ಸಮವಸ್ತ್ರ: 2 ವರ್ಷಗಳಿಗೆ ಈಗಲೇ ಟೆಂಡರ್‌

7
ಬಿಬಿಎಂಪಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ‌, ಶೂ ಹಾಗೂ ಬ್ಯಾಗ್‌ ವಿತರಣೆ

ಸಮವಸ್ತ್ರ: 2 ವರ್ಷಗಳಿಗೆ ಈಗಲೇ ಟೆಂಡರ್‌

Published:
Updated:
ಸಮವಸ್ತ್ರ: 2 ವರ್ಷಗಳಿಗೆ ಈಗಲೇ ಟೆಂಡರ್‌

ಬೆಂಗಳೂರು: ಬಿಬಿಎಂಪಿಯ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಹಾಗೂ ಬ್ಯಾಗ್‌ ವಿತರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಮುಂದಿನ 2 ವರ್ಷಗಳ ಟೆಂಡರ್‌ ಅನ್ನು ಈಗಲೇ ನೀಡಲಾಗಿದೆ.

ಎರಡು ಜೊತೆ ಸಮವಸ್ತ್ರ ವಿತರಿಸಲು ಅಂಕಿತ್‌ ಸಂಸ್ಥೆಗೆ ಹಾಗೂ ಎರಡು ಜೊತೆ ಶೂ ಮತ್ತು ಒಂದು ಬ್ಯಾಗ್‌ ವಿತರಿಸಲು ಲಿಬರ್ಟಿ ಸಂಸ್ಥೆಗೆ ಟೆಂಡರ್‌ ನೀಡಲಾಗಿದೆ. ಮಾರ್ಚ್‌ನಲ್ಲಿ ಕಾರ್ಯಾದೇಶ ನೀಡಲಿದ್ದು, ಜೂನ್‌ನಿಂದ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ ಎಂದು ಬಿಬಿಎಂಪಿ ಶಿಕ್ಷಣಾಧಿಕಾರಿ ಶಿವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಲಿಕೆಯು ಸಮವಸ್ತ್ರಗಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ನೀಡಬೇಕಿತ್ತು. ಆದರೆ, ಶೈಕ್ಷಣಿಕ ವರ್ಷ ಮುಗಿಯುವ ಹಂತಕ್ಕೆ ಬಂದಿದ್ದರೂ ವಿತರಿಸಿಲ್ಲ ಎಂದು ಶೈಕ್ಷಣಿಕ ಸ್ಥಾಯಿ ಸಮಿತಿಯ ಸದಸ್ಯೆ ಸವಿತಾ ಮಾಯಣ್ಣಗೌಡ ಇತ್ತೀಚೆಗೆ ಪಾಲಿಕೆ ಸಭೆಯಲ್ಲಿ ದೂರಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಹಾಗೂ ಬ್ಯಾಗ್‌ ವಿತರಿಸಲು ಕ್ರಮ ಕೈಗೊಂಡಿದ್ದಾರೆ. ಇನ್ನೂ ಶೇ 20ರಷ್ಟು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸುವುದು ಬಾಕಿ ಇದೆ.

ಶಿಕ್ಷಣ ಇಲಾಖೆಯು ಶೈಕ್ಷಣಿಕ ವರ್ಷದ ಆರಂಭದಲ್ಲೇ ಒಂದು ಜೊತೆ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ವಿತರಿಸಿದೆ. ಪಾಲಿಕೆ ವತಿಯಿಂದ ಬಣ್ಣದ ಹಾಗೂ ಬಿಳಿ ಬಣ್ಣದ ಸಮವಸ್ತ್ರ ವಿತರಣೆ ಮಾಡಬೇಕಿತ್ತು. ಇದಕ್ಕಾಗಿ ಟೆಂಡರ್‌ ಕರೆಯಲಾಗಿತ್ತು. ಪಾಂಚಜನ್ಯ ಹಾಗೂ ಅಂಕಿತ್‌ ಸಂಸ್ಥೆಗಳು ಟೆಂಡರ್‌ನಲ್ಲಿ ಪಾಲ್ಗೊಂಡಿದ್ದವು. ಕಡಿಮೆ ಮೊತ್ತ ನಿಗದಿ ಮಾಡಿದ್ದ ಪಾಂಚಜನ್ಯ ಸಂಸ್ಥೆಗೆ ಟೆಂಡರ್‌ ನೀಡಲಾಗಿತ್ತು. ಆದರೆ, ಈ ಮೊತ್ತಕ್ಕೆ ಸಮವಸ್ತ್ರ ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ಆ ಸಂಸ್ಥೆಯು ಕೊನೇ ಹಂತದಲ್ಲಿ ತಿಳಿಸಿತ್ತು ಎಂದು ಶಿವಣ್ಣ ತಿಳಿಸಿದರು.

ಪಾಂಚಜನ್ಯ ಸಂಸ್ಥೆಯು ನಮೂದಿಸಿದ್ದ ಮೊತ್ತಕ್ಕೇ ಸಮವಸ್ತ್ರ ವಿತರಿಸುವಂತೆ ಅಂಕಿತ್‌ ಸಂಸ್ಥೆಯ ಪ್ರತಿನಿಧಿಗಳಿಗೆ ಮನವಿ ಮಾಡಿದ್ದೆವು. ಆರಂಭದಲ್ಲಿ ಇದಕ್ಕೆ ಒಪ್ಪಲು ನಿರಾಕರಿಸಿದ್ದರು. ಮರು ಟೆಂಡರ್‌ ಕರೆಯುವುದಾಗಿ ತಿಳಿಸಿದ ಬಳಿಕ, ಒಪ್ಪಿಗೆ ಸೂಚಿಸಿದ್ದರು. ನವೆಂಬರ್‌ 27ರಂದು ಕಾರ್ಯಾದೇಶ ನೀಡಲಾಗಿತ್ತು. 60 ದಿನಗಳೊಳಗೆ ಸಮವಸ್ತ್ರ ವಿತರಿಸುವಂತೆ ಷರತ್ತು ವಿಧಿಸಲಾಗಿತ್ತು ಎಂದು ಹೇಳಿದರು.

***

ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮವಸ್ತ್ರ ವಿತರಣೆಯಲ್ಲಿ ವಿಳಂಬವಾಗಿತ್ತು. ಸಮವಸ್ತ್ರವನ್ನು ಇದೇ 27ರೊಳಗೆ ವಿತರಣೆ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.

–ಗಂಗಮ್ಮ, ಶೈಕ್ಷಣಿಕ ಸ್ಥಾಯಿ ಸಮಿತಿ ಅಧ್ಯಕ್ಷೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry