ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾರ್ಥಿವೇತನವೂ ಇಲ್ಲ: ಶೂ ಭಾಗ್ಯವೂ ಇಲ್ಲ’

ಅಂಬಡಗಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳ ಅಳಲು
Last Updated 15 ಜನವರಿ 2018, 5:36 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ ಶಾಖೆಯಲ್ಲಿ ಪಾಲಕರೊಂದಿಗೆ ಸೇರಿ ಜಂಟಿ ಉಳಿತಾಯ ಖಾತೆ ತೆರೆದಿದ್ದೇವೆ. ಸರ್ಕಾರದ ಎಲ್ಲ ನಿಯಮ ಪಾಲಿಸಿದ್ದರೂ ವಿದ್ಯಾರ್ಥಿವೇತನ ಕೈಸೇರಿಲ್ಲ’ ಎಂದು ತಾಲ್ಲೂಕಿನ ಅಂಬಡಗಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಶನಿವಾರ ಅಳಲು ತೋಡಿಕೊಂಡರು.

‘ಐದಾರು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ. ವಿದ್ಯಾರ್ಥಿವೇತನ ಪಡೆಯಲು ನಾವೇನು ಮಾಡಬೇಕು ಹೇಳಿ’ ಎಂದು 7ನೇ ತರಗತಿಯ ಗಂಗಮ್ಮ ಹಿತ್ತಲಮನಿ, ಸಹನಾ ನೇಗಿನಹಾಳ, ಪ್ರಿಯಾಂಕಾ ದುರ್ಗಣ್ಣವರ, ಈರಣ್ಣ ಲಕ್ಕುಂಡಿ ಪ್ರಶ್ನಿಸಿದರು.

‘ಆನ್‌ಲೈನ್‌ ವ್ಯವಸ್ಥೆ ಜಾರಿಗೆ ಬರುವ ಮೊದಲು ಗಂಟೆಗಟ್ಟಲೇ ಸರತಿಯಲ್ಲಿ ಪಾಲಕರೊಂದಿಗೆ ನಿಂತು ಫಾರ್ಮ್‌ ಪಡೆದುಕೊಂಡೆವು. ಕೇಳಿದ ದಾಖಲಾತಿ ನೀಡಿ ಜಂಟಿ ಉಳಿತಾಯ ಖಾತೆ ತೆರೆದೆವು. ಈಗ ನೋಡಿದರೆ ನಮ್ಮೆಲ್ಲ ಶ್ರಮ ಹಾಳಾಗಿ ಹೋಯಿತೆಲ್ಲ ಎಂಬ ನೋವು ಕಾಡುತ್ತಿದೆ’ ಎಂದು ಅಳಲು ತೋಡಿಕೊಂಡರು. ‘ಮೊದಲು ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಹೆಸರಿನಲ್ಲಿ ವಿದ್ಯಾರ್ಥಿವೇತನದ ಹಣ ಜಮೆ ಆಗುತ್ತಿತ್ತು. ಅನಂತರ ಬಂದ ಆನ್‌ಲೈನ್‌ ವ್ಯವಸ್ಥೆ ಪಾಲಕರು ಸೇರಿ
ದಂತೆ ಮಕ್ಕಳನ್ನು ಹೈರಾಣಾಗಿಸಿದೆ’ ಎಂದು ಸತೀಶ ಜಾರಕಿಹೊಳಿ ಅಭಿಮಾನಿ ಬಳಗದ ಅಧ್ಯಕ್ಷರೂ ಆಗಿರುವ ಎಸ್‌ಡಿಎಂಸಿ ಅಧ್ಯಕ್ಷ ಹಬೀಬ್‌ ಶಿಲೇದಾರ್ ದೂರಿದರು.

‘ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ವಿದ್ಯಾರ್ಥಿ ವೇತನ ಮಂಜೂರಾದ ಬಗ್ಗೆ ಅಧಿಕೃತ ಪತ್ರ ಬಂದಿರುವುದನ್ನು ಖಚಿತ
ಪಡಿಸುತ್ತಾರೆ. ಬ್ಯಾಂಕಿಗೆ ಹೋಗಿ ವಿಚಾರಿಸಿದರೆ ವಾಸ್ತವವಾಗಿ ದುಡ್ಡು ಜಮೆ ಆಗಿರುವುದಿಲ್ಲ. ಸರ್ಕಾರಿ ಇಲಾಖೆಯೊಂದರ ವ್ಯವಸ್ಥೆಯೇ ಹೀಗಾದರೆ ಯಾರಿಗೆ ದೂರಬೇಕು’ ಎಂದು ಪ್ರಶ್ನಿಸಿದರು.

‘ಇಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ 58 ವಿದ್ಯಾರ್ಥಿಗಳಿಗೆ ಇನ್ನೂ ‘ಶೂ ಭಾಗ್ಯ’ ದೊರೆತಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುತ್ತಾ ಬರುತ್ತಿದೆ. ರಜೆ ಬಂದಾಗ ಕೊಡುವ ಹೊಸ ಶೂ ಮತ್ತು ಸಾಕ್ಸ್‌ಗಳನ್ನು ಹಾಕಿಕೊಂಡು ಹೊಲಕ್ಕೆ ಹೋಗಬೇಕೆ’ ಎಂದು ಕೇಳಿದರು.

‘ಸರ್ಕಾರಿ ಯೋಜನೆಗಳು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪುವೆಯೇ ಎಂದು ನೋಡಿಕೊಳ್ಳುವ ಉಸ್ತುವಾರಿಯೂ ಇಲ್ಲವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಮುಖ್ಯಶಿಕ್ಷಕ ಎಂ.ಕೆ. ಹಾದಿಮನಿ, ‘ಶೂಗಳ ಖರೀದಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಕಡಿಮೆ ಹಣ ದೊರೆತಿತ್ತು. ಹೀಗಾಗಿ, ಕೆಲವರಿಗೆ ಒದಗಿಸಲು ಆಗಿಲ್ಲ. ಈಗ ಹಣ ಹೊಂದಿಸಲಾಗಿದೆ. ವಾರದೊಳಗೆ ವಿತರಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT