನಕುಮಾರಿ, ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT