ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಸಿಕೊಂಡರೆ ಇಂದಿಗೂ ನಗು

Last Updated 14 ಜನವರಿ 2018, 19:30 IST
ಅಕ್ಷರ ಗಾತ್ರ

ವರುಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಹಬ್ಬದ ಎಷ್ಟೋ ಕಾಡುವ ನೆನಪುಗಳಿವೆ ಬಾಲ್ಯದ ಬೊಕ್ಕಸದಲ್ಲಿ. ಈ ಹಬ್ಬವನ್ನು ಬಹಳ ಸಂಭ್ರಮದಿಂದ ಸ್ವಾಗತಿಸುತ್ತಿದ್ದೆವು. ಬೇಗನೆ ಎದ್ದು ಯಾವುದೋ ರಂಗೋಲಿ ಸ್ಪರ್ಧೆಯ ಸ್ಪರ್ಧಿಗಳಂತೆ ಮನೆಮುಂದೆ ಬಣ್ಣಬಣ್ಣದ ರಂಗೋಲಿ ಬಿಡಿಸುತ್ತಿದ್ದೆವು.

ನಂತರ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ದೇವರ ಮುಂದೆ ಪೂಜೆ ಸಲ್ಲಿಸುತ್ತಿದ್ದೆವು. ಗೋವುಗಳನ್ನು ಪೂಜಿಸಿ, ಅಮ್ಮ ಮಾಡಿದ ಸಿಹಿ ಪೊಂಗಲ್ ಮತ್ತು ಖಾರ ಪೊಂಗಲ್ ಅವುಗಳಿಗೆ ತಿನ್ನಿಸಿದ ನಂತರ ನಾವು ತಿನ್ನುತ್ತಿದ್ದೆವು. ಹಬ್ಬಕ್ಕೆ ಮೆರುಗು ನೀಡುವ ಮತ್ತೊಂದು ವಿಶೇಷತೆ ಎಂದರೆ ಎಳ್ಳು ಬೆಲ್ಲ. ನನ್ನಮ್ಮ ವಾರದ ಮುಂಚೆಯೇ ಕೊಬ್ಬರಿ, ಬೆಲ್ಲ ಹೆಚ್ಚಿ, ಹುರಿಗಡಲೆ, ಕಡಲೆ ಬೀಜ, ಎಳ್ಳು ಬೆರೆಸಿ ತಯಾರು ಮಾಡುತ್ತಿದ್ದರು. ಇವೆಲ್ಲವನ್ನೂ ಮಕ್ಕಳಿಗೆ ಮತ್ತು ಇರುವೆಗಳ ಕೈಗೆ ಸಿಗದಂತೆ ಕಾಪಾಡಿಕೊಳ್ಳಲು ಅಮ್ಮ ಹರಸಾಹಸ ಪಡುತ್ತಿದ್ದಳು.

ಅಮ್ಮ ಹಬ್ಬಕ್ಕಾಗಿಯೇ ತೆಗೆದಿದ್ದ ಬೆಳ್ಳಿ ಕುಂಕುಮ ಬಟ್ಟಲುಗಳಲ್ಲಿ ಅರಿಶಿನ ಮತ್ತು ಕುಂಕುಮ ತುಂಬಿಡುತ್ತಿದ್ದರು. ಈ ಬಟ್ಟಲುಗಳನ್ನು ಇಡಲು ಬೆಳ್ಳಿ ತಟ್ಟೆ. ಒಂದು ಬ್ಯಾಗಿನಲ್ಲಿ ಎಲೆ, ಅಡಿಕೆ, ಹೂವು, ಬಾಳೆಹಣ್ಣು, ಎಳ್ಳು ಬೆಲ್ಲದ ಪ್ಯಾಕೆಟ್, ಕಬ್ಬಿನ ತುಂಡು ಇರುತ್ತಿದ್ದವು. ನಮ್ಮದು ಪುಟ್ಟ ಗ್ರಾಮವಾದ್ದರಿಂದ ಅರ್ಧ ಊರಿಗೆ ಎಳ್ಳು ಬೆಲ್ಲ ಹಂಚುತ್ತಿದ್ದೆವು. ಸಂಜೆಯಾಗುತ್ತಿದ್ದಂತೆ ನನ್ನಮ್ಮನಿಗೆ ಒಂದು ಸಂದಿಗ್ಧ ಪರಿಸ್ಥಿತಿ ಎದುರಾಗುತ್ತಿತ್ತು. ಅದೇನೆಂದರೆ ಎಳ್ಳು ಬೆಲ್ಲ ಹಂಚುವಾಗ ಯಾರು ಬೆಳ್ಳಿ ತಟ್ಟೆ ಹಿಡಿದುಕೊಳ್ಳಬೇಕು ಮತ್ತು ಯಾರು ಬ್ಯಾಗ್ ಹಿಡಿದುಕೊಳ್ಳಬೇಕು ಎಂಬ ನಿರ್ಧಾರ ಕೈಗೊಳ್ಳುವುದು. ನಾನು ಮತ್ತು ನನ್ನ ಅಕ್ಕನನ್ನು ಈ ವಿಚಾರದಲ್ಲಿ ಒಪ್ಪಿಸುವುದು ಅಮ್ಮನಿಗೆ ಕಷ್ಟದ ಸಂಗತಿಯಾಗಿತ್ತು.

ಏಕೆಂದರೆ ನಮ್ಮ ಪ್ರಕಾರ ಬೆಳ್ಳಿ ತಟ್ಟೆ ಹಿಡಿದು ಕುಂಕುಮ ಮತ್ತು ಎಳ್ಳನ್ನು ಕೊಡುವವರು ಮುಖ್ಯ ಭೂಮಿಕೆಯಲ್ಲಿರುತ್ತಾರೆ. ಬ್ಯಾಗನ್ನು ಹಿಡಿದುಕೊಂಡು ಅವರ ಹಿಂದೆ ನಡೆಯುವವರು ಸೈಡ್‌ವಿಂಗ್‌ನಲ್ಲಿರುತ್ತಾರೆ. ಇದು ನಮ್ಮ ಆ ವಯಸ್ಸಿನ ತಿಳಿವಳಿಕೆ. ಅಂತೂ ನಾನು ಚಿಕ್ಕವಳು ಕುಂಕುಮ ಬಟ್ಟಲು ಹಿಡಿದುಕೊಂಡರೆ ಕುಂಕುಮ ಚೆಲ್ಲಿ ಹೋಗುತ್ತದೆ ಅದು ಅಶುಭದ ಸಂಕೇತ ಆದ್ದರಿಂದ ಅಕ್ಕನೇ ಪ್ಲೇಟ್ ತೆಗೆದುಕೊಂಡು ಹೋಗಲಿ ಎಂದು ನನ್ನನ್ನು ಸಂತೈಸುವಲ್ಲಿ ಅಮ್ಮ ಯಶಸ್ವಿಯಾಗುತ್ತಿದ್ದಳು. ಆದರೂ ಕೊನೆಗೊಂದು ದಿನ ನನ್ನ ತಾಳ್ಮೆಯ ಕಟ್ಟೆಯೊಡೆದು ಅಕ್ಕನೊಂದಿಗೆ ಜಗಳವಾಡಿ ಅರಿಶಿನ ಕುಂಕುಮದ ತಟ್ಟೆಯನ್ನು ಹಿಡಿದು ಜಗ್ಗಾಡಿದ ಕಾರಣ ತಟ್ಟೆ ಕೆಳಕ್ಕೆ ಬಿದ್ದು ಅರಿಶಿಣ ಕುಂಕುಮ ಎಲ್ಲ ಚೆಲ್ಲಿದ್ದು ಉಂಟು. ಆಗ ಅಮ್ಮನಿಗೆ ತಿಳಿದರೆ ಹೊಡೆಯುತ್ತಾಳೆ ಎಂದು ಗಲಿಬಿಲಿಗೊಂಡು, ಪಕ್ಕದ ಮನೆಯ ಆಂಟಿಯ ಮನೆಯಲ್ಲಿ ಅರಿಶಿನ ಕುಂಕುಮ ಹಾಕಿಸಿಕೊಂಡು ಎಲ್ಲರಿಗೂ ಹಂಚಿಬಿಟ್ಟಿದ್ದೆವು.

ನಮ್ಮ ಸಂಭ್ರಮವೆಲ್ಲ ಮುಗಿದ ನಂತರ ಸಂಜೆ ಹೊತ್ತಿಗೆ ಮತ್ತೊಂದು ಸಂಭ್ರಮ ಶುರುವಾಗುತ್ತಿತ್ತು. ಅದೇನೆಂದರೆ ನಮ್ಮನೆಯ ಗೋವುಗಳನ್ನು ಮದುಮಕ್ಕಳಂತೆ ಅಲಂಕರಿಸಿ ಊರಿನ ಮುಖ್ಯಬೀದಿಗಳಲ್ಲಿ ಬೆಂಕಿ ಹಚ್ಚಿಸಿ ಗೋವುಗಳನ್ನು ಅದರ ಮೇಲೆ ಹಾರಿಸುತ್ತಿದ್ದರು. ಇದನ್ನು ಹಳ್ಳಿಯ ಕಡೆಯಲ್ಲಿ ಕಿಚಾಯಿಸುವುದು ಎಂದು ಹೇಳುತ್ತಾರೆ. ಆ ಸಂಭ್ರಮದಲ್ಲಿ ಒಂದು ಬಾರಿ ನನ್ನಕ್ಕ ಕಾಣೆಯಾಗಿದ್ದು ಉಂಟು ಎಲ್ಲರೂ ಆತಂಕಕ್ಕೊಳಗಾಗಿದ್ದರು. ಆದರೆ ನನ್ನಮ್ಮನ ಆತಂಕವೇ ಬೇರೆಯದಾಗಿತ್ತು. ಏಕೆಂದರೆ ಆ ದಿನ ಅವಳು ಚಿನ್ನದ ಒಡವೆಗಳನ್ನು ಧರಿಸಿದ್ದಳು ಯಾರೋ ಅವಳನ್ನು ಕಿಡ್ನಾಪ್ ಮಾಡಿರಬೇಕು ಎಂದೆಲ್ಲ ಯೋಚಿಸಿ ತಲ್ಲಣಗೊಂಡಿದ್ದೆವು.

ನಂತರ ಅವಳ ಸ್ನೇಹಿತೆಯೊಡನೆ ಮನೆಗೆ ಮನೆಗೆ ಬಂದದ್ದನ್ನು ನೋಡಿ ನಗು ಮತ್ತು ಅಳು ಒಮ್ಮೆಲೆ ಬಂದಿತ್ತು. ಈಗ ಆ ದಿನಗಳನ್ನು ನೆನಸಿಕೊಂಡರೆ ಮೊಗದಲ್ಲಿ ನಗು ಅರಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT