ದಾಖಲೆಗಳ ವಹಿವಾಟಿನ ವಾರ

7
ಷೇರುಪೇಟೆಯಲ್ಲಿ ಮುಂದುವರಿದ ಸಕಾರಾತ್ಮಕ ಚಟುವಟಿಕೆ

ದಾಖಲೆಗಳ ವಹಿವಾಟಿನ ವಾರ

Published:
Updated:
ದಾಖಲೆಗಳ ವಹಿವಾಟಿನ ವಾರ

ಮುಂಬೈ : ಹೊಸ ವರ್ಷ, ಷೇರುಪೇಟೆಗಳಲ್ಲಿ ದಿನವೂ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ಹೂಡಿಕೆ ಪ್ರಮಾಣ ಹೆಚ್ಚುತ್ತಿದ್ದು, ಗೂಳಿ ರಭಸದಿಂದ ಓಡುತ್ತಿದೆ.

ಸತತ ಆರನೇ ವಾರವೂ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ಮುಂದುವರಿಯಿತು. ವಾರದ ವಹಿವಾಟಿನಲ್ಲಿ ನಾಲ್ಕು ದಿನಗಳೂ ಏರಿಕೆ ಕಾಣುವ ಮೂಲಕ ಹೊಸ ಎತ್ತರವನ್ನು ತಲುಪಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 438 ಅಂಶ ಏರಿಕೆ ದಾಖಲಿಸಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 34,592ಕ್ಕೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 122 ಅಂಶ ಏರಿಕೆ ಕಂಡು 10, 681 ಅಂಶಗಳ ಗರಿಷ್ಠ ಮಟ್ಟವನ್ನು ತಲುಪಿತು.

ತ್ರೈಮಾಸಿಕದ ನಿರೀಕ್ಷೆ: 2017–18ನೇ ಆರ್ಥಿಕ ವರ್ಷದಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆ ಉತ್ತಮವಾಗಿರಲಿದೆ ಎನ್ನುವುದು ಹೂಡಿಕೆದಾರರ ವಿಶ್ವಾಸವಾಗಿದೆ.

ತ್ರೈಮಾಸಿಕದಲ್ಲಿ ಮೊದಲ ಫಲಿತಾಂಶ ಪ್ರಕಟಿಸಿದ್ದು ಟಿಸಿಎಸ್‌.  ಗುರುವಾರ ಹೊರಬಿದ್ದ  ಫಲಿತಾಂಶದಲ್ಲಿ ಕಂಪನಿಯ ನಿವ್ವಳ ಲಾಭ ಅಲ್ಪ ಇಳಿಕೆ ಕಾಣುವ ಮೂಲಕ ಹೂಡಿಕೆದಾರರ ನಿರೀಕ್ಷೆ ಹುಸಿಗೊಳಿಸಿತ್ತಾದರೂ ಉಳಿದ ಕಂಪನಿಗಳು ಉತ್ತಮ ಫಲಿತಾಂಶ ಪ್ರಕಟಿಸಲಿವೆ ಎನ್ನುವ ಬಲವಾದ ನಂಬಿಕೆಯಿಂದ ಹೂಡಿಕೆದಾರರು ಚಟುವಟಿಕೆ ನಡೆಸಿದರು. ಇದರಿಂದ ಸೂಚ್ಯಂಕಗಳು ಏರುಮುಖ ಚಲನೆಯಲ್ಲಿಯೇ ಸಾಗಿದವು ಎಂದು ತಜ್ಞರು ಹೇಳಿದ್ದಾರೆ.

ಎಚ್‌1ಬಿ ವೀಸಾ ನಿಯಮ ಬಿಗಿಗೊಳಿಸುವ ನಿರ್ಧಾರವನ್ನು ಅಮೆರಿಕ ಕೈಬಿಟ್ಟಿದೆ. ಎಚ್‌1ಬಿ ವೀಸಾ ಹೊಂದಿರುವವರನ್ನು ದೇಶ ತೊರೆಯುವಂತೆ ಮಾಡುವ ನಿರ್ಧಾರ ಇಲ್ಲ ಎಂದು ಸ್ಪಷ್ಟಪಡಿಸಿದೆ. ಇದೂ ಸಹ ಐ.ಟಿ ಕಂಪನಿಗಳ ಗಳಿಕೆ ಮೇಲೆ ಪ್ರಭಾವ ಬೀರಲಿದೆ.

ಫೆಬ್ರುವರಿ 1 ರಂದು ಕೇಂದ್ರ ಬಜೆಟ್‌ನಲ್ಲಿ ಆರ್ಥಿಕ ಸುಧಾರಣೆಯ ನಿಟ್ಟಿನಲ್ಲಿ ಹಲವು ನಿರ್ಧಾರಗಳು ಹೊರಬೀಳುವ ನಿರೀಕ್ಷೆ ವ್ಯಕ್ತವಾಗಿದೆ. ಈ ಅಂಶವೂ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟಿಗೆ ನೆರವಾಗುತ್ತಿದೆ.

ರಿಲಯನ್ಸ್‌, ಇನ್ಫೊಸಿಸ್‌, ಕೋಲ್‌ ಇಂಡಿಯಾ ಮತ್ತು ಐಟಿಸಿ ಕಂಪನಿ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry