145 ಜೋಡಿಗಳಿಗೆ ಕಂಕಣಭಾಗ್ಯ

7

145 ಜೋಡಿಗಳಿಗೆ ಕಂಕಣಭಾಗ್ಯ

Published:
Updated:
145 ಜೋಡಿಗಳಿಗೆ ಕಂಕಣಭಾಗ್ಯ

ಮೈಸೂರು: ನಂಜನಗೂಡು ತಾಲ್ಲೂಕಿನ ಸುತ್ತೂರು ಕ್ಷೇತ್ರದಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ನಡೆದ ಸಾಮೂಹಿಕ ವಿವಾಹದಲ್ಲಿ 145 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು.

12 ಅಂತರ್ಜಾತಿ ವಿವಾಹದ ಜತೆಗೆ, ಅಂಗವಿಕಲರು ಮತ್ತು ವಿಧುರ–ವಿಧವೆಯರೂ (ತಲಾ ಮೂರು ಜೋಡಿ) ಹಸೆಮಣೆ ಏರಿದರು. ಪರಿಶಿಷ್ಟ ಜಾತಿಗೆ ಸೇರಿದ 84 ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 8 ಜೋಡಿಗಳ ಮದುವೆ ನಡೆಯಿತು. ತಮಿಳುನಾಡಿನ ಐದು ಜೋಡಿಗಳೂ ಹಸೆಮಣೆ ಏರಿದವು.

ಸುತ್ತೂರು ಜಾತ್ರೆಯ ಅಂಗವಾಗಿ ಪ್ರತಿವರ್ಷ ನಡೆಯುವ ಸಾಮೂಹಿಕ ವಿವಾಹದಲ್ಲಿ ಇದುವರೆಗೆ 2,464 ಜೋಡಿಗಳು ಹಸೆಮಣೆ ಏರಿವೆ. ಕಳೆದ ಬಾರಿ 159 ಜೋಡಿಗಳಿಗೆ ಕಂಕಣಭಾಗ್ಯ ಲಭಿಸಿತ್ತು.

ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಾರಿಷಸ್‌ ಉಪಾಧ್ಯಕ್ಷ ಪರಮಶಿವಂ ಪಿಳ್ಳೈ ವ್ಯಾಪೂರಿ ಮಾತನಾಡಿ, ‘ಭಾರತದಲ್ಲಿ ಮದುವೆಗಳು ಆಡಂಬರದಿಂದ ನಡೆಯುತ್ತವೆ. ಹೆಚ್ಚಿನವರು ಮದುವೆಗಾಗಿ ಸಾಲ ಮಾಡಿ ಅದನ್ನು ತೀರಿಸಲು ಜೀವನವಿಡೀ ಕಷ್ಟಪಡುವರು. ಸಾಲದ ಹೊರೆಯಿಂದ ನೆಮ್ಮದಿಯ ಬದುಕು ಸಾಧ್ಯವಾಗುವುದಿಲ್ಲ’ ಎಂದರು.

‘ಇಲ್ಲಿ ನಡೆದಿರುವ ಸರಳ ಮತ್ತು ಸಾಮೂಹಿಕ ವಿವಾಹ ಎಲ್ಲರಿಗೂ ಮಾದರಿಯಾಗಿದೆ. ನೀವು ಮದುವೆಗಾಗಿ ಹಣ ಕೂಡಿಟ್ಟಿದ್ದರೆ ಅದು ಭವಿಷ್ಯದಲ್ಲಿ ಉಪಯೋಗಕ್ಕೆ ಬರಬಹುದು’ ಎಂದು ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ನವಜೋಡಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಹಾರಕೂಡ ಚನ್ನಬಸವೇಶ್ವರ ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಮತ್ತು ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಶುಭ ಸಂದೇಶ ನೀಡಿದರು. ವಧು–ವರರ ಕುಟುಂಬ ಸದಸ್ಯರಲ್ಲದೆ, ಜಾತ್ರೆಯಲ್ಲಿ ನೆರೆದಿದ್ದ ಸಾವಿರಾರು ಮಂದಿ ಸಾಮೂಹಿಕ ವಿವಾಹ ಸಂಭ್ರಮದಲ್ಲಿ ಭಾಗಿಯಾದರು.

ಪರಿಶಿಷ್ಟ ಜಾತಿಯ 84 ಜೋಡಿಗಳು

ಇದುವರೆಗೆ ಒಟ್ಟು 2,464 ಜೋಡಿಗಳಿಗೆ ವಿವಾಹ

ಇಂದು ಮಹಾರಥೋತ್ಸವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry