ಸಿದ್ದರಾಮಯ್ಯ ಅವರನ್ನು ಗೆಲ್ಲಲು ಬಿಡಲ್ಲ: ಈಶ್ವರಪ್ಪ

7

ಸಿದ್ದರಾಮಯ್ಯ ಅವರನ್ನು ಗೆಲ್ಲಲು ಬಿಡಲ್ಲ: ಈಶ್ವರಪ್ಪ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸಿದರೂ ಅವರನ್ನು ಗೆಲ್ಲಲು ಬಿಡುವುದಿಲ್ಲ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

‘ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಡುಪ್ಲಿಕೇಟ್‌ ಮತ್ತು ದೋಖಾ ನಾಯಕ. ಈ ವರ್ಗಕ್ಕೆ ಏನೂ ಮಾಡದೇ, ಚಾಂಪಿಯನ್ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ಅವರು ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಹಿಂದುಳಿದ ವರ್ಗಗಳ ವಿಶೇಷ ಸಭೆಯಲ್ಲಿ ಲೇವಡಿ ಮಾಡಿದರು.

ಸಿದ್ದರಾಮಯ್ಯ ಧರ್ಮ–ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹಲವು ಹಿಂದು ಯುವಕರ ಹತ್ಯೆ ಆಗಿದೆ. ಸಾಂತ್ವನ ಹೇಳಲು ಒಬ್ಬರ ಮನೆಗಾದರೂ ಹೋಗಿದ್ದಾರಾ? ಆದರೆ, ಮುಸ್ಲಿಮರು ನಿಧನರಾದರೆ ತಕ್ಷಣವೇ ಅಲ್ಲಿಗೆ ಹೋಗುತ್ತಾರೆ. ಜನರು ಏನಾದರೂ ಅಂದುಕೊಳ್ಳುತ್ತಾರೆ ಎಂಬ ಕಾರಣಕ್ಕೆ ದೀಪಕ್‌ರಾವ್‌ ಮನೆಗೆ ಭೇಟಿ ಕೊಟ್ಟರು ಎಂದರು.

ಹುಚ್ಚರಂತೆ ವರ್ತಿಸುತ್ತಿದ್ದಾರೆ:

ಬಿಜೆಪಿ ಮತ್ತು ಆರ್‌ಎಸ್ಎಸ್‌ ಜನರ ಹೃದಯದಲ್ಲಿ ದೇಶ ಭಕ್ತಿ ಬೆಳೆಸುವ ಸಂಘಟನೆಗಳು. ಆದರೆ, ಸಿದ್ದರಾಮಯ್ಯ ಈ ಸಂಘಟನೆಗಳನ್ನು ಉಗ್ರವಾದಿ ಸಂಘಟನೆಗಳು ಎಂದು ಕರೆದಿದ್ದಾರೆ. ಇದರ ಬಗ್ಗೆ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.

ಒಮ್ಮೆ ಉಗ್ರವಾದಿಗಳು ಎಂದು ಕರೆದು ಬಳಿಕ ಆ ರೀತಿ ಮಾತನಾಡಿಯೇ ಇಲ್ಲ ಎಂದು ಉಲ್ಟಾ ಹೊಡೆಯುತ್ತಾರೆ. ಇಂತಹವರನ್ನು ಹುಚ್ಚ ಎನ್ನದೇ ಇನ್ನೇನು ಹೇಳಲು ಸಾಧ್ಯ. ದಿನೇಶ್‌ಗುಂಡೂರಾವ್‌ ಅವರೂ ಹುಚ್ಚರಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ದಾರಾಸಿಂಗ್‌  ಚೌಹಾಣ್ ಮಾತನಾಡಿ, ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಮಸೂದೆ ವಿರೋಧಿಸುವ ಮೂಲಕ ಕಾಂಗ್ರೆಸ್‌ ಹಿಂದುಳಿದ ವರ್ಗಗಳಿಗೆ ದ್ರೋಹ ಬಗೆದಿದೆ ಎಂದು ಟೀಕಿಸಿದರು.

ಓಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಲು ಬಿಜೆಪಿ ಪ್ರಯತ್ನಿಸಿತು. ಲೋಕಸಭೆಯಲ್ಲಿ ಈ ಮಸೂದೆಗೆ ಒಪ್ಪಿಗೆ ಸಿಕ್ಕಿತು. ಆದರೆ, ರಾಜ್ಯಸಭೆಯಲ್ಲಿ ನಮಗೆ ಬಹುಮತ ಇಲ್ಲದ ಕಾರಣ ಅಲ್ಲಿ ಒಪ್ಪಿಗೆ ದೊರಕಿಸಲು ಕಾಂಗ್ರೆಸ್‌ ಬಿಡಲಿಲ್ಲ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ಸಿಕ್ಕರೆ,  ಬಡವರ ಮಕ್ಕಳು ವೈದ್ಯರು, ಎಂಜಿನಿಯರ್‌ ಆಗುತ್ತಾರೆ. ಆದರೆ, ಕಾಂಗ್ರೆಸ್‌ಗೆ ಅದು ಬೇಕಿಲ್ಲ ಎಂದು ಅವರು ಹೇಳಿದರು.

ಟಿಕೆಟ್‌ಗಾಗಿ ದುಂಬಾಲು:

ಚುನಾವಣೆಯಲ್ಲಿ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿ ಓಬಿಸಿ ಮೋರ್ಚಾದ ವಿವಿಧ ಜಿಲ್ಲೆಗಳ ನಾಯಕರು ದಾರಾಸಿಂಗ್ ಚೌಹಾಣ್‌ ಅವರನ್ನು ಕಾಡಿಬೇಡಿದರು. ‘ನಾವು ಪಕ್ಷಕ್ಕಾಗಿ ದುಡಿದ್ದಿದ್ದೇವೆ. ಜೈಲಿಗೂ ಹೋಗಿದ್ದೇವೆ. ರಾಜ್ಯ ಘಟಕದ ನಾಯಕರು ತಮಗೆ ಬೇಕಾದವರಿಗೆ ಮಾತ್ರ ಟಿಕೆಟ್‌ ನೀಡುತ್ತಿದ್ದಾರೆ. ಹಿಂದುಳಿದವರನ್ನು ಕೇಳುತ್ತಿಲ್ಲ. ನೀವಾದರೂ ನ್ಯಾಯ ಕೊಡಿಸಿ’ ಎಂದು ಪರಿಪರಿಯಾಗಿ ಬೇಡಿಕೊಂಡರು. ಆಗ ಮಧ್ಯಪ್ರವೇಶಿಸಿದ ಕೆ.ಎಸ್‌.ಈಶ್ವರಪ್ಪ, ‘ನಿಮ್ಮ ಮನವಿಯನ್ನು ರಾಜ್ಯ ಘಟಕದ ಅಧ್ಯಕ್ಷರ ಗಮನಕ್ಕೆ ತನ್ನಿ’ ಎಂದರು. ಆಗಲೂ ಗಲಾಟೆ ನಿಲ್ಲದಿದ್ದಾಗ, ಸಭೆಗೆ ತೆರೆ ಎಳೆದರು.

ಗೋವಾದ ನೀರಾವರಿ ಸಚಿವರು ಕನ್ನಡಿಗರ ಬಗ್ಗೆ ಹರಾಮಿಗಳೆಂದು ಕರೆದಿರುವುದು ಮುಠ್ಠಾಳತನದ ಹೇಳಿಕೆ

ಕೆ.ಎಸ್.ಈಶ್ವರಪ್ಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry