ಕ್ಯಾಮೇನಹಳ್ಳಿಯಲ್ಲಿ ದನಗಳ ಜಾತ್ರೆ ಪ್ರಾರಂಭ

7

ಕ್ಯಾಮೇನಹಳ್ಳಿಯಲ್ಲಿ ದನಗಳ ಜಾತ್ರೆ ಪ್ರಾರಂಭ

Published:
Updated:
ಕ್ಯಾಮೇನಹಳ್ಳಿಯಲ್ಲಿ ದನಗಳ ಜಾತ್ರೆ ಪ್ರಾರಂಭ

ಕೊರಟಗೆರೆ: ತಾಲ್ಲೂಕಿನ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದನಗಳ ಜಾತ್ರೆ ಪ್ರಾರಂಭಗೊಂಡಿದ್ದು, ಸುತ್ತಮುತ್ತಲ ಗ್ರಾಮ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ ಹಾಗೂ ಇತರೆ ಜಿಲ್ಲೆಗಳಿಂದ ರಾಸುಗಳು ಬಂದು ಸೇರಿವೆ.

ಜನಮೇಜಯ ರಾಜರ ಕಾಲದಿಂದಲೂ ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಆಸುಪಾಸಿನಲ್ಲಿ ಜಾತ್ರೆ ನಡೆಯುತ್ತಿದೆ ಎಂಬುದು ಈ ಭಾಗದವರ ನಂಬಿಕೆ.  ಜಿಲ್ಲೆ ಮಾತ್ರವಲ್ಲದೇ ರಾಜ್ಯದಲ್ಲೆ ವಿವಿಧ ಭಾಗಗಳಿಂದಲೂ ರಾಸುಗಳನ್ನು ಕೊಳ್ಳಲು ಹಾಗೂ ಮಾರಟ ಮಾಡಲು ರೈತರು ಬರುತ್ತಾರೆ. ಎರಡು ದಿನಗಳಿಂದ ವಿವಿಧ ಕಡೆಗಳಿಂದ ರಾಸುಗಳು ಜಾತ್ರೆಗೆ ಬಂದು ಸೇರುತ್ತಿವೆ.

ಕಳೆದ ಮೂರು ನಾಲ್ಕು ವರ್ಷಗಳಿಂದ ಮಳೆ-ಬೆಳೆ ಸರಿಯಾಗಿ ಆಗದ ಕಾರಣ ಇಲ್ಲಿನ ದನಗಳ ಜಾತ್ರೆ ಕಳೆಗುಂದಿತ್ತು. ಆದರೆ ಈ ಬಾರಿ ಮಳೆ ಉತ್ತಮವಾಗಿದ್ದರಿಂದ ಬೆಳೆಗಳು ತಕ್ಕ ಮಟ್ಟಿಗೆ ಆಗಿವೆ. ಆ ಕಾರಣದಿಂದಾಗಿ ಜಾತ್ರೆಯಲ್ಲಿ ರೈತರು ತುಸು ಉತ್ಸುಕತೆಯಿಂದಲೇ ದನಗಳ ವ್ಯಾಪಾರದಲ್ಲಿ ತೊಡಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರ ವಹಿವಾಟು ಚುರುಕಾಗಿದೆ ಎಂದು ಜಾತ್ರೆಗೆ ಬಂದಿರುವ ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಈ ಭಾಗದ ಹಳ್ಳಿಕಾರ್ ಜಾತಿಯ ಎತ್ತುಗಳಿಗೆ ಬಹು ಬೇಡಿಕೆ ಇದೆ. ಆ ಕಾರಣದಿಂದಾಗಿ ರಾಜ್ಯದ ಬಳ್ಳಾರಿ, ಹೂವಿನಹಡಗಲಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಾವೇರಿ ಜಿಲ್ಲೆಗಳಿಂದ ರೈತರು ಜಾತ್ರೆಗೆ ಬಂದು ಎತ್ತುಗಳನ್ನು ಪ್ರತಿವರ್ಷ ಕೊಂಡೊಯ್ಯುತ್ತಾರೆ. ಈ ಬಾರಿ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ರೈತರು ದನಗಳನ್ನು ಕೊಳ್ಳಲು ಜಾತ್ರೆಯಲ್ಲಿ ಓಡಾಡುತ್ತಿದ್ದದ್ದು ಕಂಡು ಬಂತು.

ವರ್ಷದಿಂದ ವರ್ಷಕ್ಕೆ ಉತ್ತಮ ರಾಸುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಳ್ಳಿಗಾಡಿನ ಜನರು ಉದ್ಯೋಗ ಹರಿಸಿ ಪಟ್ಟಣದತ್ತ ಮುಖ ಮಾಡುತ್ತಿರುವ ಕಾರಣದಿಂದಾಗಿ ದನಗಳನ್ನು ಕಟ್ಟುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರೊಂದಿಗೆ ಸರಿಯಾಗಿ ಮಳೆ-ಬೆಳೆ ಇಲ್ಲದ ಕಾರಣಕ್ಕೂ ಕೆಲವರು ದನ–ಕರುಗಳನ್ನು ಸಾಕುವುದನ್ನು ಬಿಟ್ಟಿದ್ದಾರೆ ಎನ್ನುತ್ತಾರೆ  ರೈತರೊಬ್ಬರು.

ಠಈ ಭಾಗದ ಎತ್ತುಗಳು ಗಟ್ಟಿಮುಟ್ಟಾಗಿರುತ್ತವೆ. ವ್ಯವಸಾಯಕ್ಕೆ   ಯೋಗ್ಯವಾಗಿವೆ. ಆ ಕಾರಣಕ್ಕೆ ನಾವು ಈ ಜಾತ್ರೆಗೆ ಪ್ರತಿ ವರ್ಷ ಬಂದು ದನಗಳನ್ನು ಕೊಳ್ಳುತ್ತೇವೆ. ಒಮ್ಮೆ ಕೊಂಡ ಎತ್ತುಗಳನ್ನು ನಾವು ಐದಾರು ವರ್ಷ ಬೇಸಾಯಕ್ಕೆ ಬಳಸುತ್ತೇವೆ. ಉತ್ತಮ ರಾಸುಗಳು ಬೇಕಾಗಿದೆ ಹುಡುಕಾಟದಲ್ಲಿದ್ದೇವೆ. ದನಗಳು ಇನ್ನೂ ಬರುವ ನಿರೀಕ್ಷೆ ಇರುವುದರಿಂದ ಕಾದುಕುಳಿತ್ತಿದ್ದೇವೆ. ಆದರೆ ದನಗಳ ಸಂಖ್ಯೆಯೇ ಕಡಿಮೆಯಾಗಿದೆ’ ಎಂದು ಉತ್ತರ ಕರ್ನಾಟಕ ಭಾಗದ ರೈತರು ಹೇಳಿದರು. ಜಾತ್ರೆಯಲ್ಲಿ ಹಳ್ಳಿಕಾರ್ ಉತ್ತಮ ತಳಿಯ ಜೋಡಿ ಎತ್ತುಗಳು ₹ 50 ಸಾವಿರದಿಂದ ಸುಮಾರು ₹ 3 ಲಕ್ಷ ಮಾರಾಟಗೊಳ್ಳುತ್ತಿವೆ ಎಂದು ತಿಳಿಸಿದರು.

ಈ ಹಿಂದೆ ಮಳೆ ಇಲ್ಲದ್ದರಿಂದ ಮೇವಿನ ಅಭಾವವಿದೆ ಎಂಬ ಕಾರಣಕ್ಕೆ ಮನೆಯಲ್ಲಿದ್ದ ದನಗಳನ್ನು ಮಾರಿದ್ದವರು ಈ ಬಾರಿ ಉತ್ತಮ ಮಳೆಯಾದ್ದರಿಂದ ಮೇವು ಸಂಗ್ರಹಣೆ ಮಾಡಿಕೊಂಡು ಮತ್ತೆ ದನಗಳನ್ನು ಕೊಳ್ಳಲು ಉತ್ಸಾಹ ತೋರುತ್ತಿದ್ದಾರೆ. ಒಳ್ಳೆಯ ಎತ್ತುಗಳು ದುಬಾರಿಯಾಗಿರುವ ಕಾರಣ ಸಣ್ಣ ರೈತರು ಕಡಿಮೆ ಬೆಲೆಯ ಸಣ್ಣ-ಸಣ್ಣ ಕರುಗಳನ್ನೆ ಕೊಂಡುಕೊಳ್ಳುತ್ತಿದ್ದಾರೆ.

‘ದೊಡ್ಡ ದುಡ್ಡಿನ ಎತ್ತುಗಳನ್ನು ಕೊಳ್ಳಲು ನಮಗೆ ಶಕ್ತಿ ಇಲ್ಲ. ಈಗ ಸಣ್ಣ ಕರುಗಳನ್ನು ಕೊಂಡರೆ ಮುಂಗಾರು ಮಳೆ ಬರುವಷ್ಟರಲ್ಲಿ ಅವುಗಳನ್ನು ಚೆನ್ನಾಗಿ ಸಾಕಿದರೆ ಅವುಗಳಿಂದಲೇ ಬೇಸಾಯ ಮಾಡಬಹುದು’ ಎಂದು ಗೌರಿಬಿದನೂರಿನ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇತ್ಲಾಗಿನ್ ದನಾ ನೀಟ್

ಇತ್ಲಾಗಿನ್ ದನಾ ನೀಟ್ ಇರ್ತಾವು. ಒಮ್ಮೆ ಹೊಯ್ದವಂದ್ರೆ ಐದಾರ್ ವರ್ಸಾ ಬೇಸಾಯ ಮಾಡ್ತೇವು. ಕೆಲವೊಮ್ಮಿ ಹತ್ತ್ ವರ್ಸಾ ಆದ್ರೂ ಮಾರಂಗಿಲ್ಲ. ಈ ಎತ್ತುಗಳಾ ಹಂಗಾ ಜಗ್‌ ತಾವ್ರಿ.

ಬರಮಪ್ಪ, ರೈತ ಸುಣಕಲ್ಲುಬಿದರಿ, ರಾಣೆಬೆನ್ನೂರು ತಾಲ್ಲೂಕು

ರೇಟ್ ದುಬಾರಿ

ನಾವ್ ವ್ಯವಸಾಯಕ್ಕೆ ಅಂತ ಏನಿಲ್ರೀ, ಮನ್ಯಾಗ ಬಸವಣ್ಣ ಇರ್ಲಿ ಅಂತ ಸಾಕಾಕ ಜೋಡೆತ್ತು ಕೊಳ್ಳೋಣು ಅಂತ ಬಂದೀವ್ರೀ. ಯಾಪಾರ ಬಾಳ ಐತ್ರಿ. ರೇಟ್ ದುಬಾರಿ ಹೇಳಾಕತ್ಯಾರ. ನಮ್ಗ್ ಸೆಟ್ ಹಾಗೋ ಆಗೆ ಎತ್ತು ಹುಡ್ಕಕದಿವಿ.

ಶಿವಕೊಪ್ಪದ, ರೈತ, ತಿರುಮಲದೇವರಕೊಪ್ಪ, ಹಾವೇರಿ

ದನ ಮೇಯಿಸುವುದು ಈಗ ದುಬಾರಿ

ದನಗಳನ್ನು ಮೇಯಿಸುವುದು ಈಗ ದುಬಾರಿಯಾಗಿದೆ. ಪ್ರತಿ ದಿನ ಇಂಡಿ, ಬೂಸ ಇಡಬೇಕು. ಇವುಗಳ ಬೆಲೆ ಜಾಸ್ತಿಯಾಗಿದೆ. ಇಂಡಿ ಬೂಸ ಇಟ್ರೆ ದನ ಚೆನ್ನಾಗಿ ಮೈದುಂಬಿ ಬರ್ತಾವೆ. ನಮ್ಮ ಮನೆಯಿಂದ 12 ಜೋಡಿ ಎತ್ತುಗಳನ್ನು ಜಾತ್ರಗೆ ತಂದಿದ್ದೆ. ಅದರಲ್ಲಿ 1 ಜೋಡಿ ಮಾರಿದ್ದೇನೆ. ಎಲ್ಲ ಜೋಡಿ ಎತ್ತುಗಳು ₹ 1 ರಿಂದ 2 ಲಕ್ಷ ಬೆಲೆ ಬಾಳುವವೇ ಆಗಿವೆ. ರಾಸುಗಳ ಪಾಲನೆ ಯಾವುತ್ತೂ ನಷ್ಟ ಆಗುವುದಿಲ್ಲ.

ರಾಮಣ್ಣ, ರೈತ, ದಾಸರಪಾಳ್ಯ, ಸಾಸಲು ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry