ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಕಾರಿಗೆ ಕಲ್ಲು

7

ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಕಾರಿಗೆ ಕಲ್ಲು

Published:
Updated:
ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಕಾರಿಗೆ ಕಲ್ಲು

ಹಾವೇರಿ: ಚೌಡಯ್ಯದಾನಪುರದಲ್ಲಿನ ಅಂಬಿಗರ ಚೌಡಯ್ಯನವರ ಐಕ್ಯಮಂಟಪಕ್ಕೆ ಭಾನುವಾರ ಪೂಜೆ ಸಲ್ಲಿಸಲು ತೆರಳಿದ್ದ, ನರಸೀಪುರದ ಅಂಬಿಗರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ. ಅಲ್ಲದೇ ಪೀಠದ ಧರ್ಮದರ್ಶಿ ಕೃಷ್ಣಮೂರ್ತಿ ವಡ್ನಿಕೊಪ್ಪ ಅವರ ಮೇಲೆ ಹಲ್ಲೆ ನಡೆದಿದೆ.

ಗ್ರಾಮದ ಒಡೆಯರ ಸಂಸ್ಥಾನ ಮಠದ ಐಕ್ಯಮಂಟಪದಲ್ಲಿ ಶಾಂತಭೀಷ್ಮ ಸ್ವಾಮೀಜಿ ಪೂಜೆ ಸಲ್ಲಿಸಲು ಮುಂದಾದಾಗ, ಕೆಲ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದನ್ನು ಪ್ರಶ್ನಿಸಿದ ಧರ್ಮದರ್ಶಿಯ ಮೇಲೂ ಹಲ್ಲೆ ನಡೆಸಿದರು. ಅಲ್ಲದೇ ಸ್ವಾಮೀಜಿ ಕಾರಿನ ಮೇಲೆ ಕಲ್ಲು ತೂರಿದರು.

‘ಒಡೆಯರ ಮಠದ ಭಕ್ತರು ಎಂದು ಹೇಳಿಕೊಂಡವರು ಹಲ್ಲೆ ನಡೆಸುತ್ತಿದ್ದರೂ ಅಲ್ಲಿಯೇ ಇದ್ದ ಚಿತ್ರಶೇಖರ ಒಡೆಯರ ಸ್ವಾಮೀಜಿ ಮೌನವಾಗಿ ವೀಕ್ಷಿಸುತ್ತಿದ್ದರು. ಹೀಗಾಗಿ ಅವರ ಕುಮ್ಮಕ್ಕಿನ ಸಂಶಯ ಕಾಡುತ್ತಿದೆ’ ಎಂದು ಧರ್ಮದರ್ಶಿ ಕೃಷ್ಣಮೂರ್ತಿ ವಡ್ನಿಕೊಪ್ಪ ದೂರಿದರು.

‘ಶಾಂತಭೀಷ್ಮ ಸ್ವಾಮೀಜಿಗಳು ಗಂಗಾಮತ ಸಮಾಜದ ಗುರುಗಳು. ಶೂದ್ರ ಸಮುದಾಯವನ್ನು ಪ್ರತಿನಿಧಿಸುತ್ತಾರೆ ಎಂಬ ಕಾರಣಕ್ಕೆ ಪೂಜೆ ಸಲ್ಲಿಸಲು ಅವಕಾಶ ನಿರಾಕರಿಸಲಾಗಿದೆ. ಅಲ್ಲದೇ, ಕೆಲ ಗಂಗಾಮತಸ್ಥರನ್ನೇ ಮುಂದೆ ಬಿಡುವ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ’ ಎಂದು ಗುರುಪೀಠದ ಕಾರ್ಯಾಧ್ಯಕ್ಷ ಬಸವರಾಜ ಸಪ್ಪನಗೋಳ ಆರೋಪಿಸಿದರು.

ಮಾಹಿತಿ ನೀಡಿರಲಿಲ್ಲ: ಎಸ್ಪಿ

ಈ ಹಿಂದೆ ಗ್ರಾಮಸ್ಥರು ಹಾಗೂ ಮಠದ ಭಕ್ತರ ಜೊತೆ ಮಾತುಕತೆ ನಡೆಸಿದ ಜಿಲ್ಲಾಡಳಿತವು ಸ್ವಾಮೀಜಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಆದರೆ, ಭಾನುವಾರ ಪೂಜೆ ಸಲ್ಲಿಸಲು ತೆರಳುವ ಕುರಿತು ಮಠದಿಂದ ಮಾಹಿತಿ ನೀಡಿರಲಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ತಿಳಿಸಿದ್ದಾರೆ.

ಐಕ್ಯಮಂಟಪಕ್ಕೆ ಪೂಜೆ ಸಲ್ಲಿಸಲು ಕೆಲ ಹಿತಾಸಕ್ತಿಗಳು ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದರು. ಆದರೆ, ಭಾನುವಾರ ನಡೆದ ಅತಿರೇಖದ ಘಟನೆಯು ಮನಸ್ಸಿಗೆ ನೋವುಂಟು ಮಾಡಿದೆ

ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry