ಕಾಫಿ ಇಳುವರಿ ಗಣನೀಯ ಕುಸಿತ

5
ಫಸಲೇ ಇಲ್ಲದೆ ಬರಿದಾದ ಗಿಡಗಳು * ರೈತರ ಅಳಲು

ಕಾಫಿ ಇಳುವರಿ ಗಣನೀಯ ಕುಸಿತ

Published:
Updated:
ಕಾಫಿ ಇಳುವರಿ ಗಣನೀಯ ಕುಸಿತ

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಹವಾಮಾನ ವೈಪರೀತ್ಯವು ಈ ಬಾರಿ ಕಾಫಿ ಫಸಲಿನ ಮೇಲೂ ದುಷ್ಪರಿಣಾಮ ಬೀರಿದೆ. ಕಾಫಿ ಗಿಡಗಳು ಫಸಲೇ ಇಲ್ಲದೆ ಬರಿದಾಗಿವೆ. ಗಿಡಗಳಲ್ಲಿ ಹುಡುಕಿಕೊಂಡು ಕಾಫಿ ಕೊಯ್ಯುವ ಪರಿಸ್ಥಿತಿ ಕಾರ್ಮಿಕರಿಗೆ ಎದುರಾಗಿದೆ.

ವಿರಾಜಪೇಟೆ ತಾಲ್ಲೂಕಿನ ಗಡಿಭಾಗ ತಿತಿಮತಿ, ದೇವರಪುರ, ಕೋಣನಕಟ್ಟೆ, ಸುಳುಗೋಡು, ಬಾಳೆಲೆ, ಪೊನ್ನಪ್ಪಸಂತೆ, ಮಾಯಮುಡಿ, ಗೋಣಿಕೊಪ್ಪಲು ಸಮೀಪದ ನಲ್ಲೂರು, ಕಿರುಗೂರು, ಬೆಸಗೂರಿನಲ್ಲಿ ಕಾಫಿ ಇಳುವರಿ ಕುಸಿದಿದೆ.

ಜನವರಿ ತಿಂಗಳು ಬಂದರೆ ಎಲ್ಲರ ಮನೆ ಅಂಗಳದಲ್ಲೂ ಕಾಫಿ ಬೀಜದ ರಾಶಿ ಇರುತ್ತಿತ್ತು. ಆದರೆ, ಈಗ ಇಡೀ ತೋಟ ಹುಡುಕಾಡಿದರೂ ಒಂದೆರಡು ಚೀಲ ಕಾಫಿ ಸಿಗುತ್ತಿಲ್ಲ. ಈ ಪರಿಸ್ಥಿತಿ ಇದುವರೆಗೆ ಬಂದಿರಲಿಲ್ಲ. ಕಳೆದ ವರ್ಷ ಕಾಡಿದ ಬರಗಾಲವೇ ಇದಕ್ಕೆ ಕಾರಣ ಎನ್ನುವುದು ಬೆಳೆಗಾರರ ಅಭಿಪ್ರಾಯ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ತಿತಿಮತಿ ಭಾಗಕ್ಕೆ ಕಳೆದ ವರ್ಷ 23 ಇಂಚು ಮಳೆಬಿದ್ದಿತ್ತು. ಬಾಳೆಲೆ, ಪೊನ್ನಪ್ಪಸಂತೆ, ಸುಳುಗೋಡು ಭಾಗಗಳೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಭೂಮಿಯಲ್ಲಿ ತೇವಾಂಶವಿಲ್ಲದೆ ಕಾಫಿ ಗಿಡದ ರೆಂಬೆ ಬೆಳೆಯಲಿಲ್ಲ. ಕೆಲವು ಕಡೆ ಬೆಳೆದರೂ ಹೂ ಬಿಡಲಿಲ್ಲ. ಬಿಟ್ಟ ಹೂಗಳೂ ತೇವಾಂಶದ ಕೊರತೆಯಿಂದ ಉದುರಿದವು. ಇದರಿಂದಾಗಿ ಕಾಫಿ ಫಸಲು ಕ್ಷೀಣಿಸಿದೆ ಎಂದು ಬೆಳೆಗಾರ ತಿತಿಮತಿ ಕೀಕಿರ ವಸಂತ ಹೇಳುತ್ತಾರೆ.

‘ತಿತಿಮತಿ ಭಾಗಕ್ಕೆ ವಾಡಿಕೆಯಂತೆ 50ರಿಂದ 60 ಇಂಚು ಮಳೆ ಬೀಳುತ್ತಿತ್ತು. ಆ ದಿನಗಳಲ್ಲಿ ಎಕರೆಗೆ 30ರಿಂದ 40 ಚೀಲದಷ್ಟು ಕಾಫಿ ಇಳುವರಿ ಬರುತ್ತಿತ್ತು. ಆದರೆ, ಕಳೆದ ವರ್ಷ 23 ಇಂಚು ಮಳೆ ಬಂದಿದ್ದು, ಎಕರೆಗೆ 2ರಿಂದ 4 ಚೀಲದಷ್ಟು ಕಾಫಿ ಇಳುವರಿ ಸಿಗುತ್ತಿದೆ. ಸೆಪ್ಟೆಂಬರ್‌ನಲ್ಲಿ ಗಿಡಕ್ಕೆ ರಸಗೊಬ್ಬರ ಕೊಡಬೇಕಿತ್ತು. ಮಳೆ ಕೊರತೆಯಿಂದ ಕೊಡಲಾಗಲಿಲ್ಲ. ಇದರಿಂದ ಗಿಡದ ರೆಂಬೆ ಬೆಳೆಯಲಿಲ್ಲ. ಕಳೆದ ವರ್ಷದ ಜನವರಿಯಲ್ಲಿ ಮಳೆ ಬಿದ್ದು ಕಾಫಿ ಹೂ ಸಮೃದ್ಧಿಯಾಗಿ ಬಂದರೂ ಗಿಡದಲ್ಲಿ ಹೂ ನಿಲ್ಲಲಿಲ್ಲ’ ಎಂದು ನೋಕ್ಯ ಗ್ರಾಮದ ಚೆಪ್ಪುಡೀರ ಕಾರ್ಯಪ್ಪ ಇಳುವರಿ ಕ್ಷೀಣವಾದ ಕಾರಣ ವಿವರಿಸಿದರು.

ಕಾರ್ಮಿಕರಿಗೆ ಕೂಲಿ ಕೊಡಲಾಗದ ಸ್ಥಿತಿ ಎದುರಾಗಿದೆ ಎಂಬ ಆತಂಕ ನಲ್ಲೂರಿನ ಪುಳ್ಳಂಗಡ ನಟೇಶ್ ಅವರದು.

ತಿತಿಮತಿ ಭಾಗದಲ್ಲಿ 23 ಇಂಚು ಮಳೆ

ಎಕರೆಗೆ 2ರಿಂದ 4 ಚೀಲ ಇಳುವರಿ

ಹಿಂದೆಂದೂ ಕಂಡರಿಯದ ನಷ್ಟ; ಬೆಳೆಗಾರರ ಅಳಲು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry