ಶಬ್ದ ನಿಯಂತ್ರಣ ವ್ಯವಸ್ಥೆ ಅಳವಡಿಸಲಿದೆ ಮೆಟ್ರೊ

7

ಶಬ್ದ ನಿಯಂತ್ರಣ ವ್ಯವಸ್ಥೆ ಅಳವಡಿಸಲಿದೆ ಮೆಟ್ರೊ

Published:
Updated:
ಶಬ್ದ ನಿಯಂತ್ರಣ ವ್ಯವಸ್ಥೆ ಅಳವಡಿಸಲಿದೆ ಮೆಟ್ರೊ

ಬೆಂಗಳೂರು: ‘ನಮ್ಮ ಮೆಟ್ರೊ’ ಸುರಂಗ ಮಾರ್ಗದ ರ‍್ಯಾಂಪ್‌ಗಳ ಬಳಿ ಶಬ್ದದ ತೀವ್ರತೆಯನ್ನು ಕಡಿಮೆಗೊಳಿಸುವ ವ್ಯವಸ್ಥೆಯನ್ನು ಅಳವಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂದಾಗಿದೆ.

ಹಸಿರು ಮಾರ್ಗದಲ್ಲಿ ಸುರಂಗದ ಉತ್ತರ ಮತ್ತು ದಕ್ಷಿಣ ರ‍್ಯಾಂಪ್‌ಗಳ ಬಳಿ ಶಬ್ದ ನಿಯಂತ್ರಣ ವ್ಯವಸ್ಥೆ ಅಳವಡಿಸಲು ನಿಗಮವು ಟೆಂಡರ್‌ ಆಹ್ವಾನಿಸಿದೆ. ಇದಕ್ಕೆ ₹ 44.46 ಲಕ್ಷ ವೆಚ್ಚವಾಗಲಿದೆ.

‘ವಿದ್ಯುಚ್ಚಾಲಿತ ಮೆಟ್ರೊ ರೈಲುಗಳು ಅತ್ಯಂತ ಕಡಿಮೆ ಶಬ್ದವನ್ನು ಉಂಟು ಮಾಡುತ್ತವೆ. ರೈಲು ಎತ್ತರಿಸಿದ ಮಾರ್ಗದಲ್ಲಿ ಹಾಗೂ ಸುರಂಗದಲ್ಲಿ ಸಾಗುವಾಗ ಅದರ ಸದ್ದಿನಿಂದ ಸಾರ್ವಜನಿಕರಿಗೆ ಅಷ್ಟೇನೂ ತೊಂದರೆ ಉಂಟಾಗುವುದಿಲ್ಲ. ಆದರೆ, ರ‍್ಯಾಂಪ್‌ ಬಳಿ ಸಾಗುವಾಗ ಶಬ್ದದ ಪ್ರಮಾಣ ಹೆಚ್ಚಾಗುತ್ತದೆ. ಇದರ ಪ್ರಮಾಣವನ್ನೂ ಕಡಿಮೆ ಮಾಡುವ ಉದ್ದೇಶದಿಂದ ನಾವು ರ‍್ಯಾಂಪ್‌ಗಳ ಬಳಿ ಶಬ್ದ ನಿಯಂತ್ರಣ ವ್ಯವಸ್ಥೆ ಅಳವಡಿಸಲು ಮುಂದಾಗಿದ್ದೇವೆ’ ಎಂದು ನಿಗಮದ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರ‍್ಯಾಂಪ್‌ಗಳ ಬಳಿ ಎತ್ತರಕ್ಕೆ ತಡೆ ಗೋಡೆಗಳನ್ನು ನಿರ್ಮಿಸಲಾಗುತ್ತದೆ. ಸಾಮಾನ್ಯವಾಗಿ ಪ್ಲಾಸ್ಟಿಕ್‌ನಂತಹ ಹಗುರ ಪದಾರ್ಥಗಳನ್ನು ಇದಕ್ಕೆ ಬಳಸುತ್ತಾರೆ. ಇದು ಶಬ್ದ ಮಾಲಿನ್ಯ ಕಡಿಮೆಯಾಗುವುದರ ಜೊತೆಗೆ ಹಳಿಯ ಸುರಕ್ಷತೆ ಕಾಪಾಡುವುದಕ್ಕೂ ಅನುಕೂಲವಾಗಲಿದೆ. ರ‍್ಯಾಂಪ್‌ಗಳ ಬಳಿ ಹಳಿಯತ್ತ ಯಾರೂ ಸುಳಿಯದಂತೆ ಇದು ತಡೆಯುತ್ತದೆ’ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry